Advertisement

ರೈತರಿಗೆ ಶೀಘ್ರದಲ್ಲೇ ಮಹಾಲಕ್ಷ್ಮೀ ಕಟಾಕ್ಷ?

05:19 PM Jun 14, 2020 | Suhan S |

ಚಿಕ್ಕೋಡಿ: ಕಳೆದ ದಶಕದಿಂದ ನನೆಗುದಿಗೆ ಬಿದ್ದಿರುವ ಚಿಕ್ಕೋಡಿ ಪಶ್ಚಿಮ ಭಾಗದ ರೈತರ ಬಹು ನಿರೀಕ್ಷಿತ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಮುಹೂರ್ತ ಕೂಡಿ ಬಂದಿರುವ ಲಕ್ಷಣಗಳು ಗೋಚರಿಸುತ್ತಿವೆ.

Advertisement

ಜೂ. 16ರಂದು ರಾಜ್ಯದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಏತ ನೀರಾವರಿ ಯೋಜನೆಗೆ ಒಳಪಡುವ ರೈತರ ಜೊತೆ ಸಮಾಲೋಚಿಸಿ ನೀರಾವರಿ ಯೋಜನೆಯ ಸ್ಥಳ ಪರಿಶೀಲನೆ ನಡೆಸುವ ಕಾರ್ಯಕ್ರಮ ನಿಗದಿಯಾಗಿದೆ. ಇದರಿಂದ ರೈತರ ಬಹುದಿನಗಳಕನಸು ನನಸಾಗುವ ನಿರೀಕ್ಷೆ ಹೆಚ್ಚಿದೆ. ನೀರಾವರಿಯಿಂದ ವಂಚಿತಗೊಂಡ ತಾಲೂಕಿನ ಪಶ್ಚಿಮ ಭಾಗದ ಚಿಂಚಣಿ, ಕುಪ್ಪಾಣವಾಡಿ, ಕೋಥಳಿ, ಕುಠಾಳ ಹಂಡ್ಯಾನವಾಡಿ, ನವಲಿಹಾಳ, ಧುಳಗನವಾಡಿ, ನಾಯಿಂಗ್ಲಜ್‌, ನಾಗಯಾನವಾಡಿ, ಯಾದ್ಯಾನವಾಡಿ, ಪೀರವಾಡಿ, ಖಡಕಲಾಟ, ವಾಳಕಿ, ಪಟ್ಟಣಕುಡಿ, ರಾಂಪುರ, ಅಮಲಜೇರಿ ಮತ್ತು ಗವಾನ ಸೇರಿ ಸುಮಾರು 17 ಗ್ರಾಮಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಯೋಜನೆ ಇದಾಗಿದೆ.

ತಾಲೂಕಿನ ಕಲ್ಲೋಳ ಹತ್ತಿರ ಹರಿಯುವ ಕೃಷ್ಣಾ ಮತ್ತು ದೂಧ್‌ಗಂಗಾ ನದಿಯಿಂದ ನೀರನ್ನು ಎತ್ತಿ ಮುಂಗಾರು ಹಂಗಾಮಿನಲ್ಲಿ ಅನುಕೂಲವಾಗಲು ರೈತರ ಜಮೀನುಗಳಿಗೆ ನೀರುಣಿಸುವ ಯೋಜನೆಗೆ ಅನುಮೋದನೆ ಸಿಕ್ಕಿದೆ. ಸುಮಾರು 0.92 ಟಿಎಂಸಿ ಅಡಿ ನೀರಿನ ಹಂಚಿಕೆ ಕೂಡಾ ಆಗಿದೆ. ಆದರೆ ಸ್ಥಳೀಯ ಜನಪ್ರತಿನಿ ಧಿಗಳ ಮತ್ತು ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ಈ ಯೋಜನೆ ಅನುಷ್ಠಾನಕ್ಕೆ ವಿಳಂಬವಾಗಿತ್ತು.

ಈಗ ಬೆಳಗಾವಿ ಜಿಲ್ಲೆಯವರೇ ಆದ ನೀರಾವರಿ ಸಚಿವ ರಮೇಶ ಜಾರಕಿಹೊಳಿ ಅವರು ಜಿಲ್ಲೆಯ ಪ್ರಮುಖ ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸುವ ದಿಟ್ಟ ನಿರ್ಧಾರ ಕೈಗೊಂಡು ಜಿಲ್ಲೆಯ ಎಲ್ಲ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗೆ ಅನುಮೋದನೆ ನೀಡಲು ಮುಂದಾಗುತ್ತಿರುವುದು ಜಿಲ್ಲೆಯ ರೈತರಿಗೆ ಹೊಸ ಆಶಾಭಾವ ಮೂಡಿಸಿದ್ದಾರೆ.

