Advertisement

ಮಹಾಜನ ಆಯೋಗ ವರದಿ ಶೀಘ್ರ ಜಾರಿಗೆ ಆಗ್ರಹ

06:15 AM May 29, 2018 | |

ಕಾಸರಗೋಡು: ಅಚ್ಚಗನ್ನಡ ಪ್ರದೇಶವಾದ ಕಾಸರಗೋಡಿನ ಕನ್ನಡಿಗರು 1956 ರಿಂದ ಅನುಭವಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮಹಾಜನ ಆಯೋಗ ವರದಿ ಜಾರಿಯಾಗಲೇ ಬೇಕೆಂದು ಕನ್ನಡ ಸಮನ್ವಯ ಸಮಿತಿ ಅಧ್ಯಕ್ಷ, ಕನ್ನಡ ಹೋರಾಟಗಾರರಾದ ಪುರುಷೋತ್ತಮ ಮಾಸ್ತರ್‌ ಅವರು ಹೇಳಿದರು.

Advertisement

ಕೇರಳ ಸರಕಾರ ಜಾರಿಗೆ ತಂದಿರುವ ಒಂದನೇ ತರಗತಿಯಿಂದ ಹತ್ತನೇ ತರಗತಿಯ ವರೆಗೆ ಮಲಯಾಳ ಕಡ್ಡಾಯ ಕಲಿಕೆಯನ್ನು ಪ್ರತಿಭಟಿಸಿ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಕಾಸರಗೋಡು ಹೊಸ ಬಸ್‌ ನಿಲ್ದಾಣ ಪರಿಸರದಲ್ಲಿ ಆಯೋಜಿಸಿದ ಒಂದು ವಾರ ಧರಣಿ ಸತ್ಯಾಗ್ರಹದ ಆರನೇ ದಿನವಾದ ಸೋಮವಾರದ ಚಳವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ಮಹಾಜನ ವರದಿಯಲ್ಲಿ ಶಿಫಾರಸು ಮಾಡಿದೆ. ಈ ವರದಿ ಇಂದೂ ಕೇಂದ್ರ ಸರಕಾರದಲ್ಲಿ ನನೆಗುದಿಗೆ ಬಿದ್ದಿದೆ. ಈ ವರದಿಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರಕಾರ ಮುಂದಾಗಬೇಕು. ಈ ಮೂಲಕ ಕಾಸರಗೋಡಿನ ಕನ್ನಡಿಗರು ಅನುಭವಿಸುತ್ತಿರುವ ಸಮಸ್ಯೆಗಳಿಂದ ಮತ್ತು ಕೇರಳ ಸರಕಾರದ ದಬ್ಟಾಳಿಕೆಯಿಂದ ಪಾರಾಗಲು ಸಾಧ್ಯ. ಮಹಾಜನ ವರದಿ ಶೀಘ್ರ ಅನಷ್ಠಾನಗೊಳಿಸುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಬೇಕಾದ ಅನಿವಾರ್ಯತೆ ಇದೆ ಎಂದ ಅವರು ಕಾಸರಗೋಡು ಭಾಷಾ ಅಲ್ಪಸಂಖ್ಯಾಕ ಪ್ರದೇಶವೆಂದು ಘೋಷಿಸಲಾಗಿದೆ. ಸಂವಿಧಾನಬದ್ಧವಾಗಿ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾಕರಿಗೆ ನೀಡಲಾದ ಎಲ್ಲಾ ಸವಲತ್ತು, ಹಕ್ಕುಗಳನ್ನು ಕಸಿದು ಕೊಳ್ಳಲು ಕೇರಳ ಸರಕಾರ ನಿರಂತರವಾಗಿ ಯತ್ನಿಸುತ್ತಲೇ ಇದೆ. ಅಧಿಕಾರಿಗಳು ಕನ್ನಡಿಗರ ಸಂವಿಧಾನಬದ್ಧ ಹಕ್ಕುಗಳನ್ನು ಕಸಿದುಕೊಳ್ಳಲು ಮತ್ತು ಹತ್ತಿಕ್ಕಲು ಪ್ರಯತ್ನಿಸುವುದರ ಜೊತೆಗೆ ಕನ್ನಡಿಗರಿಗೆ ಬೆದರಿಕೆಯೊಡ್ಡುವ ಮಟ್ಟಿಗೆ ಮುಂದುವರಿದಿದೆ. ಸರಕಾರದ ಕಡ್ಡಾಯ ಮಲಯಾಳ ಕಲಿಕೆ ಆದೇಶದ ವಿರುದ್ಧ ಕನ್ನಡಿಗರು ನಿರಂತರ ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಆದೇಶ ಹಿಂತೆಗೆಯುವ ತನಕ ಹೋರಾಟವನ್ನು ಮುಂದುವರಿಸಬೇಕೆಂದು ಅವರು ಹೇಳಿದರು.

