ಮಹಾಲಿಂಗಪುರ: ಪಟ್ಟಣವನ್ನು ತಾಲೂಕು ಕೇಂದ್ರ ಮಾಡಬೇಕೆಂದು ನಡೆದಿರುವ ಹೋರಾಟವು ಶುಕ್ರವಾರ 310 ದಿನಗಳನ್ನು ಪೂರೈಸಿದೆ. ರಾಜ್ಯ ಸರ್ಕಾರ ಫೆಬ್ರವರಿ 17 ರ ಶುಕ್ರವಾರ ಮಂಡಿಸಿದ ಬಜೆಟ್ ನಲ್ಲಿ ಮಹಾಲಿಂಗಪುರ ತಾಲೂಕು ಘೋಷಣೆ ಆಗುತ್ತದೆ ಎಂಬ ನಿರೀಕ್ಷೆಯು ಸುಳ್ಳಾಯಿತು.
ತಾಲೂಕು ಘೋಷಣೆಯಾಗದ ಕಾರಣ ಅಸಮಾಧಾನಗೊಂಡ ಹೋರಾಟ ಸಮಿತಿ ಹಾಗೂ ಸಾರ್ವಜನಿಕರು ಶುಕ್ರವಾರ ಮಧ್ಯಾಹ್ನ ಚೆನ್ನಮ್ಮ ಸರ್ಕಲ್ ದಲ್ಲಿ ದಿಡೀರ್ ರಸ್ತೆ ತಡೆಯೊಂದಿಗೆ ಮುಷ್ಕರ ನಡೆಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತೇರದಾಳ ಶಾಸಕ ಸಿದ್ದು ಸವದಿ, ಸಚಿವ ಗೋವಿಂದ ಕಾರಜೋಳ, ಸಂಸದ ಪಿ ಸಿ ಗದ್ದಿಗೌಡರ ಇನ್ನಿತರ ರಾಜಕೀಯ ಮುಖಂಡರ ವಿರುದ್ಧ ಹೋರಾಟಗಾರರು ವಾಗ್ದಾಳಿ ನಡೆಸಿದರು.
310 ದಿನಗಳವರೆಗೆ ಮಹಾಲಿಂಗಪುರ ಮತ್ತು ಸುತ್ತಲಿನ ಹಳ್ಳಿಗಳ ಜನತೆಯ ಹೋರಾಟಕ್ಕೆ ಸರ್ಕಾರ ಮಾನ್ಯತೆ ನೀಡದೆ ಪ್ರಜಾಪ್ರಭುತ್ವದ ವಿರುದ್ಧವಾಗಿ ನಡೆದುಕೊಂಡಿದೆ. ಕಳೆದ 30 ವರ್ಷಗಳ ಬೇಡಿಕೆಗೆ ಮನ್ನಣೆ ಇಲ್ಲವಾಗಿದೆ ಎಂದು ಹೋರಾಟ ಸಮಿತಿ ಕಾರ್ಯದರ್ಶಿ ಚನಬಸು ಹುರಕಡ್ಲಿ ಸರ್ಕಾರದ ವಿರುದ್ಧ ಹರಿಹಾಯ್ದರು.
ತೇರದಾಳ ಕ್ಷೇತ್ರದ ರಾಜಕೀಯದಲ್ಲಿ ಸಕ್ರಿಯವಾಗಿರಬೇಕಾದರೆ ಶಾಸಕ ಸವದಿ ತಾಲೂಕು ಹೋರಾಟಗಾರರ ಪರ ನಿಂತು ಸರ್ಕಾರಕ್ಕೆ ರಾಜೀನಾಮೆ ನೀಡಿ ಮಹಾಲಿಂಗಪುರ ತಾಲೂಕು ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಅರ್ಜುನ್ ಹಲಗಿಗೌಡರ ಶಾಸಕ ಸಿದ್ದು ಸವದಿ ಅವರಿಗೆ ಒತ್ತಾಯಿಸಿದರು.
ಚನ್ನಮ್ಮ ವೃತ್ತದಲ್ಲಿ ಟೈಯರಗೆ ಬೆಂಕಿಹಚ್ಚಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಗೋವಿಂದ ಕಾರಜೋಳ, ತೇರದಾಳ ಶಾಸಕ ಸಿದ್ದು ಸವದಿ ಅವರ ಭಾವಚಿತ್ರಗಳನ್ನು ಸುಟ್ಟು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ಫೆ.20 ರಂದು ಹೋರಾಟ ಸಮಿತಿ, ಪಟ್ಟಣ ಮತ್ತು ಹಳ್ಳಿಗಳ ಪ್ರಮುಖರು, ಸಾರ್ವಜನಿಕರು ಸಭೆ ಸೇರಿ ಹೋರಾಟದ ಮುಂದಿನ ರೂಪರೇಶೆಗಳ ಕುರಿತು ನಿರ್ಧಾರ ಕೈಗೊಳ್ಳಲಾಗುವದು ಎಂದು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ ತಿಳಿಸಿದರು.
ಹೋರಾಟ ಸಮಿತಿಯ ನಿಂಗಪ್ಪ ಬಾಳಿಕಾಯಿ, ಹಣಮಂತ ಜಮಾದಾರ, ಸಿದ್ದು ಶಿರೋಳ, ರಪೀಕ್ ಮಾಲದಾರ, ಶಿವಲಿಂಗ ಟಿರ್ಕಿ, ರಾಜೇಂದ್ರ ಮಿರ್ಜಿ, ಚಂದ್ರಶೇಖರ ಮುಂಡಗನೂರ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ: ಉತ್ತರ ಕರ್ನಾಟಕ ಮಂಡಕ್ಕಿ ಗಿರ್ಮಿಟ್ ಈ ತರ ಮಾಡಿ ನೋಡಿ… ಏನಂತೀರಿ…