ಮಂಗಳೂರಿನ “ಕದ್ರಿ ನೃತ್ಯ ವಿದ್ಯಾನಿಲಯ’ದ ವಿದ್ವಾನ್ ಯು.ಕೆ. ಪ್ರವೀಣ್ ಅವರ ಶಿಷ್ಯೆ ಕುಮಾರಿ ಮಾಹಿಕಾ ಅವರ ಭರತ ನಾಟ್ಯ ರಂಗ ಪ್ರವೇಶ ಮಂಗಳೂರಿನಲ್ಲಿ ಇತ್ತೀಚೆಗೆ ಜರಗಿತು. ರಂಗಾರೋಹಣ ಮಾಡಿದ ಮಾಹಿಕಾ 13 ವರ್ಷದ ಬಾಲ ಪ್ರತಿಭೆ.
ಆಕರ್ಷಕ ಭಾವಭಂಗಿಗಳು, ನಿರ್ದಿಷ್ಟ ಹಸ್ತಮುದ್ರೆಗಳು, ಉತ್ತಮ ಅಂಗಶುದ್ಧಿ ಹಾಗೂ ಭಾವ ತೀವ್ರತೆಯ ಅಭಿನಯಗಳ ಸಾಮರ್ಥ್ಯದೊಂದಿಗೆ ಸುಮಾರು ಎರಡು ಗಂಟೆಗಳ ಅವಧಿಯ ಸುಂದರ ಪ್ರದರ್ಶನ ನೀಡಿದರು. ನೃತ್ತಭಾಗಗಳು, ಕಲಾ ಪ್ರದರ್ಶನದ ವರ್ಚಸ್ಸು ವೃದ್ಧಿಗೆ ಬೇಕಾದ ಅಮಿತ ಉತ್ಸಾಹ ಹಾಗೂ ಆತ್ಮಸ್ಥೈರ್ಯದೊಂದಿಗೆ ಲವಲವಿಕೆಯಿಂದ ನರ್ತಿಸಿ ಮನಸೆಳೆದರು.
ಮೊದಲಿಗೆ ಷಣ್ಮುಖಪ್ರಿಯ ರಾಗದ ಸಾಂಪ್ರದಾಯಿಕ ಪುಷ್ಪಾಂಜಲಿಯೊಂದಿಗೆ ರಂಗಪ್ರವೇಶ ಮಾಡಿ ಕಲ್ಯಾಣಿ ರಾಗದ ಸರಸ್ವತಿ ಸ್ತುತಿಯನ್ನು ಭಕ್ತಿಭಾವ ಪೂರ್ಣವಾಗಿ ಸಾದರ ಪಡಿಸಿ ಪ್ರದರ್ಶನಕ್ಕೆ ಒಳ್ಳೆಯ ಆರಂಭ ನೀಡಿದರು. ಅನಂತರ ರಾಗಮಾಲಿಕೆಯ ಜತಿಸ್ವರದಲ್ಲಿ ಕಲಾವಿದೆಗೆ ತಾಳಲಯದ ಮೇಲಿರುವ ಹಿಡಿತ, ಅಂಗಶುದ್ಧಿಯ ಸಮರ್ಪಕತೆಯ ಕಡೆಗೆ ಇರುವ ಪ್ರಯತ್ನಗಳು ಮೆಚ್ಚುವಂತಿತ್ತು. ವಸಂತ, ಕಮಾಚ ಹಾಗೂ ಸ್ವರಬೇಧಗಳಿಗೆ ತಕ್ಕಂತೆ ಮೇಳನಗೊಳಿಸಿದ್ದ ಅಡವುಗಳ ಸಂಯೋಜನೆ ಗಮನ ಸೆಳೆಯುವಂತಿತ್ತು.
