Advertisement
ಧಾರವಾಡ: ಹರಿಯುವ ಶುದ್ಧ ಹಳ್ಳದ ನೀರಿನಲ್ಲಿ ತೇಲಿ ಬರುತ್ತಿರುವ ಪ್ಲಾಸ್ಟಿಕ್ ಬಾಟಲ್‌ಗಳು, ಜಾನುವಾರು ಮೇಯುವ ಅಡವಿ ಸೇರುತ್ತಿರುವ ಸಾರಾಯಿ ಟೆಟ್ರಾ ಪ್ಯಾಕೇಟ್‌ಗಳು, ಅಶ್ವತ್ಥ, ಆಲ ಮತ್ತು ಅತ್ತಿ ಮರಗಳ ಬುಡ ಸೇರುತ್ತಿರುವ ಒಡೆದ ದೇವರ ಪೋಟೋಗಳ ಗಾಜುಗಳು.. ಒಟ್ಟಿನಲ್ಲಿ ಮಹಾನವಮಿಗೆ ತಮ್ಮ ತಮ್ಮ ಮನೆಗಳು ಭಾರೀ ಸ್ವತ್ಛವಾಗಿಟ್ಟುಕೊಳ್ಳುವವರು, ಮನೆಯಲ್ಲಿ ಬೇಡವಾದ ವಸ್ತುಗಳನ್ನು ತಂದು ಕಿರು ಜಲಗಾವಲುಗಳಿಗೆ ಹಾಕಿ ಮಲೀನ ಮಾಡುತ್ತಿದ್ದಾರೆ.
Related Articles
Advertisement
ಪ್ರತಿದಿನ 5.6 ಟನ್‌ನಷ್ಟು ಘನತ್ಯಾಜ್ಯ: ಸರ್ಕಾರಿ ಲೆಕ್ಕದಲ್ಲಿ ಪ್ರತಿದಿನ ಜಿಲ್ಲೆಯಲ್ಲಿ ಅಂದರೆ ಹುಬ್ಬಳ್ಳಿ -ಧಾರವಾಡ ಅವಳಿ ನಗರ ಸೇರಿದಂತೆ ಒಟ್ಟು 5.6 ಟನ್‌ನಷ್ಟು ಘನತ್ಯಾಜ್ಯ ಸೃಷ್ಟಿಯಾಗುತ್ತಿದೆ. ಇದರಲ್ಲಿ ಪ್ಲಾಸ್ಟಿಕ್, ಅಬ್ರಕ್, ಕಟ್ಟಡ ತ್ಯಾಜ್ಯ, ವೈದ್ಯಕೀಯ ತ್ಯಾಜ್ಯ ಎಲ್ಲವೂ ಸೇರಿದೆ. ಪ್ರಕೃತಿ ಜತೆ ಮತ್ತೆ ಬೆರೆಯುವ ಅಂದರೆ ಕೊಳೆತು ಗೊಬ್ಬರವಾಗುವ ತ್ಯಾಜ್ಯ ಪ್ರತಿದಿನ 25 ಮೆಟ್ರಿಕ್ ಟನ್‌ನಷ್ಟು ಉತ್ಪಾದನೆಯಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆಗೆ ಸದ್ಯಕ್ಕೆ 250 ಗ್ರಾಂ ಅಂದರೆ ಪ್ರತಿ ನಾಲ್ಕು ಮನೆಗೆ ಒಂದು ಕೆ.ಜಿ. ಒಟ್ಟು ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಇದರಲ್ಲಿ ಘನತ್ಯಾಜ್ಯ ಪ್ರಮಾಣ ಇನ್ನು ಕಡಿಮೆಯಾಗಿದೆ. ಸರಾಸರಿ ಪ್ರತಿ ಕುಟುಂಬ ಪ್ರತಿದಿನ 10 ಗ್ರಾಂ ಘನತ್ಯಾಜ್ಯ ಉತ್ಪಾದನೆ ಮಾಡುತ್ತಿದ್ದು, ತಿಂಗಳಿಗೆ 300 ಗ್ರಾಂ, ವರ್ಷಕ್ಕೆ 3.5 ಕೆ.ಜಿ.ಯಷ್ಟು ಘನತ್ಯಾಜ್ಯ ವಿಸರ್ಜಿಸುತ್ತಿವೆ ಎಂದು ಅಂದಾಜು ಮಾಡಲಾಗಿದೆ. ಜಿಲ್ಲೆಯಲ್ಲಿ ಪಟ್ಟಣ ಮತ್ತು ಅವಳಿ ನಗರ ಹೊರತು ಪಡಿಸಿ ಒಟ್ಟು 1.60 ಲಕ್ಷ ಕುಟುಂಬಗಳಿದ್ದು, ಸರಾಸರಿ 5.6 ಟನ್ ನಷ್ಟು ಒಟ್ಟು ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಈಗಾಗಲೇ ಇದನ್ನು ವಿಲೇವಾರಿ ಮಾಡಲು ಗ್ರಾಪಂ ಮಟ್ಟದಲ್ಲಿ ಸಭೆ ನಡೆಸಿ ತಿಳಿವಳಿಕೆ ನೀಡಲಾಗಿದೆ ಎನ್ನುತ್ತಿದೆ ಜಿಲ್ಲಾ ಪಂಚಾಯಿತಿ.
