Advertisement

ಮಹಾಲಿಂಗಪುರ ರುದ್ರಭೂಮಿ ಅವ್ಯವಸ್ಥೆ ಆಗರ

12:32 PM Nov 11, 2019 | Suhan S |

ಮಹಾಲಿಂಗಪುರ: ಅಸಮರ್ಪಕ ನಿರ್ವಹಣೆಯಿಂದ ಪಟ್ಟಣದ ಹಿಂದೂ ಸಮಾಜದ ರುದ್ರಭೂಮಿ ಅವ್ಯವಸ್ಥೆ ಆಗರವಾಗಿದ್ದು, ಬಯಲು ಶೌಚಾಲಯವಾಗಿ ಮಾರ್ಪಟ್ಟಿದೆ.

Advertisement

ಅವ್ಯವಸ್ಥೆಗಳ ಆಗರ: ಹಿಂದೂ ರುದ್ರಭೂಮಿ ಅವ್ಯವಸ್ಥೆಗಳ ಆಗರವಾಗಿದೆ. ಸ್ಮಶಾನಕ್ಕೆ ಸೂಕ್ತ ಕಾಂಪೌಂಡ್‌, ನೀರಿನ ವ್ಯವಸ್ಥೆ, ವಿದ್ಯುತ್‌ ದ್ವೀಪಗಳಿಲ್ಲ. ಒಂದೇ ಚಿತಾಗಾರ ಇರುವುದರಿಂದ ಶವ ಸಂಸ್ಕಾರಕ್ಕೆ ಬಂದವರು ಕುಳಿತುಕೊಳ್ಳಲು ನಿರ್ಮಿಸಿದ್ದ ಶೆಡ್ಡು ಹಾಳಾಗಿದೆ. ಕಸಕಡ್ಡಿ, ಮುಳ್ಳಿನ ಕಂಟಿಗಳು ಬೆಳೆದಿವೆ. ಸ್ಮಶಾನ ಗೇಟ್‌ನಿಂದ ಚಿತಾಗಾರಕ್ಕೆ ಹೋಗುವ ದಾರಿಯನ್ನೇ ಸಾರ್ವಜನಿಕರು ಬಯಲು ಶೌಚಾಲಯವನ್ನಾಗಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ಸ್ಮಶಾನದೊಳಗೆ ಹೋಗಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದಲ್ಲಿನ ಅಸಮರ್ಪಕ ಚರಂಡಿಯಿಂದಾಗಿ ಕೊಳಚೆ ನೀರು ಸಹ ಸ್ಮಶಾನದೊಳಗೆ ಶೇಖರಣೆಯಾಗುತ್ತಿದೆ. ಸ್ಮಶಾನ ತ್ಯಾಜ್ಯ ಘಟಕವೋ?  ಸಂಪೂರ್ಣ ಬಯಲು ಶೌಚಾಲಯವೋ ? ಎನ್ನುವಷ್ಟರ ಮಟ್ಟಿಗೆ ಹದಗೆಟ್ಟಿದೆ.

ಸಂಸ್ಕಾರಕ್ಕೆ ಬಂದಾಗ ಮಾತ್ರ ಅಭಿವೃದ್ಧಿ ಚಿಂತೆ: ಪ್ರತಿ ಬಾರಿಯು ಶವಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ಬಂದಾಗ ಮಾತ್ರ ಅಭಿವೃದ್ಧಿ ಚಿಂತನೆ-ಚರ್ಚೆ ನಡೆಯುತ್ತದೆ. ಸ್ಮಶಾನದಿಂದ ಹೊರಬಂದು ಮತ್ತೇ ತಮ್ಮ ತಮ್ಮ ಕಾಯಕಗಳಲ್ಲಿ ನಿರತರಾಗಿ, ಸ್ಮಶಾನದ ಅಭಿವೃದ್ಧಿಯನ್ನೇ ಮರೆಯುತ್ತಿದ್ದಾರೆ.

