Advertisement

ಬಣ್ಣದ ಬದಲು ಭಜನೆ-ನಾಮಸ್ಮರಣೆ 

10:41 AM Mar 20, 2019 | |

ಮಹಾಲಿಂಗಪುರ: ಇಲ್ಲಿ ಬಣ್ಣದಾಟದ ಬದಲು ಭಜನೆ, ಹಲಗೆಯ ನಾದದ ಬದಲು ಭಗವಂತನ ನಾಮಸ್ಮರಣೆ, ಕೂಗಾಟ-ಚೀರಾಟ ಬದಲು ನಡೆಯುತ್ತೆ ಸತ್ಸಂಗ-ಶಿವಾನುಭವಗೋಷ್ಠಿ. ಹೌದು. ಹೋಳಿ ಹಬ್ಬದಂಗವಾಗಿ ಇಲ್ಲಿಯ ತೋಟವೊಂದರಲ್ಲಿ ಬಣ್ಣದ ಬದಲು ಪಾರಮಾರ್ಥ ನಡೆಯುತ್ತದೆ. ಸುಮಾರು ಎರಡು ಸಾವಿರಕ್ಕೂ ಅಧಿಕ ಜನ ಪಾಲ್ಗೊಳ್ಳುತ್ತಾರೆ. ಶಿವನಾಮಸ್ಮರಣೆಯಲ್ಲಿ ತೊಡಗುತ್ತಾರೆ,  ವಚನ ಕೇಳುತ್ತಾರೆ. ಭಜನೆ ಮಾಡುತ್ತಾರೆ. ಸತ್ಸಂಗ ನಡೆಸುತ್ತಾರೆ.

Advertisement

ಹೋಳಿ ಹಬ್ಬದಂಗವಾಗಿ ಬಣ್ಣದ ಎರಚಾಟದಲ್ಲಿ ಭಾಗಿಗಳಾಗಿ ಬಟ್ಟೆ ಹಾಗೂ ಮೈ ಹೊಲಸು ಮಾಡಿಕೊಂಡು ಖನ್ನರಾಗುವುದಕ್ಕಿಂತ ಶಿವಾನುಭವ ಗೋಷ್ಠಿ ನಡೆಸುವುದು ಶ್ರೇಷ್ಠವೆಂದು ತಿಳಿದು ಶರಣ ಸಾತ್ವಿಕ ದಿ| ಮಹಾಲಿಂಗಪ್ಪ ಢಪಳಾಪೂರ ಅವರು 1982 ಮಾರ್ಚ್‌ನಲ್ಲಿ ಆರಂಭಿಸಿದ್ದಾರೆ. ಅಂದು ಕೇವಲ 15 ಜನರಿಂದ ಆರಂಭವಾದ ಈ ಸತ್ಸಂಗ-ಗೋಷ್ಠಿಯಲ್ಲಿ ಇಂದು ಸಾವಿರಾರು ಜನರು ಪಾಲ್ಗೊಂಡು ಪುನೀತರಾಗುತ್ತಾರೆ. ದಿ| ಮಹಾಲಿಂಗಪ್ಪ ಢಪಳಾಪೂರ ಅವರ ತೋಟದಲ್ಲಿ ಕಳೆದ 37 ವರ್ಷಗಳಿಂದ ಪ್ರತಿವರ್ಷ ತಪ್ಪದೇ ಹೋಳಿ ಹಣ್ಣಿಮೆಯಂದು ಇದು ಜರುಗುತ್ತ ಬಂದಿದೆ. ಬಸವರಾಜ ಢಪಳಾಪೂರ ಸಹೋದರರು ತಮ್ಮ ತಂದೆ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಪ್ರತಿ ವರ್ಷ ಅವರ ಸ್ಮರಣಾರ್ಥ ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಗೋಷ್ಠಿಯಲ್ಲಿ ಭಾಗವಹಿಸಲಿರುವ ಅತಿಥಿ, ಉಪನ್ಯಾಸಕ, ಶರಣು ಮಹೋದರಿಯರಿಗೆ ಮೊದಲೇ ಆಮಂತ್ರಣ ನೀಡಲಾಗಿರುತ್ತದೆ.

