Advertisement

ಮಹದಾಯಿ ಯೋಜನೆ: 5ರಂದು ಹುಬ್ಬಳ್ಳಿಯಲ್ಲಿ ಸಭೆ

09:55 AM Jan 03, 2020 | Team Udayavani |

– ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ನೇತೃತ್ವ
– ಹೋರಾಟ ತೀವ್ರಗೊಳಿಸಲು ಸುದೀರ್ಘ‌ ಚರ್ಚೆ
ಗದಗ: ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ ಕುಡಿಯುವ ನೀರಿಗಾಗಿ ಮಹದಾಯಿ ಯೋಜನೆ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಮಹದಾಯಿ ಹೋರಾಟವನ್ನು ಎಲ್ಲ ಪ್ರಗತಿಪರ ಸಂಘಟನೆಗಳೊಂದಿಗೆ ಪûಾತೀತವಾಗಿ ತೀವ್ರಗೊಳಿಸುವ ಉದ್ದೇಶದಿಂದ ಜ.5ರಂದು ಹುಬ್ಬಳ್ಳಿಯಲ್ಲಿ ಸಭೆ ಕರೆಯಲಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದರು.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜ.5ರಂದು ಹುಬ್ಬಳ್ಳಿ ಪ್ರವಾಸಿ ಮಂದಿರದಲ್ಲಿ ನಡೆಯುವ ಸಭೆಯಲ್ಲಿ ಮಹದಾಯಿ ಹೋರಾಟದ ಅಂತಿಮ ರೂಪುರೇಷೆ ಸಿದ್ಧಗೊಳಿಸಲಾಗುತ್ತದೆ. ಸಭೆಯಲ್ಲಿ ಪಾಲ್ಗೊಳ್ಳುವಂತೆ ಮಲಪ್ರಭಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ನಾಲ್ಕು ಜಿಲ್ಲೆಗಳ ಸಂಸದರು, ಶಾಸಕರಿಗೆ ಪತ್ರ ಬರೆದಿದ್ದು, ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ನರಗುಂದ ಹೋರಾಟ ವೇದಿಕೆಯ ವೀರೇಶ ಸೊಬರದಮಠ ಸ್ವಾಮೀಜಿ, ಶಂಕರಣ್ಣ ಅಂಬಲಿ ಅವರನ್ನು ದೂರವಾಣಿ ಮೂಲಕ ಆಹ್ವಾನಿಸಲಾಗಿದೆ. ಅವರೊಂದಿಗೆ ರೈತರ ಪರ, ಕನ್ನಡ ಪರ, ದಲಿತ ಪರ ಸಂಘಟನೆಗಳ ಕಾರ್ಯಕರ್ತರೂ ಪಾಲ್ಗೊಳ್ಳಲಿದ್ದಾರೆ ಎಂದರು.

ಮಹದಾಯಿ ನೀರಿನ ಮೇಲೆ ಮಹಾರಾಷ್ಟ್ರ, ಕರ್ನಾಟಕ ಹಾಗೂ ಗೋವಾ ಮೂರು ರಾಜ್ಯಗಳಿಗೆ ಹಕ್ಕಿದೆ. ಆದರೆ, ಕರ್ನಾಟಕ ನೀರು ಕೋರಿದ್ದನ್ನು ಪ್ರಶ್ನಿಸಿ ಗೋವಾ ಸರ್ಕಾರದ ಅಪೇಕ್ಷೆಯಂತೆ ನ್ಯಾಯಾಧಿಕರಣ ಸ್ಥಾಪಿಸಲಾಗಿತ್ತು. ಅದೇ ನ್ಯಾಯಾಧಿಕರಣ ರಾಜ್ಯಕ್ಕೆ ನೀರು ಹಂಚಿಕೆ ಮಾಡಿ ತೀರ್ಪು ನೀಡಿ ಒಂದೂವರೆ ವರ್ಷ ಕಳೆದರೂ ಕೇಂದ್ರ ಸರ್ಕಾರ ಈ ಕುರಿತು ಅಧಿಸೂಚನೆ ಹೊರಡಿಸಲು ಅನಗತ್ಯ ವಿಳಂಬ ಮಾಡುತ್ತಿರುವುದು ಸರಿಯಲ್ಲ. ಇನ್ನು ಸುಪ್ರೀಂ ಕೋರ್ಟ್‌ನಲ್ಲಿರುವ ಮೇಲ್ಮನವಿಗೂ ಹಂಚಿಕೆಯಾಗಿರುವ ನೀರಿಗೆ ಯಾವುದೇ ರೀತಿಯ ಸಂಬಂಧವಿಲ್ಲ ಎಂದರು.