ಸೋಮವಾರದ ಸರಣಿ ಸತ್ಯಾಗ್ರಹವನ್ನು ವಿದ್ಯಾರ್ಥಿ ಬಳಗ ಕೈಗೆತ್ತಿಕೊಂಡಿರುವುದು ಶ್ಲಾಘನೀಯ. ಯುವ ಜನಾಂಗ ಕನ್ನಡ ಪರ ಹೋರಾಟದಲ್ಲಿ ಸಕ್ರಿಯವಾಗಬೇಕು. ಇದರಿಂದ ಕಾಸರಗೋಡಿನ ಕನ್ನಡಿಗರನ್ನು, ಕನ್ನಡ ಭಾಷೆಯನ್ನು, ಸಂಸ್ಕೃತಿಯನ್ನು ರಕ್ಷಿಸಲು ಸಾಧ್ಯವಾಗುವುದು. ವಿದ್ಯಾರ್ಥಿಗಳ ಬಳಗದ ಮೂಲಕ ನಮ್ಮ ಪರಂಪರೆ, ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸಲು ಸಾಧ್ಯವಾಗುವುದು ಎಂದು ಅವರು ಭರವಸೆ ವ್ಯಕ್ತಪಡಿಸಿದರು. ಕಾಸರಗೋಡು ಎಂದೆಂದೂ ಕನ್ನಡ ನಾಡು. ಇದು ಕರ್ನಾಕದ ಭಾಗವೇ ಆಗಿದೆ. ರಾಜ್ಯ ಪುನರ್ವಿಂಗಡಣೆಯ ಮೂಲಕ ಕಾಸರಗೋಡನ್ನು ಅನ್ಯಾಯವಾಗಿ ಕೇರಳಕ್ಕೆ ಸೇರಿಸುವ ಮೂಲಕ ಕನ್ನಡಿಗರಿಗೆ ಅನ್ಯಾಯವಾಗಿದೆ. 

ಈ ಅನ್ಯಾಯದ ವಿರುದ್ಧ ನಿರಂತರ ಹೋರಾಟವನ್ನು ಮುಂದುವರಿಸಬೇಕೆಂದರು.ಧರಣಿ ಸತ್ಯಾಗ್ರಹದಲ್ಲಿ ಸಿರಿಚಂದನ ಕನ್ನಡ ಯುವ ಬಳಗದ ಅಧ್ಯಕ್ಷ ರಕ್ಷಿತ್‌ ಪಿ.ಎಸ್‌. ಅಧ್ಯಕ್ಷತೆ ವಹಿಸಿದರು.

