ಮಹಾಲಿಂಗಪುರ: ಆ.23ರಂದು ಜರುಗಿದ ಮಹಾಲಿಂಗಪುರ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಸಮಯದಲ್ಲಿ ಕ್ಷೇತ್ರದಲ್ಲಿರದೇ ಮೂರು ದಿನ ಮೊದಲು ಬೆಂಗಳೂರಿಗೆ ಹೋಗಿ, ರಾಷ್ಟ್ರೀಯ ಪಕ್ಷ ಬಿಜೆಪಿಯಿಂದ ಯಾವುದೇ ನಾಮಪತ್ರ ಸಲ್ಲಿಸಲು ಆಗದಂತೆ ನೋಡಿಕೊಂಡು, ಈಗ ಬಿಜೆಪಿ ಸದಸ್ಯರ ಮೇಲೆ ಪಕ್ಷದ್ರೋಹದ ಆರೋಪ ಮಾಡಿರುವ ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟಿಸಬೇಕೆಂದು ಆಗ್ರಹಿಸಿ ಪುರಸಭೆಯ 7 ಜನ ಸದಸ್ಯರು ಬುಧವಾರ ಸಂಜೆ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಅವರಿಗೆ ದೂರು ಸಲ್ಲಿಸಿದ್ದಾರೆ.
ಪುರಸಭೆಯಲ್ಲಿ ಬಿಜೆಪಿಯಿಂದ ಚುನಾಯಿತ 13 ಸದಸ್ಯರಿದ್ದು, ಅದರಲ್ಲಿ 3 ಬಂಡಾಯ ಸದಸ್ಯರು 2020 ರಿಂದ ಕಾಂಗ್ರೆಸ್ ಪಕ್ಷದೊಂದಿಗೆ ಇದ್ದಾರೆ. ಇದುವರೆಗೆ ಅವರಿಗೆ ಪಕ್ಷದಿಂದ ಯಾವುದೇ ಶಿಸ್ತುಕ್ರಮ ಜರುಗಿಸಿಲ್ಲ. ಸದ್ಯ 10 ಸದಸ್ಯರು, ಶಾಸಕರು ಸಂಸದರು ಸೇರಿ ಪುರಸಭೆಯಲ್ಲಿ 12 ಮತಗಳಿದ್ದವು. ಒಂದು ರಾಷ್ಟ್ರೀಯ ಪಕ್ಷವಾಗಿ ನಾವು ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗೆ ಸ್ಪರ್ಧಿಸುವುದು ಅವಶ್ಯವಾಗಿತ್ತು. ಅಂತಹದರಲ್ಲಿ ಪಕ್ಷದ ಮತ್ತು ತೇರದಾಳ ಮತಕ್ಷೇತ್ರದ ಜವಾಬ್ದಾರಿ ಸ್ಥಾನದಲ್ಲಿರುವ ಶಾಸಕರು ನಾಲ್ಕು ದಿನ ಮುಂಚಿತವಾಗಿ ಬೆಂಗಳೂರಿನಲ್ಲಿ ಹೋಗಿ ಕುಳಿತುಕೊಂಡಿರುತ್ತಾರೆ. ಚುನಾವಣೆಯ ಹಿಂದಿನ ದಿನ ನಾವು ಜಿಲ್ಲಾಧ್ಯಕ್ಷರಾದ ತಮ್ಮ ಗಮನಕ್ಕೆ ತಂದ ನಂತರ ಶಾಸಕರು ಸಿಟ್ಟಿನಿಂದ ಬೆಂಗಳೂರಿನಲ್ಲಿ ಕುಳಿತು ನಮ್ಮಲ್ಲಿಯ ಕೆಲವು ಸದಸ್ಯರಿಗೆ ಫೋನ್ ಮಾಡಿ ನೀವು ಕಾಂಗ್ರೆಸ್‌ಗೆ ಬುಕ್ ಆಗಿದ್ದಿರಿ ಎಂದು ಆರೋಪಿಸುತ್ತಾರೆ.
