Advertisement

ಬಿಜೆಪಿ ಮಡಿಲಿಗೆ ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಸ್ಥಾನ

02:47 PM Jul 15, 2022 | Team Udayavani |

ಮಹಾಲಿಂಗಪುರ: ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ಮಹಾಲಿಂಗಪುರ ಪುರಸಭೆಯ ನೂತನ ಅಧ್ಯಕ್ಷರಾಗಿ ಬಿಜೆಪಿಯ ಬಸವರಾಜ ಹಿಟ್ಟಿನಮಠ ಆಯ್ಕೆಯಾಗಿದ್ದಾರೆ.

Advertisement

ಶುಕ್ರವಾರ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಯಿಂದ ಬಸವರಾಜ ಹಿಟ್ಟಿನಮಠ, ಕಾಂಗ್ರೆಸ್ ನಿಂದ ಜಾವೇದ್ ಬಾಗವಾನ್ ಮತ್ತು ಯಲ್ಲನಗೌಡ ಪಾಟೀಲ್ ನಾಮಪತ್ರ ಸಲ್ಲಿಸಿದ್ದರು. ಮಧ್ಯಾಹ್ನ 1 ಗಂಟೆಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ನಿಂದ ನಾಮಪತ್ರ ಸಲ್ಲಿಸಿದ್ದ ಯಲ್ಲನಗೌಡ ಪಾಟೀಲ್ ಕೊನೆಯ ಕ್ಷಣದಲ್ಲಿ ಕಣದಿಂದ ಹಿಂದೆ ಸರಿದರು. ಅಂತಿಮವಾಗಿ ಬಿಜೆಪಿಯಿಂದ ಬಸವರಾಜ ಹಿಟ್ಟಿನಮಠ, ಕಾಂಗ್ರೆಸ್ ನಿಂದ ಜಾವೇದ್ ಬಾಗವಾನ ಸ್ಪರ್ಧೆಯಲ್ಲಿ ಉಳಿದರು.

ನಂತರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಬಿಜೆಪಿಯ 10 ಸದಸ್ಯರು, ಶಾಸಕ ಸಿದ್ದು ಸವದಿ, ಸಂಸದ ಪಿ.ಸಿ.ಗದ್ದಿಗೌಡರ ಹಾಗೂ ಪಕ್ಷೇತರ ಅಭ್ಯರ್ಥಿ ಸಜನಸಾಬ ಪೆಂಡಾರಿ ಅವರು ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಿದ್ದರಿಂದ ಬಿಜೆಪಿಯ 9ನೇ ವಾರ್ಡಿನ ಸದಸ್ಯ ಬಸವರಾಜ ಹಿಟ್ಟಿನಮಠ ಅವರು ಮಹಾಲಿಂಗಪುರ ಪುರಸಭೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.

ಕಾಂಗ್ರೆಸ್ ನ 9 ಸದಸ್ಯರು, ಬಿಜೆಪಿಯ ಮೂರು ಜನ ಬಂಡಾಯ ಸದಸ್ಯೆಯರು ಸೇರಿ 12 ಮತಗಳನ್ನು ಪಡೆದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಾವೇದ್ ಬಾಗವಾನ್ ಅವರು ಕೇವಲ 1 ಮತದ ಅಂತರದಲ್ಲಿ ಪರಾಭವಗೊಂಡರು. ರಬಕವಿ-ಬನಹಟ್ಟಿ ತಹಶೀಲ್ದಾರ ಎಸ್.ಬಿ.ಇಂಗಳೆ ಅವರು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

ಬಿಗಿಬಂದೋಬಸ್ತ್

Advertisement

ಕಳೆದ ಬಾರಿಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ನಡೆದಂತೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಮಖಂಡಿ ಡಿವೈಎಸ್ ಪಿ ಪಾಂಡುರಂಗಯ್ಯ, ಬನಹಟ್ಟಿ ಸಿಪಿಆಯ್ ಈರಯ್ಯ ಮಠಪತಿ, ತೇರದಾಳ ಪಿಎಸ್ ಆಯ್ ರವಿ ಪವಾರ, ಮಹಾಲಿಂಗಪುರ ಠಾಣಾಧಿಕಾರಿ ವಿಜಯ ಕಾಂಬಳೆ ಹಾಗೂ 200ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯು ಬಿಗಿಬಂದೋಬಸ್ತ್ ಒದಗಿಸಿದ್ದರು.

ಕಾರ್ಯಕರ್ತರ ಸಂಭ್ರಮ

ಭಾರಿ ಪೈಪೋಟಿ ನಡುವೆ ಪಕ್ಷೇತರ ಅಭ್ಯರ್ಥಿ ಕೃಪೆಯಿಂದ ಪುರಸಭೆ ಅಧ್ಯಕ್ಷ ಸ್ಥಾನವು ಬಿಜೆಪಿ ಮಡಿಲಿಗೆ ಬರುತ್ತಿದ್ದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಟ್ಟಣದ ವಿವಿಧ ವೃತ್ತಗಳಲ್ಲಿ ಪಟಾಕಿ ಸಿಡಿಸಿ, ಕೇಸರಿ ಬಣ್ಣ ಎರಚಿಕೊಂಡು ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next