ಉಡುಪಿ: ಶೈಕ್ಷಣಿಕ ಕ್ಷೇತ್ರಕ್ಕೆ ಕೊಡುಗೆ ಸಲ್ಲಿಸುವ ಮೂಲಕ ಭವಿಷ್ಯದಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣೀಭೂತರಾಗಬಹುದು. ಈ ನಿಟ್ಟಿ ನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ನೆರವಾಗುವುದು, ಅವರ ಪ್ರತಿಭೆಯನ್ನು ಗುರುತಿಸಿ ಆರ್ಥಿಕ ಸಹಕಾರ ನೀಡಿ ಪ್ರೋತ್ಸಾಹಿಸುವುದು ಪುಣ್ಯದ ಕೆಲಸ ಎಂದು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ| ಜಿ. ಶಂಕರ್ ಹೇಳಿದರು.
ಉಡುಪಿ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಸೋಮವಾರ ಅಜ್ಜರಕಾಡು ಪುರಭವನ ದಲ್ಲಿ ನಡೆದ “ಪ್ರತಿಭಾ ಪುರಸ್ಕಾರ ವಿತರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಾಲಕ್ಷ್ಮೀ ಕೋ ಆಪ್ ಬ್ಯಾಂಕ್ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗುತ್ತಿದೆ. ಸದಸ್ಯರಿಗೆ ಗರಿಷ್ಠ ಡಿವಿಡೆಂಡ್, ವರ್ಷದಿಂದ ವರ್ಷಕ್ಕೆ ಶಾಖೆಗಳ ವಿಸ್ತರಣೆ ಮಾಡುವ ಮೂಲಕ ಯಶ್‌ಪಾಲ್ ಸುವರ್ಣ ನೇತೃತ್ವದ ಈ ಬ್ಯಾಂಕ್ ಉತ್ತರೋತ್ತರ ಅಭಿವೃದ್ಧಿ ಕಾಣುತ್ತಿದೆ ಎಂದು ಶ್ಲಾ ಸಿದ ಅವರು ಉತ್ತಮ ಶಿಕ್ಷಣ ಪಡೆದು ಜೀವನದಲ್ಲಿ ಸಾಧನೆ ಮಾಡುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಬ್ಯಾಂಕ್ ಸಮಾಜಮುಖಿ ಕಾರ್ಯ ದಲ್ಲಿಯೂ ಮುಂಚೂಣಿಯಲ್ಲಿದೆ ಎಂದು ಎಸ್‌ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಶ್ಲಾಘಿಸಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಪ್ರಸನ್ನ ಎಚ್., ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ, ಉದ್ಯಮಿ ಆನಂದ ಪಿ. ಸುವರ್ಣ, ಉಜ್ವಲ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಅಜಯ್ ಪಿ. ಶೆಟ್ಟಿ, ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಸುಕನ್ಯಾ ಮಾರ್ಟಿಸ್ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷರೂ ಆದ ಶಾಸಕ ಯಶ್‌ಪಾಲ್ ಎ. ಸುವರ್ಣ ಸ್ವಾಗತಿಸಿ, ಸತೀಶ್ಚಂದ್ರ ಶೆಟ್ಟಿ, ವಿಜೇತಾ ಶೆಟ್ಟಿ ನಿರೂಪಿಸಿದರು.
ವೈದ್ಯರಿಗೆ ಸಮ್ಮಾನ
ವೈದ್ಯಕೀಯ ಕ್ಷೇತ್ರದ ಸೇವೆ ಗುರುತಿಸಿ ಹಿರಿಯ ವೈದ್ಯರಾದ ಉಡುಪಿ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಜಿ.ಎಸ್. ಚಂದ್ರಶೇಖರ್, ಡಾ| ಟಿಎಂಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಶಶಿಕಿರಣ್ ಉಮಾಕಾಂತ್ ಅವರನ್ನು ಸಮ್ಮಾನಿಸಲಾಯಿತು. ಜೀವನದಲ್ಲಿ ಸೋತಾಗ ನಿರಾಶರಾಗಬಾರದು. ಗುರಿ ಇಲ್ಲದಿದ್ದರೆ ಜೀವನದಲ್ಲಿ ಯಶಸ್ಸು ಸಾಧ್ಯವಿಲ್ಲ. ಉತ್ತಮ ಓದಿನೊಂದಿಗೆ ಸಾಧಕರಾಗುವ ಮೂಲಕ ಸಮಾಜದ ಒಳಿತಿಗೆ ಶ್ರಮಿಸಬೇಕು ಎಂದು ಸಮ್ಮಾನಿತರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
1,500 ವಿದ್ಯಾರ್ಥಿಗಳಿಗೆ ಪುರಸ್ಕಾರ
ಜಿಲ್ಲೆಯ ಎಸೆಸೆಲ್ಸಿ, ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ವಿಭಾಗದ 1,500 ಪ್ರತಿಭಾವಂತ ವಿದ್ಯಾರ್ಥಿಗಳಿಗೆ 25 ಲಕ್ಷ ರೂ. ಮೊತ್ತದ ಪ್ರತಿಭಾ ಪುರಸ್ಕಾರ ವಿತರಿಸುತ್ತಿದ್ದೇವೆ. ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿದ ಎಲ್ಲ ಜಾತಿ, ಸಮುದಾಯದ ಪ್ರತಿಭಾವಂತರಿಗೆ ಪುರಸ್ಕಾರ ನೀಡುವ ಮೂಲಕ ಅವರ ಶೈಕ್ಷಣಿಕ ಸಾಧನೆಗೆ ಬೆನ್ನೆಲುಬಾಗಿ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಹೇಳಿದರು.