Advertisement

ದೇವದಾಸಿ ಪದ್ಧತಿ ವಿರುದ್ಧ  ಧ್ವನಿ ಎತ್ತಿದ್ದ ಮಹಾಂತರು

04:06 PM Jul 15, 2018 | |

ಧಾರವಾಡ: ಡಾ| ಮಹಾಂತ ಸ್ವಾಮೀಜಿ ಅವರು ಸಮಾಜದ ಅನಿಷ್ಠಗಳಲ್ಲಿ ಒಂದಾದ ದೇವದಾಸಿ ಪದ್ಧತಿ ವಿರುದ್ಧ ಹೋರಾಟ ಮಾಡಿದ್ದರು ಎಂದು ಬೆಳಗಾವಿ ರುದ್ರಾಕ್ಷಿಮಠದ ಶ್ರೀ ಸಿದ್ದರಾಮ ಸ್ವಾಮೀಜಿ ಅಭಿಪ್ರಾಯಪಟ್ಟರು. ನಗರದ ಅಕ್ಕನಬಳಗದ ಶ್ರೀ ಮೃತ್ಯುಂಜಯಪ್ಪಗಳ ಭವನದಲ್ಲಿ ಗುರು ಬಸವ ಮಹಾಂತ ಟ್ರಸ್ಟ್‌ ವತಿಯಿಂದ ಆಯೋಜಿಸಲಾಗಿದ್ದ ಶರಣೋತ್ಸವ ಹಾಗೂ ಡಾ|ಮಹಾಂತ ಸ್ವಾಮೀಜಿ ಅವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಯುಗ ಪುರುಷ ಮಹಾಂತ ಶಿವಯೋಗಿಗಳು ಗ್ರಂಥ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

Advertisement

ತಾತ್ವಿಕ ಆಚಾರ ವಿಚಾರಗಳನ್ನು ಅನುಷ್ಠಾನಕ್ಕೆ ತರಲು ಪ್ರವಚನಗಳ ಮೂಲಕ ಹಗಲಿರುಳು ಶ್ರಮಿಸಿದ್ದ ಶ್ರೀಗಳು, ದೇವದಾಸಿ ಪದ್ದತಿ ವಿರುದ್ಧ ಹೋರಾಟ ಮಾಡಿದ್ದರು. ಜಾತಿ, ಮತ, ಪಂಥ ಎನ್ನದೆ ಸರ್ವ ಜನಾಂಗದವರಿಗೆ ಮಾರ್ಗದರ್ಶನ ಮಾಡುವ ಮೂಲಕ ರಾಜ್ಯ ಅಂತಾರಾಜ್ಯದಲ್ಲಿ ಸಾಮಾಜಿಕ ಕ್ರಾಂತಿ ಮೂಡಿಸಿದ್ದರು. ಶ್ರೀಗಳು ವ್ಯವಹಾರಿಕ ಜ್ಞಾನಕ್ಕೆ ಮಹತ್ವ ನೀಡದೇ ಜನರ ಮನಕ್ಕೆ ಜ್ಞಾನ ನೀಡುವಲ್ಲಿ ಮುಂದಾಗಿದ್ದರು. ಅವರು ಯಾವಾಗಲೂ ಸಮಾಜದ ಬದಲಾವಣೆ ಬಯಸುತ್ತಿದ್ದರು. ಮೂಢನಂಬಿಕೆ, ಕಂದಾಚಾರ ವಿರುದ್ಧ ಹೋರಾಟ ನಡೆಸಿ ಏಕದೇವೋಪಾಸನೆಯ ಮಹತ್ವದ ಜಾಗೃತಿ ಮೂಡಿಸಿದರು. ಇಂತಹ ಶ್ರೀಗಳು ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ ತಾತ್ವಿಕವಾಗಿ ನಮ್ಮ ಜೊತೆಗೆ ನಿರಂತರವಾಗಿ ಇದ್ದಾರೆ ಎಂದರು.