ನಮ್ಮ ಒಬ್ಬ ಸದಸ್ಯರು ನಾನು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಸಿದ್ದನಿದ್ದೇನೆ. ನೀವು ಬಂದು ಸೂಚಕರಾಗಬೇಕು ಬನ್ನಿ ಎಂದು ಕರೆದಾಗ, ಶಾಸಕರು ಮರಳಿ ಪೋನ್ ಕರೆ ಸ್ವೀಕರಿಸದ ಕಾರಣ, ಶಾಸಕರಿಗೆ ವಾಟ್ಸ್ ಆಪ್ ಸಂದೇಶವನ್ನು ಕಳಿಸಿರುತ್ತಾರೆ. ಈ ಎಲ್ಲ ಘಟನೆಗಳಿಂದ ಶಾಸಕರು ಯಾವುದೇ ಆತಂಕ ಇಲ್ಲದೇ ಕಾಂಗ್ರೆಸ್ ಪಕ್ಷವು ಪುರಸಭೆಯಲ್ಲಿ ಅಧಿಕಾರ ಹಿಡಿಯಲು ಅನುಕೂಲ ಮಾಡಿಕೊಟ್ಟಿದ್ದಾರೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸದಂತೆ ನೋಡಿಕೊಂಡು ನಮ್ಮ ಮೇಲೆ ಪಕ್ಷ ದ್ರೋಹ ಆರೋಪ ಮಾಡಿರುವ ಶಾಸಕರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟಿಸಬೇಕೆಂದು ಒತ್ತಾಯಿಸಿ 7 ಸದಸ್ಯರು ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಅವರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.
ಬಿಜೆಪಿಯ ಸದಸ್ಯ ಪ್ರಲ್ಹಾದ ಸಣ್ಣಕ್ಕಿ ಮಾತನಾಡಿ 2020ರಲ್ಲಿ ಕಾಂಗ್ರೆಸ್ ನೊಂದಿಗೆ ಹೋದ ಮೂವರು ಬಿಜೆಪಿ ಸದಸ್ಯರ ಮೇಲೆಯೇ ಶಾಸಕರು ಇದುವರೆಗೆ ಯಾವುದೇ ಕ್ರಮವನ್ನು ಜರುಗಿಸಿಲ್ಲ. ಪಕ್ಷಕ್ಕೆ ಬದ್ದ ಇರುವ ಮತ್ತು ಯಾವುದೇ ಪಕ್ಷದ್ರೋಹ ಮಾಡದ ನಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಶಾಸಕರಿಂದ ಪಕ್ಷಕ್ಕೆ ದ್ರೋಹವಾಗಿದೆ. ಶಾಸಕರು ಕೇವಲ ಕಿವಿ ಕಚ್ಚುವ ಸದಸ್ಯರು, ಮುಖಂಡರ ಮಾತು ಕೇಳಿ ಬಿಜೆಪಿ ಪಕ್ಷದ ಸ್ಥಿತಿಯನ್ನು ಅದೋಗತಿಗೆ ತರುತ್ತಿದ್ದಾರೆ. ನಮ್ಮ ಮೇಲಿನ ಆರೋಪ ಸಾಬಿತು ಮಾಡಬೇಕು ಇಲ್ಲವೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.
ಜಿಲ್ಲಾಧ್ಯಕ್ಷರಿಗೆ ದೂರು ಸಲ್ಲಿಸುವ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಬಸವರಾಜ ಹಿಟ್ಟಿನಮಠ, ಸದಸ್ಯರಾದ ರವಿ ಜವಳಗಿ, ಬಸವರಾಜ ಚಮಕೇರಿ, ಬಿಜೆಪಿ ಮುಖಂಡರಾದ ಪ್ರಕಾಶ ಕೋಳಿಗುಡ್ಡ, ಮಹಾಲಿಂಗ ಮುದ್ದಾಪೂರ, ಚನ್ನಪ್ಪ ರಾಮೋಜಿ, ಸತೀಶ ಜುಂಝರವಾಡ, ತೇರದಾಳ ಮತಕ್ಷೇತ್ರ ಯುವ ಮೊರ್ಚಾ ಉಪಾಧ್ಯಕ್ಷ ಶಿವಾನಂದ ಹುಣಶ್ಯಾಳ ಇದ್ದರು.
ತೇರದಾಳ ಶಾಸಕ ಸಿದ್ದು ಸವದಿ ವಿರುದ್ದ ಮಹಾಲಿಂಗಪುರ ಪುರಸಭೆಯ ಏಳು ಸದಸ್ಯರು ನೀಡಿರುವ ದೂರನ್ನು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮತ್ತು ಬಿಜೆಪಿ ಪಕ್ಷದ ರಾಜ್ಯ ಶಿಸ್ತು ಸಮಿತಿಗೆ ಕಳಿಸಲಾಗುವದು. ಶಾಸಕರ ವಿರುದ್ಧದ ಮುಂದಿನ ಕ್ರಮವನ್ನು ರಾಜ್ಯಾಧ್ಯಕ್ಷರು ಮತ್ತು ಪಕ್ಷದ ರಾಜ್ಯ ಶಿಸ್ತು ಸಮಿತಿಯು ನಿರ್ಧರಿಸಲಿದೆ.
– ಶಾಂತಗೌಡ ಪಾಟೀಲ. ಬಿಜೆಪಿ ಜಿಲ್ಲಾಧ್ಯಕ್ಷರು. ಬಾಗಲಕೋಟೆ.