ಬೆಂಗಳೂರು:ವಿಧಾನಸಭೆ ಚುನಾವಣೆಯಲ್ಲಿನ ಮನಸ್ತಾಪದಿಂದ ದೂರಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಮತ್ತೆ ಒಂದಾಗಿದ್ದಾರೆ. ಅನೇಕ ದಿನಗಳಿಂದ ಸಿದ್ದರಾಮಯ್ಯ ವಿರುದ್ಧ ಮುನಿಸಿಕೊಂಡಿದ್ದ ಡಾ. ಎಚ್.ಸಿ. ಮಹದೇವಪ್ಪ ಶುಕ್ರವಾರ ಸಿದ್ದರಾಮಯ್ಯ ಕಣ್ಣಿನ ಚಿಕಿತ್ಸೆಗೆ ಆಸ್ಪತ್ರೆಗೆ ತೆರಳಿದಾಗ ಅಲ್ಲಿಯೇ ಅವರನ್ನು ಭೇಟಿ ಮಾಡಿದ್ದಾರೆ.
ಅಲ್ಲಿಂದ ಇಬ್ಬರೂ ಒಂದೇ ಕಾರಿನಲ್ಲಿ ಸಿದ್ಧರಾಮಯ್ಯನವರ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿ ಸುಮಾರು ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಮಹದೇವಪ್ಪ ತಮ್ಮ ಬೆಂಬಲಕ್ಕೆ ಬಂದಿಲ್ಲ ಎಂದು ಸಿದ್ದರಾಮಯ್ಯ ಅವರ ಮೇಲೆ ಬೇಸರ ವ್ಯಕ್ತಪಡಿಸಿದ್ದರು ಎಂದು ತಿಳಿದು ಬಂದಿದೆ. ಅದೇ ರೀತಿ ಮಹದೇವಪ್ಪ ಕೂಡ ಸಿದ್ದರಾಮಯ್ಯ ನಡವಳಿಕೆಯಿಂದ ಬೇಸತ್ತು ಅವರಿಂದ ದೂರವಾಗಿದ್ದರು ಎನ್ನಲಾಗಿತ್ತು.
ಚುನಾವಣೆ ನಂತರ ಮಹದೇವಪ್ಪ ಎರಡು ಬಾರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರೂ, ಇಬ್ಬರ ನಡುವಿನ ಶೀತಲ ಸಮರ ಮುಂದುವರೆದಿತ್ತು. ಕಳೆದ ಒಂದು ತಿಂಗಳಿನಿಂದ ಮಹದೇವಪ್ಪ ತೂಕ ಕಡಿಮೆ ಮಾಡಿಕೊಳ್ಳಲು ಪ್ರಕೃತಿ ಚಿಕಿತ್ಸಾಲಯಕ್ಕೆ ತೆರಳಿದ್ದರಿಂದ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಶುಕ್ರವಾರ ನೇರವಾಗಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗುವ ಮೂಲಕ ತಮ್ಮ ಹಳೆಯ ಮನಿಸು ಮರೆತಿರುವ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ನಡುವೆ ಕಳೆದ ಎರಡು ದಿನಗಳಿಂದ ಕಣ್ಣು ನೋವಿನಿಂದ ವಿಶ್ರಾಂತಿ ಪಡೆಯುತ್ತಿರುವ ಸಿದ್ದರಾಮಯ್ಯ ಅವರನ್ನು ಶುಕ್ರವಾರ ಸಚಿವಾಕಾಂಕ್ಷಿ ಕಾಂಗ್ರೆಸ್ ಶಾಸಕರು ನಿಗಮ ಮಂಡಳಿ ಅಧಕ್ಷ ಸ್ಥಾನದ ಆಕಾಂಕ್ಷಿಗಳು ಭೇಟಿ ಮಾಡಿ ಮಾತುಕತೆ ನಡೆಸಿದರು.
ಸಂಡೂರು ಶಾಸಕ ತುಕಾರಾಂ, ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್, ಹರಿಹರ ಶಾಸಕ ರಾಮಪ್ಪ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಸಿದ್ದರಾಮಯ್ಯ ಭೇಟಿ ನಂತರ ಮಾತನಾಡಿದ ಹರಿಹರ ಶಾಸಕ ರಾಮಪ್ಪ, ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ದಾವಣಗೆರೆ ಜಿಲ್ಲೆಯಲ್ಲಿ ಪಕ್ಷದ ಹಿರಿಯ ನಾಯಕ ಶಾಮನೂರು ಶಿವ ಶಂಕರಪ್ಪಗೆ ಸಚಿವ ಸ್ಥಾನ ನೀಡಬೇಕು. ನಾನು ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೇಳಿದ್ದೇನೆ. ನಿಗಮ ಮಂಡಳಿಯಲ್ಲಿ ನನ್ನ ಹೆಸರಿದೆ ಎಂದರು.
ಬಿಜೆಪಿ ನಾಯಕರು ನನಗೂ ಕರೆ ಮಾಡಿ ಪಕ್ಷ ಸೇರುವಂತೆ ಆಮಿಷ ಒಡ್ಡಿದ್ದರು. ಆದರೆ, ಯಾರು ಕರೆ ಮಾಡಿದ್ದರು ಎಂದು ಹೇಳುವುದು ಬೇಡ. ನಾನು ಕಾಂಗ್ರೆಸ್ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ ಎಂದು ಹೇಳಿದರು.