ಈ ಹಿಂದೆ ಕೇಂದ್ರ ಮತ್ತು ಮೂರೂ ರಾಜ್ಯಗಳಲ್ಲಿ ಪ್ರತ್ಯೇಕ ರಾಜಕೀಯ ಪಕ್ಷಗಳು ಆಡಳಿತದಲ್ಲಿದ್ದರಿಂದ ಮಹದಾಯಿ ವಿಚಾರದಲ್ಲಿ ಕೆಲ ತಪ್ಪು ಹೆಜ್ಜೆಗಳನ್ನಿಡಲಾಗಿದೆ. ಆದರೆ, ಈಗ ಕೇಂದ್ರ ಮತ್ತು ಮೂರೂ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಹೊಣೆ ಹೆಚ್ಚಿದೆ. ಈ ನಿಟ್ಟಿನಲ್ಲಿ ರಾಜ್ಯದ ಸಂಸದರು, ಶಾಸಕರು ಪûಾತೀತವಾಗಿ ರಾಜ್ಯದ ಹಿತಕ್ಕಾಗಿ ಶಕ್ತಿ ಪ್ರದರ್ಶನ ಮಾಡಬೇಕಿದೆ. ಹೋರಾಟ ನಮ್ಮ ಹಕ್ಕು ಸಾಧನೆಗಾಗಿಯೇ ಹೊರತು ಯಾವುದೇ ಪಕ್ಷ, ವ್ಯಕ್ತಿಯ ವಿರುದ್ಧವಲ್ಲ. ಹೋರಾಟದಲ್ಲಿ ಯಾರ ವಿರುದ್ಧವೂ ವೈಯಕ್ತಿಕ ಟೀಕೆ, ಟಿಪ್ಪಣಿ ಮಾಡಲಾಗದು. ಮಹದಾಯಿ ನೀರು ಪಡೆಯುವುದೊಂದೇ ಹೋರಾಟದ ಮುಖ್ಯ ಉದ್ದೇಶ ಎಂದರು.

Advertisement

ನವಲಗುಂದ ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ, ಬಸವರಾಜ ಸಾಂಬಳೆ, ಶಾಂತವೀರಯ್ಯ ನರಗುಂದ, ಶ್ರೀಶೈಲ ಮೇಟಿ ಸುದ್ದಿಗೋಷ್ಠಿಯಲ್ಲಿದ್ದರು.

ಇತ್ತೀಚೆಗೆ ನಡೆದ ಉಪಚುನಾವಣೆ ಸಂದರ್ಭದಲ್ಲಿ ಮಹದಾಯಿ ವಿಚಾರವಾಗಿ ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ ಜಾವಡೇಕರ್‌ ಗಿಮಿಕ್‌ ಮಾಡಿದ್ದಾರೆ ಎಂದು ಸ್ವತಃ ಗೋವಾ ರಾಜ್ಯಪಾಲರು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ, ಇಬ್ಬರು ಸಂಸದರ ಗೋವಾ ಸರಕಾರದ ಒತ್ತಡಕ್ಕೆ ಕೇಂದ್ರ ಮಣಿಯುವುದಾದರೆ, ನಮ್ಮಲ್ಲಿ 25 ಜನ ಸಂಸದರಿದ್ದಾರೆ. ಅವರ ಮೂಲಕ ಕೇಂದ್ರದ ಮೇಲೆ ಒತ್ತಡ ತರುವ ಪ್ರಯತ್ನ ನಡೆಸುತ್ತೇವೆ.
-ಬಸವರಾಜ ಹೊರಟ್ಟಿ, ವಿಧಾನ ಪರಿಷತ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next