Advertisement

Chhattisgarh: ಛತ್ತೀಸ್‌ಗಢಕ್ಕೆ ಮಹಾದೇವ ಬೆಟ್ಟಿಂಗ್‌ ಆ್ಯಪ್‌ ಕೋಲಾಹಲ

09:26 PM Nov 04, 2023 | Team Udayavani |

ಮಹಾದೇವ ಬೆಟ್ಟಿಂಗ್‌ ಆ್ಯಪ್‌ ಪ್ರಕರಣದಲ್ಲಿ ಛತ್ತೀಸ್‌ಗಢ ಸಿಎಂ ಭೂಪೇಶ್‌ ಭಗೇಲ್‌ ಅವರಿಗೆ ಒಟ್ಟು 508 ಕೋಟಿ ರೂ. ಸಂದಾಯವಾಗಿದೆ ಎಂಬ ವಿಚಾರ ಪಂಚರಾಜ್ಯಗಳ ಚುನಾವಣೆಯಲ್ಲಿ ಶನಿವಾರದ ವೇಳೆಗೆ ಚಂಡಮಾರುತವನ್ನು ಎಬ್ಬಿಸಿದೆ. ಪ್ರಧಾನಿ ಮೋದಿಯವರು ಅದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಛತ್ತೀಸ್‌ಗಢದಲ್ಲಿ ಮೊದಲ ಹಂತದ ಮತದಾನ ನ.7 (ಮಂಗಳವಾರ) ನಡೆಯಲಿರುವಂತೆಯೇ ಇ.ಡಿ. ಭಗೇಲ್‌ ವಿರುದ್ಧ ಹೊಸ ಆರೋಪ ಮಾಡಿದ್ದು, ಕೋಲಾಹಲಕ್ಕೆ ಕಾರಣವಾಗಿದೆ.

Advertisement

ಮಹಾದೇವನನ್ನೂ ಬಿಡಲಿಲ್ಲ….
ನವದೆಹಲಿ: “ಅವರು ಮಹಾದೇವನನ್ನೂ ಬಿಡಲಿಲ್ಲ…’ ಹೀಗೆಂದು ಕಾಂಗ್ರೆಸ್‌ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಶನಿವಾರ ವಾಗ್ಧಾಳಿ ನಡೆಸಿದ್ದಾರೆ. ಛತ್ತೀಸ್‌ಗಢದ ದುರ್ಗ್‌ ಎಂಬಲ್ಲಿ ಶನಿವಾರ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಹಿಂದೆ ಗ್ಯಾಂಬ್ಲಿರ್‌ಗಳ ಕೈನಿಂದ ಕೋಟ್ಯಂತರ ರೂ. ಮೊತ್ತ ವಶಪಡಿಸಿಕೊಳ್ಳಲಾಗಿತ್ತು. ಅದನ್ನು ಛತ್ತೀಸ್‌ಗಢದ ಜನರಿಂದ ಲೂಟಿ ಮಾಡಲಾಗಿತ್ತು. ಅದೇ ಹಣ ಕಾಂಗ್ರೆಸ್‌ ನಾಯಕರಿಗೆ ಹಸ್ತಾಂತರವಾಗುತ್ತಿತ್ತು. ಆ ವಿಚಾರ ಈಗ ಮಾಧ್ಯಮಗಳಲ್ಲಿ ಬಂದಿದೆ ಎಂದು ಪ್ರಧಾನಿ ಟೀಕಿಸಿದರು.

“ಯಾರಿಗೆ ಹಣ ಸಂದಾಯವಾಗುತ್ತಿತ್ತು ಎನ್ನುವುದು ನಿಮಗೆ ಗೊತ್ತೇನು’ ಎಂದು ಸಿಎಂ ಭೂಪೇಶ್‌ ಭಗೇಲ್‌ರನ್ನು ಉದ್ದೇಶಿಸಿ ಜನರನ್ನು ನರೇಂದ್ರ ಮೋದಿ ಪ್ರಶ್ನಿಸಿದರು. ದುಬೈನಲ್ಲಿ ಕುಳಿತು ಆ್ಯಪ್‌ ಅನ್ನು ನಿರ್ವಹಿಸುತ್ತಿರುವರ ಜತೆಗೆ ಮುಖ್ಯಮಂತ್ರಿ ತಾವು ಹೊಂದಿರುವ ಸಂಬಂಧವನ್ನು ರಾಜ್ಯದ ಜನತೆಗೆ ವಿವರಿಸಬೇಕು ಎಂದು ಪ್ರಧಾನಿ ಆಗ್ರಹಿಸಿದರು.

ಭ್ರಷ್ಟಾಚಾರ ನಡೆಸುವಲ್ಲಿ ಮಹಾದೇವನನ್ನೂ ಬಿಡಲಿಲ್ಲ ಎಂದು ಹೇಳಿದ ಮೋದಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ, ಹಗರಣಗಳಲ್ಲಿ ಸಿಕ್ಕಿ ಹಾಕಿಕೊಂಡಿರುವವರ ವಿರುದ್ಧ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಲಾಗುತ್ತದೆ. ರಾಜ್ಯವನ್ನು ಲೂಟಿ ಮಾಡಿದವರು ಪ್ರತಿಯೊಂದು ಪೈಸೆಯ ಲೆಕ್ಕವನ್ನೂ ನೀಡುವಂತೆ ಮಾಡುತ್ತೇವೆ. ಹಗರಣಗಳಲ್ಲಿ ಭಾಗಿಯಾದವರನ್ನು ಜೈಲಿಗೆ ಹಾಕುತ್ತೇವೆ ಎಂದರು.

