Advertisement

ಭಾವಪರವಶಗೊಳಿಸಿದ ತ್ರಿಜನ್ಮ ಮೋಕ್ಷ 

06:00 AM Oct 12, 2018 | Team Udayavani |

ಅಂದು ಹಿರಣ್ಯಾಕ್ಷ ಮಾಡಿದಂತೆ ಇಂದು ಪೃಕೃತಿಯಿಂದ ಮಳೆ ಬೆಳೆ ಪಡೆದು ಪ್ರತ್ಯುಪಕಾರವಾಗಿ ಮಾನವ ಮಾಡುತ್ತಿರುವುದೇನು? ಪ್ರಕೃತಿ ಮುನಿದರೆ ಮನುಕುಲ ಉಳಿದೀತೇ? ಪ್ರೇಕ್ಷಕರ ಮನಸ್ಸಿನಲ್ಲಿ ಆ ದೃಶ್ಯ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿತು.

Advertisement

ಬೈಂದೂರು ಸೇನೇಶ್ವರ ದೇಗುಲದ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ನಡೆದ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ ಇವರ “ತ್ರಿಜನ್ಮ ಮೋಕ್ಷ’ ಪ್ರಸಂಗ ವೀಕ್ಷಕರ ಕಣ್ಮನಗಳಿಗೆ ತಂಪೆರೆಯಿತು.ವಿಶಾಲ ಕಾಯ, ಬೀಭತ್ಸ ಮುಖ ಮುದ್ರೆಯ ಹಿರಣ್ಯಾಕ್ಷ-ಹಿರಣ್ಯಕಶಿಪುವಿನ ವೈಶಿಷ್ಟ್ಯಮಯ ಭಂಗಿ (ಗಣೇಶ ಶೆಟ್ಟಿ ಆರಣ್‌ ಮತ್ತು ಗೋವಿಂದ ಭಟ್‌ ನಿಡ್ಲೆ), ಸುರ ಸುಂದರಾಂಗಿಯಂತೆ ಮನ ಸೆಳೆವ ಅತ್ಯಾಕರ್ಷಕ ವಸ್ತ್ರಾಲಂಕಾರಗೊಂಡ ಕಯಾದು (ಕೆದಿಲ ಜಯರಾಮ ಭಟ್‌) ಪ್ರೇಕ್ಷಕರನ್ನು ಹಿಡಿದಿರಿಸಿದರು. ವರಾಹವತಾರಿ ವಿಷ್ಣುವಿನ (ಪದ್ಮನಾಭ ಶೆಟ್ಟಿ) ಹಾವಭಾವಗಳು ಪ್ರಶಂಸೆಗೆ ಪಾತ್ರವಾಯಿತು. 

ಹಿರಣ್ಯಕಶಿಪುವಿನ ಸರಸ,ಪುತ್ರ ವಾತ್ಸಲ್ಯ, ವಿಷ್ಣು ದ್ವೇಷದ ಜತೆಯಲ್ಲಿ ಆತನ ವ್ಯಕ್ತಿತ್ವದ ಆದರ್ಶಗಳನ್ನೊಳಗೊಂಡ ಬಹುಮುಖ ವ್ಯಕ್ತಿತ್ವವನ್ನು ತೆರೆದಿಡುವ ಪ್ರಾಮಾಣಿಕ ಪ್ರಯತ್ನ ಪ್ರಶಂಸನೀಯವಾಯಿತು. ಪ್ರಹ್ಲಾದನ (ಗೌತಮ ಶೆಟ್ಟಿ) ಮೋಹಕ ವ್ಯಕ್ತಿತ್ವ, ನಾರದನ (ಕುಂಬ್ಳೆ ಶ್ರೀಧರ ರಾವ್‌) ಪ್ರೌಢಿಮೆ ಭೇಷ್‌ ಎನಿಸಿಕೊಂಡಿತು. ಪ್ರಹ್ಲಾದನ ಗುರುಕುಲ ವಿದ್ಯಾಭ್ಯಾಸದ ದೃಶ್ಯಗಳಲ್ಲಿ ಬಂದ ಸಹಪಾಠಿಗಳ ತುಂಟತನ ನಗೆಗಡಲಲ್ಲಿ ತೇಲಿಸಿತು. 