Advertisement

ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಕಲ್ಮಾಡಿ ಸದಾಶಿವ ಆಚಾರ್‌, ಐ. ಸತ್ಯ ನಾರಾಯಣ ಭಟ್‌, ಸಾಹಿತಿ ರಾಧಾಕೃಷ್ಣ  ಕೆ.ಉಳಿಯತ್ತಡ್ಕ, ಸವಾಕ್‌ ಜಿಲ್ಲಾ ಅಧ್ಯಕ್ಷ ಉಮೇಶ್‌   ಸಾಲಿಯಾನ್‌, ಶ್ರೀಶ ಪಂಜಿತ್ತಡ್ಕ, ನಿವೃತ್ತ ಮುಖ್ಯೋಪಾಧ್ಯಾಯ ಸೀತಾರಾಮ ಮಾಸ್ತರ್‌, ವಿಜಯರಾಜ ಪುಣಿಂಚಿತ್ತಾಯ, ಸ್ನೇಹರಂಗದ   ಅಧ್ಯಕ್ಷೆ ವಿಶಾಲಾಕ್ಷೀ, ಸಿರಿಚಂದನದ ಮಹೇಶ್‌ ಏತಡ್ಕ, ಪ್ರಭಾವತಿ ಕೆದಿಲಾಯ ಮೊದಲಾದವರು ಮಾತನಾಡಿದರು.

ಗಿಳಿವಿಂಡು ಅಧ್ಯಕ್ಷ ಉದಿತ್‌ ಕುಮಾರ್‌, ಪ್ರಶಾಂತ್‌ ಹೊಳ್ಳ, ಕೀರ್ತನ್‌ ಕುಮಾರ್‌, ಲವೀನಾ ಪ್ರೀತಿ ಕ್ರಾಸ್ತಾ, ವಿನೋದ್‌ ಕುಮಾರ್‌ ಸಿ.ಎಚ್‌, ರಾಜೇಶ್‌ ಎಸ್‌.ಪಿ, ಅಜಿತ್‌ ಶೆಟ್ಟಿ, ಸುಬ್ರಹ್ಮಣ್ಯ ಹೇರಳ, ಸಂಶೋಧನಾ ವಿದ್ಯಾರ್ಥಿಗಳಾದ ಸಂಧ್ಯಾ ಕುಮಾರಿ,  ಸೌಮ್ಯಾ ಪ್ರಸಾದ್‌, ಸೌಮ್ಯಾ   ಶೆಟ್ಟಿ, ಸುಜಿತ್‌ ಕುಮಾರ್‌, ಪ್ರದೀಪ್‌ ಕುಮಾರ್‌, ರಶೀದ್‌ ಉಪ್ಪಳ,    ಸ್ವಾತಿ ಸರಳಿ,  ಡಯಟ್‌ನ ವಿದ್ಯಾರ್ಥಿಗಳಾದ ಶ್ಯಾಮ್‌, ಸುಕೃತ, ಸ್ವಾತಿ, ಸ್ನೇಹರಂಗದ ರಾಮಕೃಷ್ಣ, ಬಿಎಡ್‌ ವಿದ್ಯಾರ್ಥಿಗಳಾದ ನಿಷಾ, ಭವ್ಯ ಬಲ್ಲಾಳ್‌, ಸಮಾಜ ಸೇವಕ ರಂಗ ಶರ್ಮಾ, ನ್ಯಾಯವಾದಿ ಅನಂತ ರಾಮ್‌, ಎ.ಟಿ. ನಾೖಕ್‌ ಮೊದಲಾದವರು ಉಪಸ್ಥಿತರಿದ್ದರು.ಸಂಶೋಧನಾ ವಿಭಾಗದ ವಿದ್ಯಾರ್ಥಿನಿ ಸೌಮ್ಯಾ ಅವರು ಸ್ವಾಗತಿಸಿದರು. ಕಾರ್ತಿಕ್‌ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ಭಾಸ್ಕರ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಇಂದು ಸಮಾರೋಪ 
ಒಂದು ವಾರಗಳ ಧರಣಿ ಸತ್ಯಾಗ್ರಹದ ಪ್ರಥಮ ಹಂತದ ಸಮಾರೋಪ ಮೇ 29 ರಂದು ಸಂಜೆ 4 ಗಂಟೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರು ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ.