ಸಾಮಾನ್ಯವಾಗಿ ಒಂದು ಭರತನಾಟ್ಯ ರಂಗಪ್ರವೇಶದ ಪ್ರಧಾನ ಭಾಗವೆಂದರೆ “ಪದವರ್ಣ’, ಕಲಾವಿದೆಯ ನೃತ್ತ ಹಾಗೂ ಅಭಿನಯ ಸಾಮರ್ಥ್ಯವನ್ನು ಒರೆಗೆ ಹಚ್ಚಬಲ್ಲ ಪದವರ್ಣ ಒಂದು ಸುದೀರ್ಘ ಅವಧಿಯ ನೃತ್ಯಬಂಧ. ಲಾಗಾಯ್ತಿನಿಂದಲೂ ತಮಿಳು ಹಾಗೂ ತೆಲುಗು ಭಾಷೆಯ ಸಾಹಿತ್ಯದ ಪದವರ್ಣಗಳೇ ಹೆಚ್ಚು ಪ್ರಚಲಿತ. ಆದರೆ ಇತ್ತೀಚಿನ ದಿನಗಳಲ್ಲಿ ಕಲಾವಿದರು ಕನ್ನಡದ ಪದವರ್ಣಗಳನ್ನು ಪ್ರಯೋಗಿಸುತ್ತಿರುವುದು ಒಂದು ಆಶಾದಾಯಕ ಬೆಳವಣಿಗೆ. ಮಹಿಕಾ ಆಯ್ದುಕೊಂಡಿದ್ದು ಸುಬ್ಬುಡು ಅವರ ಪದವರ್ಣ. ತೆಲುಗು ರಚನೆಯ ಈ ಪದವರ್ಣವನ್ನು ಅದರ ಮೂಲ ಸಾಹಿತ್ಯಕ್ಕೆ ಕುಂದಾಗದಂತೆ ವಿದುಷಿ ಉಷಾ ಪ್ರವೀಣ್ ಅವರೇ ಕನ್ನಡಕ್ಕೆ ಅನುವಾದಿಸಿದ ರೀತಿ ಮೆಚ್ಚುವಂತಿತ್ತು.
“ಶಂಕರ ಶ್ರೀ ಗಿರಿನಾಥ ಪ್ರಭು’ ಕೃತಿ, ಅಡಪೋದಲ್ಲಿ ಮಕ್ಕಳು’ ಎಂಬ ದೇವರ ನಾಮ ಹಾಗೂ ಚಕ್ರವಾಕ ರಾಗದ ತಿಲ್ಲಾನ ಎಲ್ಲದರಲ್ಲೂ ಕಲಾವಿದೆಯ ಉತ್ಸಾಹ ಪೂರ್ಣ ಚಲನವಲನಗಳು ಎದ್ದುಕಂಡಿತು. ಕೊನೆಯಲ್ಲಿ ಪ್ರಕೃತಿಯ ಕುರಿತಾಗಿ ಸ್ಮಿತಾಪ್ರಭು ಅವರು ರಚಿಸಿದ ಕೊಂಕಣಿ ಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
ಕಾರ್ಯಕ್ರಮದ ವರ್ಚಸ್ಸನ್ನು ಹೆಚ್ಚಿಸಿದ ಎರಡು ಪ್ರಮುಖ ಅಂಶಗಳೆಂದರೆ, ವಿದ್ವಾನ್ ಯು.ಕೆ. ಪ್ರವೀಣ್ ಅವರ ನಟುವಾಂಗ ಮತ್ತು ಉಷಾ ಪ್ರವೀಣ್ ಅವರ ಗಾಯನ. ಅದಕ್ಕೆ ಪೂರಕವಾಗಿ ಶ್ರೀಧರ ಆಚಾರ್ ಅವರ ವೈಲಿನ್, ರಾಜಗೋಪಾಲ್ ಅವರ ಕೊಳಲು ಹಾಗೂ ಕಣ್ಣನ್ ಅವರ ಹದವರಿತ ಮೃದಂಗ ವಾದನ.
ಕೆ. ರಾಮಮೂರ್ತಿ ರಾವ್