ಹರಿಯನ್ನು ಅರಸುತ್ತಾ ಬಂದ ಹಿರಣ್ಯಾಕ್ಷನಿಗೆ ನಾರದರು ಭೂದೇವಿಯನ್ನು (ಪುತ್ತೂರು ಗಂಗಾಧರ ಜೋಗಿ) ಹಿಡಿದಿಟ್ಟರೆ ಆಕೆಯ ಪತಿಯಾದ ನಾರಾಯಣ ಬಂದೇ ಬರುತ್ತಾನೆ ಎನ್ನುವ ಸಲಹೆ ನೀಡುತ್ತಾರೆ. ಹಿರಣ್ಯಾಕ್ಷ ಭೂದೇವಿಯನ್ನು ಅಟ್ಟಿಕೊಂಡು ಅಟ್ಟಾಡಿಸುತ್ತಾನೆ. ಲೋಕ ಕಂಟಕ ರಾಕ್ಷಸರು ಅಂದೂ ಇದ್ದರು, ಅಸುರಿ ಪ್ರವೃತ್ತಿಯ ದಾನವರೂ ಇಂದೂ ಇದ್ದಾರೆ. ಭಯವಿಹ್ವಲಳಾದ ಭೂದೇವಿ ಆರ್ತನಾದ ಮಾಡುತ್ತಾ ಓಡುತ್ತಿರುವ ಆ ಅದ್ಭುತ ದೃಶ್ಯ ಆ ಕ್ಷಣ ಪ್ರಜ್ಞಾವಂತ ವೀಕ್ಷಕರ ಮನಸ್ಸಿನಲ್ಲಿ ತಳಮಳ ಉಂಟುಮಾಡಿದ್ದರಲ್ಲಿ ಸಂದೇಹವಿಲ್ಲ. ಅಂದು ಹಿರಣ್ಯಾಕ್ಷ ಮಾಡಿದಂತೆ ಇಂದು ಪೃಕೃತಿಯಿಂದ ಮಳೆ ಬೆಳೆ ಪಡೆದು ಪ್ರತ್ಯುಪಕಾರವಾಗಿ ಮಾನವ ಮಾಡುತ್ತಿರುವುದೇನು? ಪ್ರಕೃತಿ ಮುನಿದರೆ ಮನುಕುಲ ಉಳಿದೀತೇ? ಪ್ರೇಕ್ಷಕರ ಮನಸ್ಸಿನಲ್ಲಿ ಆ ದೃಶ್ಯ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿತು. ಅಷ್ಟೊಂದು ಪರಿಣಾಮಕಾರಿಯಾಗಿತ್ತು ಆ ದೃಶ್ಯ! ಹಿರಣ್ಯಾಕ್ಷ ಇಂದಿನ ಪೃಕೃತಿ ನಾಶಗೈಯ್ಯುತ್ತಿರುವ ದುರುಳರಂತೆ ಕಂಡ. 

    ಕರುಣಾಕರ ಶೆಟ್ಟಿಯವರ ಭಾಗವತಿಕೆಯ ಯಕ್ಷಗಾನ ಪ್ರಸಂಗಕ್ಕೆ ಪಡ್ರೆ ಶ್ರೀಧರ್‌ ಅವರ ಚೆಂಡೆ ಮತ್ತು ಗಣಪತಿ ನಾಯ್ಕ… ಅವರ ಮದ್ದಳೆ ಅಂದ ಹೆಚ್ಚಿಸಿತು. ಭಾಗವತರ ಭಾವಪರವಶ ಹಾಡುಗಾರಿಕೆ ಯಕ್ಷಗಾನ ಪ್ರೇಮಿಗಳ ಮನ ಗೆದ್ದಿತು.

Advertisement

ಬೈಂದೂರು ಚಂದ್ರಶೇಖರ ನಾವಡ 

Advertisement

Udayavani is now on Telegram. Click here to join our channel and stay updated with the latest news.

Next