ಬಣ್ಣ ಬೇಡವೆಂದವರು: ಪಟ್ಟಣದಿಂದ ಪೂರ್ವಕ್ಕೆ ಒಂದೂವರೆ ಕಿ.ಮೀ.ಅಂತರದಲ್ಲಿರುವ ಢಪಳಾಪೂರ ಅವರ ತೋಟಕ್ಕೆ ಹೋಳಿ ಹುಣ್ಣಿಮೆಯಂದು ಬೆಳಿಗ್ಗೆ 5 ಗಂಟೆಯಿಂದಲೇ ಜನ ತಂಡೋಪತಂಡವಾಗಿ ಹೋಗುತ್ತಾರೆ. ಅವರೆಲ್ಲರೂ ಬಣ್ಣ ಬೇಡವೆಂದು ತಪ್ಪಿಸಿಕೊಂಡು ಬಂದವರೇ. ಅಲ್ಲಿ ಚಹಾ, ಅಲ್ಪೋಪಹಾರದ ವ್ಯವಸ್ಥೆಯೊಂದಿಗೆ ಢಪಳಾಪೂರ ಸಹೋದರರ ಆದರಾತಿಥ್ಯ ಇದ್ದೇ ಇರುತ್ತದೆ. ಊರಲ್ಲಿ ಹಲಗೆಗಳ ಶಬ್ದ ಕೇಳಿ ಬಂದರೆ ಈ ತೋಟದಲ್ಲಿ ವಚನಗಳ ನಿನಾದ ಕೇಳಿ ಬರುತ್ತದೆ. ಅಂದು ಬೆಳಿಗ್ಗೆ ಆಹ್ಲಾದಕರ ವಾತಾವರಣ ನಿರ್ಮಾಣಗೊಂಡಿರುತ್ತದೆ.

ನಾಳೆ ಕಾರ್ಯಕ್ರಮ: ಈ ವರ್ಷದ ಶಿವಾನುಭವವು ಮಾ.21ರಂದು ಬೆಳಿಗ್ಗೆ 9 ಗಂಟೆಯಿಂದ ಆರಂಭಗೊಳ್ಳುತ್ತದೆ. ಸಿದ್ಧಾರೂಢರ, ಯಲ್ಲಾಲಿಂಗ ಮಹಾರಾಜರ ಭಾವಚಿತ್ರ ಜತೆಗೆ ಕಾರ್ಯಕ್ರಮದ ಕಾರಣೀಭೂತರಾದ ದಿ|ಮಹಾಲಿಂಗಪ್ಪ ಢಪಳಾಪೂರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ನಂತರ ಸಾಮೂಹಿಕ ಪ್ರಾರ್ಥನೆ, ಜಪಯಜ್ಞ ನಡೆಯುತ್ತದೆ. ಬೆಳಿಗ್ಗೆ 10 ಗಂಟೆಗೆ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಶ್ರೀ ಸಹಜಾನಂದ ಸ್ವಾಮೀಜಿ, ಕನ್ನಡ ಕಬೀರ ಇಬ್ರಾಹಿಂ ಸುತಾರ, ಶರಣ ಮಲ್ಲೇಶಪ್ಪ ಕಟಗಿ ಇವರಿಂದ ಪ್ರವಚನ ಜರುಗುತ್ತದೆ. 11:30ಕ್ಕೆ ವಿವಿಧ ಊರುಗಳಿಂದ ಆಗಮಿಸಿದವರಿಂದ ಭಜನೆ-ಕೀರ್ತನೆ ನಂತರ 12:30 ಗಂಟೆಗೆ ಇಬ್ರಾಹಿಂ ಸುತಾರ ತಂಡದಿಂದ ಸಂವಾದ ಕಾರ್ಯಕ್ರಮ ಜರುಗುತ್ತದೆ. ಮಧ್ಯಾಹ್ನ ಮಹಾಪ್ರಸಾದದೊಂದಿಗೆ ಶಿವಾನುಭವ ಗೋಷ್ಠಿ ಮಂಗಲಗೊಳ್ಳುತ್ತದೆ.