ವಿಜಯ ಮಹಾಂತೇಶ್ವರ ಸಂಸ್ಥಾನಮಠದ ಶ್ರೀ ಗುರು ಮಹಾಂತ ಸ್ವಾಮೀಜಿ ಮಾತನಾಡಿ, ಲಿಂ.ಡಾ| ಮಹಾಂತ ಸ್ವಾಮೀಜಿ ಅವರು ಬಸವ ತತ್ವದ ನಿಜವಾದ ಪ್ರತಿಪಾದಕರಾಗಿದ್ದರು. ಶ್ರೀಗಳು ನಮ್ಮ ಪಾಲಿನ ಆದರ್ಶ, ಚೈತನ್ಯ. ಅವರ ಮೌಲ್ಯಗಳೇ ನಮ್ಮ ಬದುಕಿನ ಆದರ್ಶಗಳು.ಅವರ ಅಗಲುವಿಕೆಯಿಂದ ಈ ನಾಡು ಬಸವ ಸಿದ್ಧಾಂತದ ಶ್ರೇಷ್ಠ ಪ್ರತಿಪಾದಕರನ್ನು ಕಳೆದುಕೊಂಡಂತಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಅನುಭವ ಮಂಟಪದ ಸಂಚಾಲಕ ವಿ.ಸಿದ್ದರಾಮಣ್ಣ ಮಾತನಾಡಿ, ಹತ್ತನೇ ವಯಸ್ಸಿನಲ್ಲಿಯೇ ಸನ್ಯಾಸ ದೀಕ್ಷೆ ಪಡೆದು ಚಿಕ್ಕಂದಿನಿಂದಲೇ ಸಮಾಜ ಕಾರ್ಯಕ್ಕೆ ಹಗಲಿರುಳು ದುಡಿದಿದ್ದ ಅವರು ಸಮಾಜವನ್ನು ಕಾಡಿ ತಿನ್ನುತ್ತಿದ್ದ ದುಶ್ಚಟಗಳ ವಿರುದ್ಧ ಸಮರ ಸಾರಿ ‘ಮಹಾಂತ ಜೋಳಿಗೆ’ಹಿಡಿದು ದುಶ್ಚಟಗಳ ನಿರ್ಮೂಲನೆಗೆ ಮುಂದಾಗಿದ್ದರು. ದುಶ್ಚಟಗಳ ವಿರುದ್ಧ ಬಹು ದೊಡ್ಡ ಆಂದೋಲನ ಆರಂಭಿಸಿ ಲಕ್ಷಾಂತರ ಜನರನ್ನು ಚಟದಿಂದ ಮುಕ್ತರನ್ನಾಗಿ ಮಾಡಿ ಅವರನ್ನು ಸನ್ಮಾರ್ಗಕ್ಕೆ ತಂದಿದ್ದರು ಎಂದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಟ್ರಸ್ಟ ವತಿಯಿಂದ ಸನ್ಮಾನಿಸಲಾಯಿತು.ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ನಾಗಲಿಂಗ ಶರಣರು, ಚನ್ನಬಸವ ಸ್ವಾಮೀಜಿ, ಬಸವ ಬೆಳಗು ಪತ್ರಿಕೆ ಸಂಪಾದಕ ಪ್ರೊ |ಸಿದ್ದಣ್ಣ ಲಂಗೋಟಿ ಇದ್ದರು. ಟ್ರಸ್ಟ್‌ ಅಧ್ಯಕ್ಷ ರಮೇಶ ತುಂಬರಗುದ್ದಿ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಗುರುಬಸವ ನಿರೂಪಿಸಿದರು. ಅಕ್ಕನಾಗಮ್ಮ ಅಕ್ಕನ ಬಳಗದ ಸದಸ್ಯರು ವಚನ ಪ್ರಾರ್ಥನೆ ಮಾಡಿದರು. ರಾಜೇಶ್ವರಿ ತುಂಬರಗುದ್ದಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next