ಸಿನಿಮಾ ಶೈಲಿ:
ಮಧ್ಯಪ್ರದೇಶದ ರತ್ಲಾಂನಲ್ಲಿ ಮಾತನಾಡಿದ ಪ್ರಧಾನಿ ಕಮಲ್‌ನಾಥ್‌ ಮತ್ತು ಕಾಂಗ್ರೆಸ್‌ನ ಇತರ ನಾಯಕರು ಸಿನಿಮಾ ಶೈಲಿಯಲ್ಲಿ ಘೋಷಣೆ ಮಾಡುತ್ತಾರೆ ಎಂದು ಲೇವಡಿ ಮಾಡಿದರು. ಅವರ ನಡವಳಿಕೆಯೂ ಅದೇ ರೀತಿ ಇರುತ್ತದೆ. ದಿಗ್ವಿಜಯ ಸಿಂಗ್‌ ಮತ್ತು ಕಮಲ್‌ನಾಥ್‌ ನಡುವೆ ಒಂದು ರೀತಿ ಬಿರುಸಿನ ಪೈಪೋಟಿ ಇದೆ ಎಂದೂ ಪ್ರಧಾನಿ ಲಘು ಧಾಟಿಯಲ್ಲಿ ಹೇಳಿದ್ದಾರೆ. ಡಿ.3ರಂದು ಮತ ಎಣಿಕೆ ಬಳಿಕ ನೈಜ ಚಿತ್ರಣ ಬರಲಿದೆ ಎಂದರು.

Advertisement

ದಾಳಿ ಧೃತಿಗೆಡಿಸಲಾರದು:
ರಾಜಸ್ಥಾನದಲ್ಲಿ ಮತ್ತು ಛತ್ತೀಸ್‌ಗಢದಲ್ಲಿ ನಮ್ಮ ಪಕ್ಷದ ನಾಯಕರ ಮೇಲೆ ಸಿಬಿಐ, ಇ.ಡಿ. ಮತ್ತು ಆದಾಯ ತೆರಿಗೆ ಅಧಿಕಾರಿಗಳು ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ಇದರಿಂದಾಗಿ ನಮ್ಮ ನೈತಿಕ ಬಲ ಕುಗ್ಗಿಸಲು ಸಾಧ್ಯವಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಮಧ್ಯಪ್ರದೇಶದ ಬಾಲಾಘಾಟ್‌ನಲ್ಲಿ ಮಾತನಾಡಿದ ಅವರು, “ನಮ್ಮ ಪಕ್ಷ ದೇಶದಿಂದ ಬ್ರಿಟೀಷರನ್ನು ಓಡಿಸಿದೆ. ಇತ್ತೀಚಿನ ದಾಳಿಗಳಿಂದ ನೈತಿಕ ಸ್ಥೈರ್ಯ ಕುಗ್ಗಿಸಲು ಸಾಧ್ಯವಿಲ್ಲ. ಮಧ್ಯಪ್ರದೇಶ ಸೇರಿದಂತೆ ಐದೂ ರಾಜ್ಯಗಳಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ’ ಎಂದರು.

ಶುಕ್ರವಾರ ಛತ್ತೀಸ್‌ಗಢದಲ್ಲಿದ್ದ ನಾನೂ ಪ್ರಚಾರದಲ್ಲಿ ಇದ್ದ ವೇಳೆ, ಪ್ರಧಾನಿ, ಗೃಹ ಸಚಿವ ಶಾ ಇದ್ದರು. ಈ ಸಂದರ್ಭದಲ್ಲಿಯೇ ಇ.ಡಿ., ಸಿಬಿಐ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮೂಲಕ ಕಾಂಗ್ರೆಸಿಗರನ್ನು ಬೆದರಿಸಲು ಪ್ರಯತ್ನ ಮಾಡಿದ್ದರು ಎಂದು ಖರ್ಗೆ ದೂರಿದರು. ಪ್ರಧಾನಿ ಮೋದಿ ಸುಳ್ಳಿನ ಸರದಾರ ಎಂದೂ ಅವರು ಆರೋಪಿಸಿದರು.

ಇದು ಬಿಜೆಪಿಯ 2ನೇ ಪ್ರಣಾಳಿಕೆ ಎಂದರೆ ತಪ್ಪಾಗಲಾರದು. ಇ.ಡಿ. ಪತ್ರದ ಮೂಲಕ ಶುಕ್ರವಾರ ಸಿಕ್ಕಿತ್ತು. ಪ್ರಧಾನಿಯವರಿಗೂ ದುಬೈ ಸಂಪರ್ಕ ಹೇಗೆ ಇದೆ ಎಂದು ಪ್ರಶ್ನಿಸುತ್ತೇನೆ. ಇಷ್ಟೆಲ್ಲ ಆಗಿದ್ದರೂ ಆ್ಯಪ್‌ ಏಕೆ ಇನ್ನೂ ಸಕ್ರಿಯವಾಗಿದೆ?
ಭೂಪೇಶ್‌ ಭಗೇಲ್‌, ಛತ್ತೀಸ್‌ಗಢ ಸಿಎಂ

 

Advertisement

Udayavani is now on Telegram. Click here to join our channel and stay updated with the latest news.

Next