Advertisement

ವರ್ಷಾಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಲು ಮಹದೇವಪ್ಪ ಸೂಚನೆ

11:32 AM Aug 19, 2017 | Team Udayavani |

ಮೈಸೂರು: ಸಿದ್ಧಾರ್ಥ ನಗರದ ಜರ್ಮನ್‌ ಪ್ರಸ್‌ ಆವರಣದ ಜಾಗದಲ್ಲಿ 97 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಜಿಲ್ಲಾಮಟ್ಟದ ಕಚೇರಿಗಳ ಸಂಕೀರ್ಣ ಸೇರಿದಂತೆ ನಗರದಲ್ಲಿ ಕೈಗೆತ್ತಿಕೊಳ್ಳಲಾಗಿರುವ ವಿವಿಧ ಕಾಮಗಾರಿಗಳ ಪ್ರಗತಿಯನ್ನು ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಪರಿಶೀಲನೆ ನಡೆಸಿದರು.

Advertisement

ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಶುಕ್ರವಾರ ಬೆಳಗ್ಗೆ ವಿಜಯ ನಗರದಲ್ಲಿರುವ ತಮ್ಮ ನಿವಾಸದಿಂದ ನಗರ ಪ್ರದಕ್ಷಿಣೆ ಆರಂಭಿಸಿದ ಸಚಿವರು, ವಿವಿಧ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಸಂಬಂಧಿಸಿದ ಎಂಜಿನಿಯರುಗಳು, ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಂದ ಮಾಹಿತಿ ಪಡೆದು ಈ ವರ್ಷಾಂತ್ಯಕ್ಕೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ಸಿದ್ಧಾರ್ಥ ನಗರದಲ್ಲಿ ನಿರ್ಮಿಸಲಾಗುತ್ತಿರುವ ಜಿಲ್ಲಾ ಮಟ್ಟದ ಕಚೇರಿಗಳ ಸಂಕೀರ್ಣದಲ್ಲಿ ನೆಲಮಟ್ಟದ ಕಾಮಗಾರಿ ಪೂರ್ಣಗೊಂಡಿದ್ದು, ನೆಲಮಾಳಿಗೆ, ನೆಲ ಅಂತಸ್ತು, ಮೊದಲ ಮತ್ತು ಎರಡನೇ ಅಂತಸ್ತಿನ ಸಿವಿಲ್‌ ಕಾಮಗಾರಿಗೆ ಸಂಬಂಧಿಸಿದಂತೆ ಮೊದಲ ಹಂತದ ಬಹುತೇಕ ಕೆಲಸಗಳು ಪೂರ್ಣಗೊಂಡಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು.

ಮೊದಲ ಹಂತದ ಕಾಮಗಾರಿಗೆ 67 ಕೋಟಿ ರೂ. ನಿಗದಿಪಡಿಸಲಾಗಿದ್ದು, ಈ ಪೈಕಿ 32 ಕೋಟಿ ರೂ. ಮೊತ್ತದ ಕಾಮಗಾರಿ ಪೂರ್ಣಗೊಳಿಸಲಾಗಿದ್ದರೂ ಈವರೆಗೆ ಕೇವಲ 6 ಕೋಟಿ ರೂ. ಮಾತ್ರ ಪಾವತಿಸಲಾಗಿದೆ ಎಂದು ಗುತ್ತಿಗೆದಾರ ಕಂಪನಿಯ ಪ್ರತಿನಿಧಿಗಳು ಸಚಿವರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಶೀಘ್ರವೇ ಉಳಿದ ಹಣ ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದರು.

