ಮಹಾಲಿಂಗಪುರ: ಹೊಲ ಮನೆ ಖರೀದಿ, ನ್ಯಾಯಾಲಯ ವ್ಯಾಜ್ಯಗಳಿಗೆ ಮುಧೋಳ ತಾಲೂಕು, ಮನವಿ ಸಲ್ಲಿಸಲು ಮಾತ್ರ ನೂತನ ರಬಕವಿ-ಬನಹಟ್ಟಿ ತಾಲೂಕು, ನೆಮ್ಮದಿ ಕೇಂದ್ರಕ್ಕೆ ಸಂಬಂಧಿಸಿದ ಕೆಲಸಗಳಿಗೆ ತೇರದಾಳ ತಾಲೂಕಿಗೆ ಹೋಗಬೇಕಿರುವುದರಿಂದ ಮಹಾಲಿಂಗಪುರ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ಪ್ರತಿ ಕೆಲಸ ಕಾರ್ಯಗಳಿಗೆ ಇಂದು ಮೂರೂ ತಾಲೂಕಿಗೆ ಅಲೆದಾಡುವ ಪರಿಸ್ಥಿತಿ ಬಂದಿರುವುದು ವಿಪರ್ಯಾಸ ಸಂಗತಿ.
ಹಿಂದಿನ ಕಾಂಗ್ರೆಸ್ ಸರಕಾರ ಪಟ್ಟಣವನ್ನು 2018 ಫೆಬ್ರುವರಿಗೂ ಮೊದಲು ಮೊದಲು ನೂತನ ರಬಕವಿ-ಬನಹಟ್ಟಿ ತಾಲೂಕಿಗೆ ಸೇರ್ಪಡೆ ಮಾಡಿತ್ತು. ಇದರಿಂದ ಪಟ್ಟಣದ ಜನತೆ ಮುಧೋಳಕ್ಕಿಂತ ನೂತನ ರಬಕವಿ-ಬನಹಟ್ಟಿ ತಾಲೂಕು 10 ಕಿ.ಮೀ. ಸಮೀಪವಾಯ್ತು ಎಂದುಕೊಂಡು ಖುಷಿಯಾಗ್ದಿರು.
ತೇರದಾಳ ಮತಕ್ಷೇತ್ರದ ಅಂದಿನ ಶಾಸಕಿ, ಸಚಿವೆ ಉಮಾಶ್ರೀ 9-2-2018ರಂದು ಅಧಿಕೃತವಾಗಿ ರಬಕವಿ-ಬನಹಟ್ಟಿ ತಾಲೂಕು ಪ್ರಾರಂಭೋತ್ಸವ ಸಮಾರಂಭ ನೆರವೇರಿಸಿದ್ದರು. ಆದರೆ ನೂತನ ತಾಲೂಕು ಘೋಷಣೆಯಾಗಿ ಒಂದು ವರ್ಷ ನಾಲ್ಕು ತಿಂಗಳು ಗತಿಸಿದರೂ ಇದುವರೆಗೆ ಯಾವುದೇ ಇಲಾಖೆಗಳು ಪೂರ್ಣ ಪ್ರಮಾಣದಲ್ಲಿ ಸ್ಥಳಾಂತರಗೊಂಡಿಲ್ಲ. ಹೀಗಾಗಿ ಮಹಾಲಿಂಗಪುರ ಮತ್ತು ಈ ಭಾಗದ ಹತ್ತಾರು ಹಳ್ಳಿಗಳ ಜನರು ತಾಲೂಕು ಕೆಲಸ-ಕಾರ್ಯಗಳಿಗೆ ಇಂದಿಗೂ ಮುಧೋಳ ಪಟ್ಟಣವನ್ನೇ ಅವಲಂಬಿಸುವಂತಾಗಿದೆ. ರಬಕವಿ-ಬನಹಟ್ಟಿ ತಾಲೂಕು ಕೇವಲ ಉದ್ಘಾಟನೆಗೆ ಮಾತ್ರ ಸೀಮಿತ ಎಂಬಂತಾಗಿದೆ.