ಚಿಕ್ಕಾಲಗುಂಡಿ: ಹಬ್ಬದಂದು ಸತ್ಸಂಗ ಸಂಭ್ರಮ!
ಬೀಳಗಿ:
ಹೋಳಿ ಹಬ್ಬದಂದು ಎಲ್ಲೆಡೆ ತರಹೇವಾರಿ ಬಣ್ಣದಲ್ಲಿ ಮಿಂದೇಳುವ ಮೂಲಕ ಹೋಳಿ ಸಂಭ್ರಮದಲ್ಲಿ ತೊಡಗಿದರೆ, ತಾಲೂಕಿನ ಚಿಕ್ಕಾಲಗುಂಡಿ ಗ್ರಾಮದಲ್ಲಿ ಮಾತ್ರ ಸತ್ಸಂಗ ಸಂಭ್ರಮ ನಡೆಯುತ್ತದೆ. ಕಳೆದ 39 ವರ್ಷಗಳಿಂದ ಈ ಪರಿಪಾಠ ರೂಢಿಸಿಕೊಂಡು ಬಂದಿರುವ ಗ್ರಾಮಸ್ಥರು ಬಾಗೇವಾಡಿ ಅಜ್ಜನವರ ಪುಣ್ಯಾರಾಧನೆ ಹಾಗೂ ಹೋಳಿ ಹಬ್ಬದ ನಿಮಿತ್ತ ಮಾ. 20 ರಿಂದ 23 ರವರೆಗೆ ಗ್ರಾಮದ ಸಿದ್ಧಾರೂಢ ಮಠದ ಆವರಣದಲ್ಲಿ ಸತ್ಸಂಗ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಚಿದಂಬರಾಶ್ರಮ ಸಿದ್ಧಾರೂಢ ಮಠದ ವೇದಾಂತ ವಾಗೀಶ ಶಿವಕುಮಾರ ಸ್ವಾಮೀಜಿ, ಕನ್ಹೆàರಿ ಸಿದ್ಧಗಿರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜರುಗುವ ಸತ್ಸಂಗದಲ್ಲಿ ಮಹಾಲಿಂಗಪುರದ ಸಹಜಾನಂದ ಸ್ವಾಮೀಜಿ, ಮಂಟೂರ ಸದಾನಂದ ಸ್ವಾಮೀಜಿ, ಕನ್ಹೇರಿ ಮುಪ್ಪಿನ ಕಾಡಸಿದ್ದೇಶ್ವರ ಸ್ವಾಮೀಜಿ, ರನ್ನ ಬೆಳಗಲಿಯ ಸಿದ್ಧರಾಮ ಸ್ವಾಮೀಜಿ, ಮಲ್ಲಿಕಾರ್ಜುನ ಮಠದ ಬಸವರಾಜ ಸ್ವಾಮೀಜಿ, ಮಹಾಂತ ದೇವರು, ಗುಲಬುರ್ಗಾದ ಮಾತೋಶ್ರೀ ಲಕ್ಷ್ಮೀದೇವಿ, ಮಾತೋಶ್ರೀ ವಿದ್ಯಾದೇವಿ, ಕೊಪ್ಪ ಎಸ್‌ಕೆ ಗ್ರಾಮದ ಮಾತೋಶ್ರೀ ಜ್ಞಾನೇಶ್ವರಿ, ಆಳೂರಿನ ಶಂಕರಾನಂದ ಸ್ವಾಮೀಜಿ ಭಾಗವಹಿಸಲಿದ್ದಾರೆ. ಮಾ. 23 ರಂದು ಪೂರ್ಣಕುಂಭ, ಆರತಿ ಹಾಗೂ ಮುತ್ತೈದೆಯರ ಉಡಿ ತುಂಬುವುದು ಮತ್ತು ಸಕಲ ವಾದ್ಯ-ವೈಭವದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಿದ್ಧಾರೂಢರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ. ನಂತರ ಶಿವಕುಮಾರ ಸ್ವಾಮಿಗಳ ತುಲಾಭಾರ ಜರುಗಲಿದೆ. ಅಂದು ಸಂಜೆ 4 ಗಂಟೆಗೆ ಬಾದಾಮಿ ತಾಲೂಕಿನ ಸುಳ್ಳದ ಕಾಷ್ಠ ಕಲಾವಿದರಾದ ಮಂಜುನಾಥ ಬಡಿಗೇರ, ಮಹಾಂತೇಶ ಬಡಿಗೇರ ನೂತನವಾಗಿ ನಿರ್ಮಿಸಲ್ಪಟ್ಟ ರಥದ ಉತ್ಸವ ನಡೆಯಲಿದೆ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ಚಂದ್ರಶೇಖರ ಮೋರೆ

Advertisement

Udayavani is now on Telegram. Click here to join our channel and stay updated with the latest news.

Next