ನಿಂತಿಲ್ಲ ಪ್ಲಾಸ್ಟಿಕ್ ಹಾವಳಿ: ಇನ್ನು ಹುಬ್ಬಳ್ಳಿ-ಧಾರವಾಡ ಅವಳಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಅಧಿಕಾರಿಗಳು ಎರಡು ವರ್ಷಗಳ ಹಿಂದೆ ಪಣ ತೊಟ್ಟು ಕೆಲಸ ಮಾಡಿದರು. ಪರಿಣಾಮ ಒಂದಿಷ್ಟು ದಿನ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಿತ್ತು. ಆದರೆ ಮತ್ತೆ ಇದೀಗ ನಗರಗಳಲ್ಲಿ ಅಲ್ಲಲ್ಲಿ ಪ್ಲಾಸ್ಟಿಕ್ ಹಾವಳಿ ಹೆಚ್ಚಾಗುತ್ತಿದೆ. ಈ ಹಾವಳಿ ಹಳ್ಳಿಗಳನ್ನು ಬಿಟ್ಟಿಲ್ಲ. ನಗರದಲ್ಲಿ ದಂಡ ಹಾಕುವ ಭಯವಾದರೂ ವ್ಯಾಪಾರಸ್ಥರಿಗೆ ಇದೆ. ಆದರೆ ಹಳ್ಳಿಗಳಲ್ಲಿ ಯಾವುದೇ ಭಯವಿಲ್ಲ. ಹೀಗಾಗಿ ಇಲ್ಲಿ ಪ್ಲಾಸ್ಟಿಕ್ ಜಮಾನಾ ಎಗ್ಗಿಲ್ಲದೇ ಸಾಗಿದೆ. ಜತೆಗೆ ಗುಟಕಾ, ಸಾರಾಯಿ ಟೆಟ್ರಾ ಪ್ಯಾಕ್ ಗಳು, ತಂಪು ಪಾನೀಯಗಳ ಬಾಟಲುಗಳು ಸೇರಿದಂತೆ ಎಲ್ಲವೂ ಇದೀಗ ಹಳ್ಳಿಗಳಲ್ಲಿ ಇ-ಕಸವಾಗಿ ಅರ್ಥಾರ್ಥ ಗಣತ್ಯಾಜ್ಯವಾಗಿ ಪೀಡಿಸುತ್ತಿದೆ.
144ರಲ್ಲಿ 44 ನಿರ್ಮಾಣ: ಇನ್ನು ಜಿಲ್ಲೆಯಲ್ಲಿ ಸದ್ಯಕ್ಕೆ ಗ್ರಾಪಂ ಮಟ್ಟದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಜಿಪಂ ಮತ್ತು ಜಿಲ್ಲಾಡಳಿತ ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಕಳೆದೆರಡು ವರ್ಷಗಳಿಂದ ಅಲ್ಲಲ್ಲಿ ಘನತ್ಯಾಜ್ಯ ಘಟಕಗಳನ್ನು ಸ್ಥಾಪಿಸಲು ಯತ್ನಿಸುತ್ತಲೇ ಇವೆ. ಆದರೆ ಈವರೆಗೂ ಜಿಲ್ಲೆಯಲ್ಲಿ ಬರೀ 10 ಘನತ್ಯಾಜ್ಯ ಘಟಕಗಳು ಪರಿಪೂರ್ಣಗೊಂಡಿವೆ. ಇನ್ನುಳಿದವುಗಳು ಇನ್ನು ನಿರ್ಮಾಣ ಹಂತದಲ್ಲಿಯೇ ಇವೆ. ಈ ಪೈಕಿ ಅಂಚಟಗೇರಿ, ಹೆಬ್ಬಳ್ಳಿ, ಅಮ್ಮಿನಭಾವಿ ಸೇರಿದಂತೆ ಬೆರಳೆಣಿಕೆಯಷ್ಟು ಗ್ರಾಮಗಳಲ್ಲಿನ ಘನತ್ಯಾಜ್ಯ ವಿಲೇವಾರಿ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ.