ಮಹಾಲಿಂಗಪುರ: ತೀವ್ರ ಕುತೂಹಲ ಕೆರಳಿಸಿರುವ ಸಮೀಪದ ರನ್ನ ಬೆಳಗಲಿ ಪ.ಪಂ.ನ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಸದಸ್ಯೆ ರೂಪಾ ಸದಾಶಿವ ಹೊಸಟ್ಟಿ ಅಧ್ಯಕ್ಷರಾಗಿ, ಕಾಂಗ್ರೆಸ್ ಸದಸ್ಯೆ ಸಹನಾ ಸಿದ್ದು ಸಾಂಗ್ಲಿಕರ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.
ಆ.27ರ ಮಂಗಳವಾರ ಬೆಳಿಗ್ಗೆ 10 ರಿಂದ 11 ಗಂಟೆವರೆಗೆ ಇದ್ದ ನಾಮಪತ್ರ ಸಲ್ಲಿಕೆಯ ಅವಧಿಯಲ್ಲಿ ಹಿಂದುಳಿದ ವರ್ಗ ಅ ಸ್ಥಾನಕ್ಕೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಪಕ್ಷದಿಂದ ರೂಪಾ ಸದಾಶಿವ ಹೊಸಟ್ಟಿ, ಕಾಂಗ್ರೆಸ್ ಪಕ್ಷದಿಂದ ಗೌರವ್ವ ಸಂಗಪ್ಪ ಅಮಾತಿ, ನೀಲಕಂಠ ಸೈದಾಪೂರ ನಾಮಪತ್ರ ಸಲ್ಲಿಸಿದ್ದರು.
ಕೆಲ ಹೊತ್ತಿನ ಬಳಿಕ ನೀಲಕಂಠ ಸೈದಾಪೂರ ನಾಮಪತ್ರ ವಾಪಸ್ ಪಡೆದು ಕೊಂಡರು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ರೂಪಾ ಸದಾಶಿವ ಹೊಸಟ್ಟಿ, ಕಾಂಗ್ರೆಸ್ ಪಕ್ಷದ ಗೌರವ್ವ ಸಂಗಪ್ಪ ಅಮಾತಿ ನಡುವೆ ಸ್ಪರ್ಧೆ ಏರ್ಪಟ್ಟಿತು.
ಬಿಜೆಪಿಯ 5, ಪಕ್ಷೇತರ 4, ಕಾಂಗ್ರೆಸ್ ಪಕ್ಷದ ಸಹನಾ ಸಾಂಗ್ಲಿಕರ, ದ್ರಾಕ್ಷಾಯಿಣಿ ಮುರನಾಳ, ಸಂಸದ ಪಿ.ಸಿ.ಗದ್ದಿಗೌಡರ ಮತ ಸೇರಿ 11 ಮತಗಳನ್ನು ಗಳಿಸಿ ಅಧ್ಯಕ್ಷರಾಗಿ ಆಯ್ಕೆಯಾದರು. ಕಾಂಗ್ರೆಸ್ ಅಭ್ಯರ್ಥಿ ಗೌರವ್ವ ಸಂಗಪ್ಪ ಅಮಾತಿ ಅವರು ಕಾಂಗ್ರೆಸ್ 6, ಪಕ್ಷೇತರ 2, ಸಚಿವ ಆರ್.ಬಿ. ತಿಮ್ಮಾಪೂರ ಸೇರಿ 9 ಮತಗಳನ್ನು ಪಡೆದು ಪರಾಭವಗೊಂಡರು.
ಹಿಂದುಳಿದ ವರ್ಗ ಬ ಮಹಿಳಾ ಮೀಸಲಾತಿ ಇರುವ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಚುನಾಯಿತರಾದ ಸಹನಾ ಸಿದ್ದು ಸಾಂಗ್ಲಿಕರ ಅವರು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಕೆಯಾದ ಕಾರಣ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.
ಪಕ್ಷಗಳ ಬಲಾಬಲ: ಒಟ್ಟು 18 ಸದಸ್ಯರನ್ನು ಹೊಂದಿರುವ ರನ್ನಬೆಳಗಲಿ ಪ.ಪಂ.ನಲ್ಲಿ ಕಾಂಗ್ರೆಸ್ ನಿಂದ 8, ಬಿಜೆಪಿಯಿಂದ 5, ಪಕ್ಷೇತರ 5 ಸದಸ್ಯರಿದ್ದಾರೆ. 4 ಪಕ್ಷೇತರರು ಬಿಜೆಪಿ ಬೆಂಬಲಿತ, ಓರ್ವ ಪಕ್ಷೇತರ ಸದಸ್ಯ ಕಾಂಗ್ರೆಸ್ ಬೆಂಬಲಿತ ಇರುವ ಕಾರಣ ಕಾಂಗ್ರೆಸ್ 9, ಸಚಿವರ ಒಂದು ಮತ ಸೇರಿ 10 ಮತಗಳು, ಬಿಜೆಪಿ 5, 4 ಪಕ್ಷೇತರರು, ಸಂಸದರ ಒಂದು ಮತ ಸೇರಿದಂತೆ ಬಿಜೆಪಿಯಲ್ಲಿಯೂ 10 ಮತಗಳಿವೆ. ಸಂಖ್ಯಾ ದೃಷ್ಟಿಯಿಂದ ಎರಡು ಪಕ್ಷಗಳಲ್ಲಿ ಸಮಬಲವಿತ್ತು. ಅಂತಿಮ ಕ್ಷಣದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷದ ದ್ರಾಕ್ಷಾಯಿಣಿ ಮಹಾದೇವ ಮುರನಾಳ, ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಸಹನಾ ಸಿದ್ದು ಸಾಂಗ್ಲಿಕರ ಬಿಜೆಪಿಗೆ ಬೆಂಬಲಿಸಿದ್ದರಿಂದ ರನ್ನಬೆಳಗಲಿ ಪಪಂ ಗದ್ದುಗೆ ಬಿಜೆಪಿ ಮಡಿಲಿಗೆ ಸೇರಿತು.