ಹಿಂದಿನ ಸರ್ಕಾರದಲ್ಲೇ ಆಗಬೇಕಿತ್ತು : ಚಿಕ್ಕೋಡಿ-ಸದಲಗಾ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಹಿಂದಿನ ಸರಕಾರದ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರು ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಗೆ ಅನುಮೋದನೆ ನೀಡಿ ರೈತರ ಜಮೀನಿಗೆ ನೀರು ತಂದೆ ತರುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಅವರ ಆಡಳಿತದಲ್ಲಿ ಯೋಜನೆಗೆ ಅನುಮೋದನೆ ಸಿಗಲಿಲ್ಲ, ಈಗಾಗಲೇ ಈ ಯೋಜನೆ ಕಡತ ಸರ್ಕಾರದ ಮಟ್ಟದಲ್ಲಿ  ಇದ್ದು, ಕ್ಯಾಬಿನೆಟ್‌ನಲ್ಲಿ ಮಂಜೂರು ಪಡೆಯುವ ಕಾರ್ಯ ಮಾತ್ರ ಬಾಕಿ ಇದೆ. ನೀರಾವರಿ ಸಚಿವ ರಮೇಶ ಜಾರಕಿಹೊಳಿ ಅವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ್ದು ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ ಬಗ್ಗೆ. ಈಗ ಅವರು ಸ್ಥಳ ಪರಿಶೀಲನೆ ಮತ್ತು ರೈತರ ಜೊತೆ ಸಮಾಲೋಚನೆ ನಡೆಸಲು ಬರುತ್ತಿದ್ದು, ಶೀಘ್ರವಾಗಿ ಯೋಜನೆಗೆ ಅನುಮೋದನೆ ನೀಡಬೇಕೆಂದು ಈ ಭಾಗದ ರೈತರು ಒಕ್ಕೊರಲಿನಿಂದ ಸಚಿವರಿಗೆ ಮನವಿ ಮಾಡಲು ನಿರ್ಧರಿಸಲಾಗಿದೆ ಎಂದು ರೈತ ಮುಖಂಡರೊಬ್ಬರು ಉದಯವಾಣಿಗೆ ತಿಳಿಸಿದರು.

Advertisement

ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ  ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಯೋಜನೆಗೆ ನೀರಿನ ಹಂಚಿಕೆಯಾಗಿ ಸರ್ಕಾರದ ಮಟ್ಟದಲ್ಲಿ ಮಂಜೂರಿ ಹಂತದಲ್ಲಿದೆ. ಸಚಿವ ರಮೇಶ ಜಾರಕಿಹೊಳಿ ಅವರು ಸ್ಥಳ ಪರಿಶೀಲನೆಗೆ ಹಾಗೂ ರೈತರ ಜೊತೆ ಸಮಾಲೋಚಿಸಲು ಬರುತ್ತಿದ್ದು, ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. –ಸಿ.ಡಿ. ಪಾಟೀಲ, ಕಾರ್ಯನಿರ್ವಾಹಕ ಅಭಿಯಂತ, ನೀರಾವರಿ ನಿಗಮ ಚಿಕ್ಕೋಡಿ

ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಗೆ ಡಿಪಿಆರ್‌ ಸಿದ್ಧಗೊಂಡಿದೆ. ಈ ಯೋಜನೆ ಕಾರ್ಯಗತ ಗೊಳಿಸಬೇಕೆಂದು ನಾನು ಮತ್ತು ಡಾ| ಪ್ರಭಾಕರ ಕೋರೆ ಮನವಿ ಮಾಡಿದಾಗ ಸಚಿವರು ಯೋಜನೆ ವ್ಯಾಪ್ತಿಯ ರೈತರ ಜೊತೆ ಸಮಾಲೋಚಿಸಲು ಬರುತ್ತಿದ್ದು, ನಂತರ ಕ್ಯಾಬಿನೆಟ್‌ ನಲ್ಲಿ ಇಟ್ಟು ಅನುಮೋಧನೆ ಪಡೆಯುವ ವಿಶ್ವಾಸ ಇದೆ. ಮಹಾಂತೇಶ ಕವಟಗಿಮಠ, ವಿಧಾನ ಪರಿಷತ್‌ ಮುಖ್ಯಸಚೇತಕ

ಸರ್ವೇ ಕಾರ್ಯ ಪೂರ್ಣ: ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಗೆ ಒಳಪಡುವ 17 ಗ್ರಾಮಗಳಲ್ಲಿ ಸರ್ವೇ ಕಾರ್ಯ ನಡೆದು ದಶಕ ಕಳೆದು ಹೋಗಿದೆ. ನೀರಿನ ಹಂಚಿಕೆಯಾಗಿದೆ. ಈ ಯೋಜನೆಗೆ ಸರ್ಕಾರ 375 ಕೋಟಿ ರೂ. ಕ್ರಿಯಾಯೋಜನೆ ಸಿದ್ಧಪಡಿಸಿದೆ. ಸರ್ವೇ ಕಾರ್ಯ ನಡೆದಾಗ ಶೀಘ್ರವಾಗಿ ಜಮೀನುಗಳಿಗೆ ನೀರು ಬರುವ ನಿರೀಕ್ಷೆ ಹೊಂದಿರುವ ರೈತರಿಗೆ ಭಾರಿ ನಿರಾಸೆ ಮೂಡಿಸಿತ್ತು. ಇದೀಗ ಈ ಯೋಜನೆ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆಯಲ್ಲಿ ಇರುವುದರಿಂದ ರೈತರಲ್ಲಿ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.

 

ಮಹಾದೇವ ಪೂಜೇರಿ

Advertisement

Udayavani is now on Telegram. Click here to join our channel and stay updated with the latest news.

Next