ಸಂಘ-ಸಂಸ್ಥೆಗಳಿಂದ ಸ್ವಚ್ಛತೆ: ಕಳೆದ ಹಲವಾರು ವರ್ಷಗಳಿಂದ ಪಟ್ಟಣದಲ್ಲಿನ ಹಿಂದೂಪರ ವಿವಿಧ ಸಂಘಟನೆ-ಸಂಸ್ಥೆಗಳ ಪದಾ ಧಿಕಾರಿಗಳು ಹಿಂದೂ ರುದ್ರಭೂಮಿಯಲ್ಲಿ ಸ್ವತ್ಛತಾ ಅಭಿಯಾನ ಹಮ್ಮಿಕೊಂಡಿದ್ದಾರೆ. ಆದರೆ, ಸ್ವಚ್ಛತೆ ಮತ್ತು ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಪುರಸಭೆ ನಿರ್ಲಕ್ಷ್ಯ ವಹಿಸಿದೆ.

ಒಗ್ಗಟ್ಟಿನ ಕೊರತೆ: ರುದ್ರಭೂಮಿಯ ಕಾಯಕಲ್ಪ ಮತ್ತು ಅಭಿವೃದ್ಧಿ ವಿಷಯದಲ್ಲಿಹಿಂದೂ ಸಮಾಜದಲ್ಲಿ‌ ಒಗ್ಗಟ್ಟಿನ ಕೊರತೆ ಹಾಗೂ ನಿರಾಸಕ್ತಿಯೇ ಅವ್ಯವಸ್ಥೆಗೆ ಮೂಲ ಕಾರಣವಾಗಿದೆ. ಹಿಂದೂ ಸ್ಮಶಾನ ಅಭಿವೃದ್ಧಿ ಸಮಿತಿ ಸ್ಮಶಾನದಲ್ಲಿ ಶಿವರಾತ್ರಿ ಕಾರ್ಯಕ್ರಮ, ಪುರಸಭೆಗೆ ಮನವಿ ಸಲ್ಲಿಕೆಗೆ ಮಾತ್ರ ಸೀಮಿತವಾಗಿದೆ ಎಂಬಂತೆ ತೋರುತ್ತಿದೆ.

Advertisement

ಸ್ಮಶಾನ ಅಭಿವೃದ್ಧಿಗೆ ಕ್ರಿಯಾಯೋಜನೆ ಈ ವರ್ಷ ಸತತ ಮಳೆಯ ಪರಿಣಾಮ ಸ್ಮಶಾನದಲ್ಲಿ ಕಸ-ಗಿಡಗಂಟಿ ಬೆಳೆದಿದೆ. ಕಸವನ್ನು ಸ್ವತ್ಛತೆ ಮಾಡುತ್ತೇವೆ. ಜೊತೆಗೆ ಸ್ಮಶಾನದ ಕಾಂಪೌಂಡ್‌, ಗರಸು ಹಾಕಲು, ಇನ್ನೊಂದು ಚಿತಾಗಾರ, ಒಂದು ಶೆಡ್‌ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಶಾಸಕರ ವಿಶೇಷ ಅನುದಾನದಲ್ಲಿ ಒಂದು ಕೋಟಿ ರೂ ವೆಚ್ಚದ ಕಾಮಗಾರಿಗೆ ಕ್ರಿಯಾಯೋಜನೆ ಮತ್ತು ಅಂದಾಜು ಪತ್ರಿಕೆ ಸಿದ್ಧಪಡಿಸಿ ಸರಕಾರಕ್ಕೆ ಕಳುಹಿಸುತ್ತಿದ್ದೇವೆ. ಜತೆಗೆ ಪುರಸಭೆ ಅನುದಾನದಲ್ಲಿ ಸ್ಮಶಾನದಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ 10 ಲಕ್ಷ ರೂ.ಕ್ರಿಯಾಯೋಜನೆಯಲ್ಲಿ ಸೇರಿಸಿದ್ದೇವೆ. ಬಾಬುರಾವ್‌ ಕಮತಗಿ, ಮುಖ್ಯಾಧಿಕಾರಿಗಳು, ಪುರಸಭೆ

 

 -ಚಂದ್ರಶೇಖರ ಮೋರೆ

Advertisement

Udayavani is now on Telegram. Click here to join our channel and stay updated with the latest news.

Next