ಮಹದೇವಪುರ: ಪಶುಪಾಲನೆ ಆಸ್ಪತ್ರೆಗಳನ್ನು ಸ್ಥಳಾಂತರ ಮಾಡುಲು ಮುಂದಾಗಿರುವ ರಾಜ್ಯ ಸರಕಾರದ ನಿರ್ಣಯವನ್ನು ಖಂಡಿಸಿ ನೂರಾರು ಜಾನುವಾರುಗಳನ್ನು ಹಿಡಿದು ರೈತರು ಪ್ರತಿಭಟನೆಯನ್ನು ಮಾಡಿದರು.
ಕ್ಷೇತ್ರದ ಹಲನಾಯಕನಹಳ್ಳಿ ಸೇರಿದಂತೆ ಹಲವು ಕಡೆ ರಾಜ್ಯ ಸರ್ಕಾರ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಪಶು ಆಸ್ಪತ್ರೆಗಳನ್ನು ಸ್ಥಳಾಂತರ ಮಾಡಲು ಮುಂದಾಗಿರುವುದು ಸೂಕ್ತವಲ್ಲ ಎಂದು ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಮನೋಹರ ರೆಡ್ಡಿ, ಇಲ್ಲಿನ ಪಶು ಆಸ್ಪತ್ರೆ ರೈತರಿಗೆ ಅಗತ್ಯವಾಗಿದೆ, ಹದಿನೆಂಟು ಹಳ್ಳಿಗಳಿಗೆ ಇದ್ದ ಏಕೈಕ ಪಶು ಆಸ್ಪತ್ರೆ ಇದು, ಚಿಕಿತ್ಸೆಗಾಗಿ ಕಿಲೋಮೀಟರ್ ಗಟ್ಟಲ್ಲೆ ಹೋಗಲು ಸಾಧ್ಯವಿಲ್ಲ, ತುರ್ತು ಪರಿಸ್ಥಿತಿಯಲ್ಲಿ ಪ್ರಾಣ ಹಾನಿಯಾಗುವ ಸಾಧ್ಯತೆ ಹೆಚ್ಚು ಇದನ್ನು ಅರಿತು ರೈತರಿಗೆ ನ್ಯಾಯಸಿಗುವಂತೆ ಮಾಡಬೇಕು ಎಂದು ಸರಕಾರಕ್ಕೆ ಮನವಿ ಮಾಡುವೆ ಎಂದರು.
ಇಂದು ಪಶು ಆಸ್ಪತ್ರೆ ಮುಂಭಾಗ ನೂರಾರು ಎಮ್ಮೆ, ಹಸು, ಕುರಿ, ಕೋಳಿಗಳೊಂದಿಗೆ ಪ್ರತಿಭಟನೆ ಮಾಡಿದ್ದೇವೆ, ಇದನ್ನು ಸರಿಪಡಿಸದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಸಾವಿರಾರು ರಾಸುಗಳೊಂದಿಗೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಸ್ಥಳೀಯ ಯುವ ರೈತ ಮುಖಂಡ ಗೌರವ್ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಸರಿಯಾದ ರೀತಿಯಲ್ಲಿ ಸರ್ವೇ ಮಾಡದೆ ಪಶು ಆಸ್ಪತ್ರೆ ಸ್ಥಳಾಂತರಕ್ಕೆ ಇಲಾಖೆ ಮುಂದಾಗಿರುವುದು ಸರಿಯಲ್ಲ, ನಮ್ಮ ಗ್ರಾಮದಲ್ಲಿರುವ ಪಶು ಆಸ್ಪತ್ರೆಯನ್ನು ಉಳಿಸಿಕೊಡಬೇಕೆಂದು ಸರ್ಕಾರಕ್ಕೆ ರೈತರ ಪರವಾಗಿ ಮನವಿ ಮಾಡುವೆ ಎಂದು ಗ್ರಾ.ಪ ಅಧ್ಯಕ್ಷ ಸವಿತಾ ಬಾಬು ರೆಡ್ಡಿ ತಿಳಿಸಿದರು.
ಸ್ಥಳೀಯ ರೈತ ಮುಖಂಡರು ಸೋಮಶೇಖರ್, ಕೃಷ್ಣಮೂರ್ತಿ, ಪ್ರಕಾಶ್, ರಮೇಶ್ ರೆಡ್ಡಿ, ರಾಜಣ್ಣ, ಲೋಕೇಶ್, ದಿವಾಕರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.