ಹುಣಸೂರು ರಸ್ತೆಯಲ್ಲಿ ಹಿನಕಲ್‌ ಬಳಿ 19.4 ಕೋಟಿ ರೂ. ವೆಚ್ಚದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಕೈಗೆತ್ತಿಕೊಂಡಿರುವ 640 ಮೀಟರ್‌ ಉದ್ದದ ಗ್ರೇಡ್‌ ಸಪರೇಟರ್‌ ಕಾಮಗಾರಿ ವೀಕ್ಷಿಸಿದ ಸಚಿವರು ಬಳಿಕ ಬೋಗಾದಿ ಹೊರವರ್ತುಲ ರಸ್ತೆಯಲ್ಲಿ ಮಾನಸಗಂಗೋತ್ರಿಯ ಆಡಳಿತ ಸೌಧ  ಕ್ರಾಫ‌ಡ್‌ ಹಾಲ್‌ ಬಳಿಯ ವೃತ್ತದಿಂದ ಬೋಗಾಧಿ ವೃತ್ತದವರೆಗೆ, ಜಟ್ಟಿಹುಂಡಿಯಿಂದ ಬೀರಿಹುಂಡಿಯವರೆಗೆ ಬೋಗಾದಿ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸುವ ಸಂಬಂಧ ಪರಿಶೀಲನೆ ನಡೆಸಲಾಯಿತು.

Advertisement

ನಗರದ ಹೊರ ವರ್ತುಲ ರಸ್ತೆಯಿಂದ ನಗರದ ಹೃದಯ ಭಾಗಕ್ಕೆ ಸಂಪರ್ಕಕಲ್ಪಿಸುವ ನಗರದೊಳಗಿನ 13 ರಸ್ತೆಗಳನ್ನು ಲೋಕೋಪಯೋಗಿ ಇಲಾಖೆಯಿಂದ ಅಭಿವೃದ್ಧಿಪಡಿಸಲು 2017-18ನೇ ಸಾಲಿನ ಬಜೆಟ್‌ಲ್ಲಿ 117 ಕೋಟಿ ರೂ. ಮೀಸಲಿಡಲಾಗಿದೆ. ಈ ರಸ್ತೆಗಳ ಪೈಕಿ ಕೆಲವನ್ನು ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.

ಕೆಪಿಟಿಸಿಎಲ್‌ ನಿಂದ 35 ಕೋಟಿ ರೂ. ವೆಚ್ಚದಲ್ಲಿ ಕುಕ್ಕರಹಳ್ಳಿಯ  ಧೋಬಿಘಾಟ್‌ ಬಳಿಯಲ್ಲಿ ನಿರ್ಮಿಸಲಾಗುತ್ತಿರುವ 66/11 ಕೆವಿ ಜಿಐಎಸ್‌ (ಗ್ಯಾಸ್‌ಇನ್ಸುಲೆಟೆಡ್‌ ಸ್ವೀಚ್‌ಗೇರ್‌) ವಿದ್ಯುತ್‌ ಪ್ರಸರಣ ಉಪ ಘಟಕದ ಕಾಮಗಾರಿಯನ್ನು ಸಚಿವ ಮಹದೇವಪ್ಪ ಪರಿಶೀಲಿಸಿದರು.

ಚಾಮುಂಡಿಬೆಟ್ಟದಲ್ಲಿ ಕೈಗೆತ್ತಿಕೊಂಡಿರುವ ಬಹುಮಹಡಿ ವಾಹನ ನಿಲುಗಡೆ ತಾಣ, ವಾಣಿಜ್ಯ ಸಂಕೀರ್ಣ ನಿರ್ಮಾಣ, ಮತ್ತಿತರೆ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು. ಶಾಸಕ ಎಂ.ಕೆ.ಸೋಮಶೇಖರ್‌, ಮೇಯರ್‌ ಎಂ.ಜೆ.ರವಿಕುಮಾರ್‌, ಜಿಲ್ಲಾಧಿಕಾರಿ ರಂದೀಪ್‌ ಡಿ., ಜಿಪಂ ಸಿಇಒ ಪಿ.ಶಿವಶಂಕರ್‌, ನಗರ ಪಾಲಿಕೆ ಆಯುಕ್ತ ಜಿ.ಜಗದೀಶ್‌, ಮುಡಾ ಆಯುಕ್ತ ಡಾ.ಎಂ.ಮಹೇಶ್‌, ಮೈಲ್ಯಾಕ್‌ ಅಧ್ಯಕ್ಷ ಎಚ್‌.ಎ.ವೆಂಕಟೇಶ್‌ ಇನ್ನಿತರರು ಸಚಿವರ ಜತೆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next