ಮತ್ತೇ ತೇರದಾಳ ತಾಲೂಕು ಘೋಷಣೆ: ಕುಮಾರಸ್ವಾಮಿಯವರು 2018 ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಬಂದಾಗ ನಾನು ಸಿಎಂ ಆದರೆ ತೇರದಾಳವನ್ನು ತಾಲೂಕು ಕೇಂದ್ರ ಮಾಡುವುದಾಗಿ ಘೋಷಿಸಿದ್ದರು. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಮೈತ್ರಿ ಸರ್ಕಾರದ ಸಿಎಂ ಖುರ್ಚಿ ಅಲಂಕರಿಸಿದ ನಂತರ ಕುಮಾರಸ್ವಾಮಿಯವರು 2019-20ನೇ ಸಾಲಿನ ಬಜೆಟ್‌ನಲ್ಲಿ ತೇರದಾಳನ್ನು ನೂತನ ತಾಲೂಕು ಎಂದು ಘೋಷಿಸಿದರು.
ಮೂರು ತಾಲೂಕು ವ್ಯಾಪ್ತಿಯಲ್ಲಿ ಮಹಾಲಿಂಗಪುರ: ಮುಧೋಳ ತಾಲೂಕಿನಿಂದ ನೂತನ ರಬಕವಿ-ಬನಹಟ್ಟಿಗೆ ತಾಲೂಕಿಗೆ ಸೇರ್ಪಡೆಯಾದಾಗ ಖುಷಿಯಾಗಿದ್ದ ಮಹಾಲಿಂಗಪುರ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಇಂದು ತ್ರಿಶಂಕು ಸ್ಥಿತಿಯಲ್ಲಿ ಸಿಲುಕಿ ಒದ್ದಾಡುವಂತಾಗಿದೆ. ಮೊದಲು ರಬಕವಿ-ಬನಹಟ್ಟಿ ತಾಲೂಕಿಗೆ ಸೇರ್ಪಡೆಯಾಗಿದ್ದ ಮಹಾಲಿಂಗಪುರ ಪಟ್ಟಣ ಮತ್ತು ಸುತ್ತಮುತ್ತಲಿನ ಹಳ್ಳಿಗಳನ್ನು ತೇರದಾಳ ತಾಲೂಕಿಗೆ ಸೇರ್ಪಡೆ ಮಾಡಿರುವುದು ಇಂದು ಹಲವಾರು ಸಮಸ್ಯೆಗಳಿಗೆ ಕಾರಣವಾಗಿದೆ.
ತೇರದಾಳಕ್ಕೆ ಸೇರಿಸಿದ್ದಕ್ಕೆ ವಿರೋಧ: ಪಟ್ಟಣವನ್ನು ತೇರದಾಳ ತಾಲೂಕಿಗೆ ಸೇರ್ಪಡೆ ಮಾಡಿದ್ದನ್ನು ವಿರೋಧಿಸಿದ ಸ್ಥಳೀಯ ತಾಲೂಕು ಹೋರಾಟಗಾರರು ರಬಕವಿ-ಬನಹಟ್ಟಿ ತಾಲೂಕಿನಲ್ಲೇ ಮಹಾಲಿಂಗಪುರ ಪಟ್ಟಣ ಉಳಿಸಬೇಕು ಇಲ್ಲವೇ 2003ರಲ್ಲಿ ನಡೆದ ತಾಲೂಕು ಹೋರಾಟದ ಫಲವಾಗಿ ಟಿ.ಎಂ.ಹುಂಡೇಕಾರ ವರದಿ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದ ನಿಯೋಜಿತ ನಕ್ಷೆಯಂತೆ ಮಹಾಲಿಂಗಪುರವನ್ನು ಸ್ವತಂತ್ರ ತಾಲೂಕಾಗಿ ರಚಿಸಬೇಕೆಂದು ಹೋರಾಟ ನಡೆಸಿ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ಮನವಿ ಸಲ್ಲಿಸಿ ಬಂದಿದ್ದರು. ಆ ವೇಳೆ ಲೋಕಸಭಾ ಚುನಾವಣೆ ಬಂದಿದ್ದರಿಂದ ನೀತಿ ಸಂಹಿತೆ ಹಿನ್ನೆಲೆಯಲ್ಲಿ ತಾಲೂಕು ಹೋರಾಟ ಅಲ್ಲಿಗೆ ಸ್ಥಗಿತಗೊಂಡಿತ್ತು. ಸದ್ಯ ಮೈತ್ರಿ ಸರಕಾರವೇ ಡೋಲಾಯಮಾನದಲ್ಲಿ ಇರುವುದರಿಂದ ತಾಲೂಕು ಸಮಸ್ಯೆ ಯಾವಾಗ ಬಗೆಹರಿಯುವುದು ಎಂಬುವುದೇ ಯಕ್ಷ ಪ್ರಶ್ನೆಯಾಗಿದೆ.
•ಚಂದ್ರಶೇಖರ ಮೋರೆ