ಹುಬ್ಬಳ್ಳಿ: ಮಹಾರಾಜ ಟ್ರೋಫಿ ಕೆಎಸ್ ಸಿಎ ಟಿ 20 ಕ್ರಿಕೆಟ್ ಪಂದ್ಯಾವಳಿಯ ಟ್ರೋಫಿ ಅನಾವರಣ ಹಾಗೂ ಹುಬ್ಬಳ್ಳಿ ಟೈಗರ್ಸ್ ತಂಡದ ಘೋಷಣೆ ಕಾರ್ಯಕ್ರಮ ಇಲ್ಲಿನ ಹೊಟೇಲ್ ಡೆನಿಸನ್ಸ್ ನಲ್ಲಿ ನಡೆಯಿತು.
ಕೆಎಸ್ ಸಿಎ ಪ್ರಧಾನ ಕಾರ್ಯದರ್ಶಿ ಸಂತೋಷ ಮೆನನ್ ಇನ್ನಿತರರು ಟ್ರೋಫಿ ಅನಾವರಣಗೊಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂತೋಷ ಮೆನನ್, 2009 ರಿಂದ ಮಹಾರಾಜ ಟ್ರೋಫಿ ಟಿ 20 ಕ್ರಿಕೆಟ್ ಪಂದ್ಯಾವಳಿ ಆರಂಭಗೊಂಡಿದೆ. ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷ ಪಂದ್ಯಾವಳಿ ನಡೆದಿರಲಿಲ್ಲ. ಈ ಬಾರಿ ಆ.6 ರಿಂದ 26 ವರಗೆ ಮೈಸೂರು, ಬೆಂಗಳೂರಿನಲ್ಲಿ ಪಂದ್ಯಗಳು ನಡೆಯಲಿವೆ. ಹುಬ್ಬಳ್ಳಿ ಮೈದಾನದಲ್ಲಿ ಪಂದ್ಯ ನಡೆಸುವ ಚಿಂತನೆಯಿತ್ತಾದರೂ ಮಳೆ ಕಾರಣಕ್ಕೆ ಕೈಬಿಡಲಾಯಿತು ಎಂದರು.
ಮಹಾರಾಜ ಟಿ 20 ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಜ್ಯದ ಆರು ವಲಯಗಳಿಂದ ಆರು ತಂಡಗಳು ಭಾಗವಹಿಸುತ್ತಿವೆ. ಅದರಲ್ಲಿ ಅಭಿಮನ್ಯು ಮಿಥುನ್ ನೇತೃತ್ವದ ಹುಬ್ಬಳ್ಳಿ ಟೈಗರ್ಸ್ ತಂಡ ಕೂಡ ಒಂದಾಗಿದೆ ಎಂದರು.
ಈ ಹಿಂದೆ ಫ್ರ್ಯಾಂಚೈಸ್ ಮಾದರಿಯಲ್ಲಿ ಪಂದ್ಯಾವಳಿ ನಡೆಸಲಾಗುತ್ತಿತ್ತು. ಅದನ್ನು ರದ್ದುಪಡಿಸಿ, ಇಡೀ ಪಂದ್ಯಾವಳಿಯನ್ನು ಕೆಎಸ್ ಸಿಎ ನಿರ್ವಹಣೆ ಮಾಡಲಿದೆ. ತಂಡ ಹಾಗೂ ಪಂದ್ಯಗಳ ವಿಚಾರದಲ್ಲಿ ಯಾವುದೇ ಹಸ್ತಕ್ಷೇಪ ಇಲ್ಲದಯೇ ವಾಣಿಜ್ಯ ರೂಪದಲ್ಲಿ ತಂಡಗಳಿಗೆ ಪ್ರಯೋಜಕತ್ವ ನೀಡಲಾಗಿದೆ. ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ ಜಿಂದಾಲ್ ಸ್ಟೀಲ್ಸ್ ಪ್ರಾಯೋಜಕತ್ವ ನೀಡುತ್ತದೆ ಎಂದರು.
ಪಂದ್ಯಾವಳಿಯಲ್ಲಿ ಯಾವುದೇ ಅಕ್ರಮ, ಬೆಟ್ಟಿಂಗ್ ಗೆ ಅವಕಾಶ ಇಲ್ಲದಂತೆ ಪ್ರತಿ ತಂಡದ ಮೇಲೆ ನಿಗಾಕ್ಕೆ ಆರು ಜನ ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಆ.7 ರಿಂದ 15 ರವರೆಗೆ ಮೈಸೂರಿನಲ್ಲಿ, ಆ.17 ರಿಂದ 26 ರವರೆಗೆ ಬೆಂಗಳೂರಿನಲ್ಲಿ ಒಟ್ಟು 21 ದಿನ ಪಂದ್ಯಾವಳಿ ನಡೆಯಲಿದೆ ಎಂದರು.
ಧಾರವಾಡ ವಲಯದಲ್ಲಿ ರಣಜಿ, ಯು-19, ಯು-25 ಇನ್ನಿತರ ಪಂದ್ಯಗಳನ್ನು ನಡೆಸಲಾಗುವುದು. ಮುಂದಿನ ವರ್ಷ ಬಿಸಿಸಿಐ ಪಂದ್ಯಗಳನ್ನು ಈ ಭಾಗದಲ್ಲಿ ನಡೆಸಲಾಗುವುದು ಎಂದರು.
ಕೆಎಸ್ ಸಿಎ ಪದಾಧಿಕಾರಿಗಳಾದ ಅವಿನಾಶ ಪೋತದಾರ,ವೀರಣ್ಣ ಸವಡಿ, ವಾಸುದೇವ, ಮುರಳೀಧರ, ಶಶಿಧರ ಇನ್ನಿತರರಿದ್ದರು.