ಹೋರಾಟ ಅನಿವಾರ್ಯ 
ಯಕ್ಷಗಾನದಿಂದ ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಇನ್ನೂ ಜೀವಂತವಾಗಿದೆ. ಜೀವಂತವಾಗಿರುವ ಭಾಷೆ ಮತ್ತು ಸಂಸ್ಕೃತಿಯನ್ನು ಹತ್ತಿ ಕ್ಕಲು ಮಲಯಾಳ ಕಲಿಕೆ ಕಡ್ಡಾಯ ಆದೇಶದ ಮೂಲಕ ಕೇರಳ ಸರಕಾರ ಪ್ರಯತ್ನಿಸುತ್ತಿದೆ. ಇದರ ವಿರುದ್ಧ ಹೋರಾಟ ಅನಿವಾರ್ಯವಾಗಿದೆ. ಇದಕ್ಕಾಗಿ ಕನ್ನಡಿಗರೆಲ್ಲ ಒಂದಾಗಿ ಹೋರಾಟವನ್ನು ತೀವ್ರಗೊಳಿಸಬೇಕು.
– ದಾಮೋದರ ಶೆಟ್ಟಿ 
ನ್ಯಾಯವಾದಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ 

ಕನ್ನಡ ಭಾಷೆ, ಸಂಸ್ಕೃತಿ ನಾಶ 
ಭಾಷಾ ಅಲ್ಪಸಂಖ್ಯಾಕರ ಮೇಲೆ ಮಲಯಾಳ ಕಲಿಕೆ ಕಡ್ಡಾಯಗೊಳಿಸುವ ಆದೇಶದ ಮೂಲಕ ಕನ್ನಡ ಭಾಷೆ, ಸಂಸ್ಕೃತಿ ನಾಶಕ್ಕೆ ಕೇರಳ ಸರಕಾರ ಹೊರಟಿದೆ. ಭಾಷೆ ಹೇರಿಕೆಯಿಂದ ಕೆಲವೇ ವರ್ಷಗಳಲ್ಲಿ ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಸರ್ವನಾಶವಾಗುವುದರಲ್ಲಿ ಎಳ್ಳಷ್ಟು ಸಂಶಯವಿಲ್ಲ. ಈ ಹಿನ್ನೆಲೆಯಲ್ಲಿ ನಾವೆಲ್ಲ ಎಚ್ಚೆತ್ತುಕೊಂಡು ಸರಕಾರದ ದಬ್ಟಾಳಿಕೆ ನೀತಿಯನ್ನು ಪ್ರತಿಭಟಿಸೋಣ. ಕನ್ನಡಿಗರು ಇಂದಿನಿಂದಲೇ ಕ್ರಿಯಾತ್ಮಕತೆಯನ್ನು ರೂಢಿಸಿಕೊಳ್ಳಬೇಕು.
– ಶ್ರದ್ಧಾ ನಾಯರ್ಪಳ್ಳ 

ವಿದ್ಯಾರ್ಥಿಗಳ ನೇತೃತ್ವ 
ಸೋಮವಾರ ನಡೆದ ಸರಣಿ ಸತ್ಯಾಗ್ರಹದ ಪೂರ್ಣ ನೇತೃತ್ವವನ್ನು ವಿದ್ಯಾರ್ಥಿಗಳೇ ವಹಿಸಿಕೊಂಡಿದ್ದರು. ಕಾಸರಗೋಡು ಸರಕಾರಿ ಕಾಲೇಜಿನ ಸ್ನೇಹರಂಗ, ಮಂಜೇಶ್ವರ ಗೋವಿಂದ ಪೈ ಸರಕಾರಿ ಕಾಲೇಜಿನ ಗಿಳಿವಿಂಡು, ಡಯಟ್‌, ಬಿಎಡ್‌ ಕಾಲೇಜುಗಳ ಕನ್ನಡ ವಿದ್ಯಾರ್ಥಿಗಳು ಒಗ್ಗೂಡಿ ಧರಣಿಗೆ ನೇತೃತ್ವ ವಹಿಸಿ ಯುವ ಬಳಗದಲ್ಲಿ ಕನ್ನಡದ ಅಭಿಮಾನ, ಸಂಸ್ಕೃತಿ ಬಗೆಗಿನ ಕಾಳಜಿಯನ್ನು ತೋರಿಸಿ ಸರಕಾರದ ದಬ್ಟಾಳಿಕೆಯನ್ನು ಪ್ರತಿಭಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next