ಬೆಂಗಳೂರು: ರಮೇಶ್ ಅರವಿಂದ್ , ಪ್ರೇಮಾ, ತರುಣ್ ಸುಧೀರ್ ಹಾಗೂ ನಿಶ್ವಿಕಾ ನಾಯ್ಡು ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದ ಕನ್ನಡ ಕಿರುತೆರೆಯ ʼಮಹಾನಟಿʼ(Mahanati) ಕಾರ್ಯಕ್ರಮಕ್ಕೆ ತೆರೆಬಿದ್ದಿದೆ.
ಸಾಂಸ್ಕೃತಿಕ ಕಾರ್ಯಕ್ರಮ, ಹಾಸ್ಯ, ಡ್ರಾಮಾ, ವಿಜೇತೆ ಯಾರು ಎನ್ನುವುದರ ಕುತೂಹಲದಿಂದ ʼಮಹಾನಟಿʼ ಗ್ರ್ಯಾಂಡ್ ಫಿನಾಲೆ ಮುಕ್ತಾಯ ಕಂಡಿದೆ.
ರಾಜ್ಯದ ಅನೇಕ ಕಡೆಯಿಂದ ಸ್ಪರ್ಧಿಗಳು ಭಾಗಿಯಾಗಿದ್ದರು. ಅನೇಕ ಪ್ರದರ್ಶನಗಳು ವೇದಿಕೆಯಲ್ಲಿ ತೀರ್ಪುಗಾರರನ್ನು ಭಾವನಾತ್ಮಕವಾಗಿ ಸೆಳೆದಿತ್ತು. ಕಡೆಯದಾಗಿ ಗಗನಾ, ಶ್ವೇತಾ ಭಟ್, ಧನ್ಯಶ್ರೀ, ಪ್ರಿಯಾಂಕ, ಆರಾಧನಾ ಭಟ್ ಐವರು ಫಿನಾಲೆ ವೇದಿಕೆಗೆ ಹತ್ತಿದ್ದರು. ಈ ಐವರಲ್ಲಿ ಒಬ್ಬರಿಗೆ ʼಮಹಾನಟಿʼ ಚಿನ್ನದ ಕಿರೀಟ ಲಭಿಸಿದೆ.
ಐವರಲ್ಲಿ ಕೊನೆಯದಾಗಿ ತರೀಕೆರೆಯ ಧನ್ಯಶ್ರೀ , ಮೈಸೂರಿನ ಪ್ರಿಯಾಂಕಾ ಫಿನಾಲೆ ವೇದಿಕೆಯಲ್ಲಿ ನಿಂತಿದ್ದಾರೆ. ರಮೇಶ್ ಅರವಿಂದ್ ಒಂದಷ್ಟು ಕುತೂಹಲ ಹುಟ್ಟಿಸಿ ವಿನ್ನರ್ ಹೆಸರನ್ನು ಘೋಷಿಸಿದ್ದಾರೆ.
ಮೈಸೂರಿನ ಪ್ರಿಯಾಂಕ ʼಮಹಾನಟಿʼ ಸೀಸನ್ -1 ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಆ ಮೂಲಕ 15 ಲಕ್ಷ ಮೌಲ್ಯದ ಬಂಗಾರದ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ತರೀಕೆರೆಯ ಧನ್ಯಶ್ರೀ ರನ್ನರ್ ಅಪ್ ಆಗಿದ್ದಾರೆ. ಅವರಿಗೆ 10 ಲಕ್ಷ ರೂ. ಬಹುಮಾನವನ್ನು ಪಡೆದುಕೊಂಡಿದ್ದಾರೆ.
ಪ್ರಿಯಾಂಕ ಹಾಗೂ ಧನ್ಯಶ್ರೀ ಇಬ್ಬರು ತಮ್ಮದೇ ಆದ ನಟನಾ ಕೌಶಲ್ಯದಿಂದ ಪ್ರೇಕ್ಷಕರನ್ನು ರಂಜಿಸಿದ್ದರು.
ಇನ್ನು ʼಮಹಾನಟಿʼ ಫಿನಾಲೆ ಸ್ಪರ್ಧಿಗಳಿಗಾಗಿ ಶಾರ್ಟ್ ಫಿಲ್ಮ್ ಗಳನ್ನು ಮಾಡಲಾಗಿತ್ತು. ನಿರ್ದೇಶಕರಾದ ಜಯತೀರ್ಥ, ಶಶಾಂಕ್, ಸಂತು, ಪನ್ನಗಾಭರಣ, ಮಂನ್ಸೋರೆ ಅವರು ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದರು.
‘ಈ ಗೆಲುವು ನನ್ನದು ಮಾತ್ರವಲ್ಲ ಎಲ್ಲರದ್ದು. ಈ ಸ್ಕ್ರೀನ್ ಮೇಲೆ ನಾನು ಚೆನ್ನಾಗಿ ಕಾಣಬೇಕು ಅಂದ್ರೆ ಎಲ್ಲಾ ಟೆಕ್ನಿಷಿಯನ್ಸ್ ಕೂಡ ಕಾರಣ. ಇಂದು ವೋಟ್ ಹಾಕಿ ಇಲ್ಲಿಯ ತನಕ ತಂದು ನಿಲ್ಲಿಸಿದ ಪ್ರತಿಯೊಬ್ಬರಿಗೂ ಥ್ಯಾಂಕ್ಯೂ. ಏನೇ ಸಾಧನೆ ಮಾಡಿದರೂ ಅದು ಜೀ ಕನ್ನಡದಿಂದ ಮಾತ್ರ ಸಾಧ್ಯ. ಥ್ಯಾಂಕ್ಯೂ ಜೀ ಕನ್ನಡ’ ಎಂದು ಗೆಲುವಿನ ಬಳಿಕ ಪ್ರಿಯಾಂಕ ಹೇಳಿದರು.