ಇಬ್ಬರು ಬಿಜೆಪಿಗೆ ಜೈ ಎನ್ನಲು ಕಾರಣ: ಮುಧೋಳ ಮತಕ್ಷೇತ್ರ ವ್ಯಾಪ್ತಿಯ ರನ್ನ ಬೆಳಗಲಿ ಪ.ಪಂ. ಚುನಾವಣೆಯು ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಮುಧೋಳ ಕ್ಷೇತ್ರದ ಶಾಸಕರ, ಅಬಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹಾಗೂ ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಬಾಗಲಕೋಟೆ ಜಿಲ್ಲಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಧರೆಪ್ಪ ಸಾಂಗ್ಲೀಕರ ಅವರ ನಡುವಿನ ಹೊಂದಾಣಿಕೆ ಕೊರತೆ ಹಾಗೂ ರನ್ನಬೆಳಗಲಿ ಪಟ್ಟಣದ ಹಿರಿಯ ಕಾಂಗ್ರೆಸ್ ಮುಖಂಡ ಧರೆಪ್ಪ ಸಾಂಗ್ಲೀಕರ ಅವರನ್ನು ಕಾಂಗ್ರೆಸ್ ಪಕ್ಷದಲ್ಲಿ ಸಚಿವರಾದಿಯಾಗಿ ಪಟ್ಟಣದ ಯುವ ಮುಖಂಡರು ಕಡೆಗಣಿಸಿರುವ ಕಾರಣ ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾದ ದ್ರಾಕ್ಷಾಯಿಣಿ ಮಹಾದೇವ ಮುರನಾಳ, ಧರೆಪ್ಪ ಸಾಂಗ್ಲೀಕರ ಅವರ ಸೊಸೆ ಸಹನಾ ಸಿದ್ದು ಸಾಂಗ್ಲೀಕರ ಅವರು ಬಿಜೆಪಿಗೆ ಬೆಂಬಲಿಸಿರುವ ಕಾರಣವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಸಚಿವ ತಿಮ್ಮಾಪುರಗೆ ಹಿನ್ನಡೆ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕ ಕ್ಷೇತ್ರದ ರನ್ನಬೆಳಗಲಿ ಪ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಮೂಲಕ ಸಚಿವ ಆರ್.ಬಿ.ತಿಮ್ಮಾಪುರ ಅವರಿಗೆ ತೀವ್ರ ಮುಖಭಂಗದೊಂದಿಗೆ ಹಿನ್ನಡೆಯಾಗಿದೆ.
ಮುಧೋಳ ತಹಶೀಲ್ದಾರ ವಿನೋದ ಹತ್ತಳ್ಳಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಪ.ಪಂ. ಮುಖ್ಯಾಧಿಕಾರಿ ಎನ್.ಎ.ಲಮಾಣಿ ಉಪಸ್ಥಿತರಿದ್ದರು. ಮುಧೋಳ ಸಿಪಿಆಯ್ ಮತ್ತು ಪಿಎಸ್ ಆಯ್ ನೇತೃತ್ವದಲ್ಲಿ ಪೊಲೀಸರು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಭದ್ರತೆ ಒದಗಿಸಿದ್ದರು.
ಬಿಜೆಪಿ ಮುಖಂಡರ ವಿಜಯೋತ್ಸವ: ಬಿಜೆಪಿ ಅಭ್ಯರ್ಥಿ ಪ.ಪಂ. ಅಧ್ಯಕ್ಷರಾಗಿ ಆಯ್ಕೆಯಾದ್ದರಿಂದ ಸಂಸದ ಪಿ.ಸಿ.ಗದ್ದಿಗೌಡರ ನೇತೃತ್ವದಲ್ಲಿ ಬಿಜೆಪಿ ಸದಸ್ಯರು, ಮುಖಂಡರು ಬಂದಲಕ್ಷ್ಮೀ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಕೇಸರಿ ಎರಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.