ಮಹದೇವಪುರ: ಲಿಫ್ಟ್ ನಿರ್ಮಾಣ ಮಾಡಲು ತೆಗೆದಿದ್ದ ಗುಂಡಿಗೆ ಬಿದ್ದು 5 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಕಾಡುಗೋಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಾಡುಗೋಡಿಯ ಕನ್ನಮಂಗಲ ನಿವಾಸಿ ಸುಹಾಸ್ ಗೌಡ (5) ಮೃತ ಬಾಲಕ.
ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಕನ್ನಮಂಗಲದಲ್ಲಿ ನೂತ ನವಾಗಿ ನಿರ್ಮಾಣ ಮಾಡುತ್ತಿರುವ ಹಾಲಿನ ಡೇರಿಯ ಕಟ್ಟಡದ ಲಿಫ್ಟ್ ಗುಂಡಿಯಲ್ಲಿ ಘಟನೆ ನಡೆದಿದೆ. ಮಗುವಿನ ತಾಯಿ ನೀಡಿರುವ ದೂರು ಆಧರಿಸಿ, ಹಾಲಿನ ಡೇರಿಯ ಅಧ್ಯಕ್ಷ ಸೊಣ್ಣಪ್ಪ ಹಾಗೂ ಕಾರ್ಯದರ್ಶಿ ಸುನಿಲ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಮುಳಬಾಗಿಲು ಮೂಲದ ಶ್ರೀಕನ್ಯಾ ಮತ್ತು ದೊಡ್ಡಬಳ್ಳಾಪುರ ಮೂಲದ ಮುನಿರಾಜು ಆರೇಳು ವರ್ಷಗಳ ಹಿಂದೆ ಮದುವೆಯಾಗಿದ್ದು, ಕೌಟುಂಬಿಕ ವಿಚಾರವಾಗಿ ದಂಪತಿ ದೂರವಾಗಿದ್ದಾರೆ. ಹೀಗಾಗಿ ಶ್ರೀಕನ್ಯಾ, ಪುತ್ರ ಸುಹಾಸ್‌ಗೌಡ ಪ್ರತ್ಯೇಕವಾಗಿದ್ದಾರೆ. ಕನ್ನಮಂಗಲದ ಅಪಾರ್ಟ್‌ಮೆಂಟ್‌ನಲ್ಲಿ ಮನೆ ಕೆಲಸ ಮಾಡಿಕೊಂಡಿದ್ದ ಶ್ರೀಕನ್ಯಾ, ಅಲ್ಲಿಯೇ ಇದ್ದ ಕೋಣೆಯಲ್ಲಿ ಪುತ್ರನ ಜತೆ ವಾಸವಾಗಿದ್ದಾರೆ. ಮನೆ ಸಮೀಪದಲ್ಲಿ ಹೊಸದಾಗಿ ಡೇರಿ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಅದರಲ್ಲಿ ಲಿಫ್ಟ್ ನಿರ್ಮಿಸಲು 5 ಅಡಿ ಸುತ್ತಳತೆಯ ಗುಂಡಿ ತೆಗೆಯಲಾಗಿದೆ. ಆದರೆ, ಮೇಲ್ಭಾಗದಲ್ಲಿ ಮುಚ್ಚಿರಲಿಲ್ಲ. ಬುಧವಾರ ಬೆಳಗ್ಗೆ ಸುಹಾಸ್‌ಗೌಡ ಹಾಗೂ ಇತರೆ ಮಕ್ಕಳು ಆಟವಾಡುತ್ತ ನಿರ್ಮಾಣ ಹಂತದ ಕಟ್ಟಡದ ಒಳಗೆ ಹೋಗಿದ್ದಾರೆ. ಈ ವೇಳೆ ಆಯತಪ್ಪಿ ಸುಹಾಸ್‌ಗೌಡ ಲಿಫ್ಟ್ ನ ಗುಂಡಿಗೆ ಬಿದ್ದಿದ್ದಾನೆ. ಇತರೆ ಮಕ್ಕಳು ಗಾಬರಿಗೊಂಡು ಸ್ಥಳದಿಂದ ಓಡಿ ಹೋಗಿದ್ದಾರೆ. ಮಳೆಯಿಂದಾಗಿ ನೀರು ತುಂಬಿದ್ದರಿಂದ ಗುಂಡಿಯಲ್ಲೇ ಸುಹಾಸ್‌ಗೌಡ ಮೃತಪ್ಟಟಿದ್ದಾನೆ ಎಂದು ಪೊಲೀಸರು ಹೇಳಿದರು.
ಸ್ಥಳೀಯರ ಪ್ರತಿಭಟನೆ: ಗುಂಡಿ ತೆಗೆದು ಹಾಗೆಯೇ ಬಿಟ್ಟಿದ್ದರಿಂದ ದುರಂತ ಸಂಭವಿಸಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿ ಪ್ರತಿಭಟನೆ ನಡೆಸಿದರು.