Advertisement

ಮಹದಾಯಿ: ಸುಪ್ರೀಂ ಮೊರೆಗೆ ನಿರ್ಧಾರ

06:00 AM Sep 27, 2018 | Team Udayavani |

ಬೆಳಗಾವಿ/ಹುಬ್ಬಳ್ಳಿ: ಮಹದಾಯಿ ನ್ಯಾಯಾಧಿಕರಣ ನೀಡಿದ ತೀರ್ಪಿನಲ್ಲಿ ನೀರು ಹಂಚಿಕೆ ವಿಷಯವಾಗಿ ರಾಜ್ಯಕ್ಕೆ ಸಿಗಬೇಕಾದ ನ್ಯಾಯ ಸಿಕ್ಕಿಲ್ಲ. ಹೀಗಾಗಿ,ಸುಪ್ರೀಂಕೋರ್ಟ್‌ ಮೊರೆ ಹೋಗಲು ನಿರ್ಧರಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಹೇಳಿದರು.

Advertisement

ಖಾನಾಪುರ ತಾಲೂಕಿನ ಕಣಕುಂಬಿ ಬಳಿಯ ಕಳಸಾ ನಾಲಾ ಪ್ರದೇಶಕ್ಕೆ ಭೇಟಿ ನೀಡಿದ ಸಚಿವರು,ಕಾಮಗಾರಿಯ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 

ಮಹದಾಯಿ ನ್ಯಾಯಾಧಿಕರಣ ತೀರ್ಪಿನಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ನಮಗೆ ಈ ತೀರ್ಪು ಸಮಾಧಾನ ತಂದಿಲ್ಲ ಎಂದು ಈಗಾಗಲೇ ರಾಜ್ಯ ಸರ್ಕಾರ ಸ್ಪಷ್ಟವಾಗಿ ಹೇಳಿದೆ. 

ನಾವು ನ್ಯಾಯಾಧಿಕರಣದಿಂದ ಬಹಳಷ್ಟು ನಿರೀಕ್ಷೆ ಮಾಡಿದ್ದೆವು. ಮಹದಾಯಿ ನದಿ ವ್ಯಾಪ್ತಿಯ ಒಟ್ಟು 188.6 ಟಿಎಂಸಿ ನೀರಿನಲ್ಲಿ 48 ಟಿಎಂಸಿ ನೀರನ್ನು ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದೆ.

ಕರ್ನಾಟಕವು ಕಳಸಾ-ಬಂಡೂರಿಯಿಂದ 7.56 ಟಿಎಂಸಿ ನೀರು ಕೇಳಿತ್ತು. ಆದರೆ, 3.90 ಟಿಎಂಸಿ ಹಂಚಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋಟ್‌ ìಗೆ ಮೇಲ್ಮನವಿ ಸಲ್ಲಿಸಲು ಚಿಂತನೆ ನಡೆಸಲಾಗಿದೆ.

Advertisement

ಇದಕ್ಕೆ ಇನ್ನೂ ಒಂದೂವರೆ ತಿಂಗಳ ಕಾಲಾವಕಾಶ ಇದೆ. ಅಷ್ಟರಲ್ಲಿ ಕಾನೂನು ಹಾಗೂ ನೀರಾವರಿ ತಜ್ಞರ ಜೊತೆ ಸಮಾಲೋಚನೆ ನಡೆಸಿ ಮೇಲ್ಮನವಿ ಸಲ್ಲಿಸಲಾಗುವುದು ಎಂದರು.

ನ್ಯಾಯಾಧಿಕರಣದಿಂದ ಹಂಚಿಕೆಯಾಗಿರುವ 13.42 ಟಿಎಂಸಿ ನೀರಿನಲ್ಲಿ 5.4 ಟಿಎಂಸಿ ಬಳಕೆಗೆ ಹಾಗೂ 8 ಟಿಎಂಸಿ ವಿದ್ಯುತ್‌ ಉತ್ಪಾದನೆಗೆ ಮಾತ್ರ ಎಂದು ನಿಗದಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯವು ತೆಗೆದುಕೊಳ್ಳಬಹುದಾದ ಮುಂದಿನ ಕ್ರಮಗಳ ಬಗ್ಗೆ ಕಾನೂನು ಹಾಗೂ ತಾಂತ್ರಿಕ ತಂಡದ ಸಲಹೆ ಪಡೆದುಕೊಳ್ಳಲಾಗುತ್ತಿದೆ. ಈಗ ಹಂಚಿಕೆ ಮಾಡಿರುವ 48 ಟಿಎಂಸಿ ನೀರನ್ನು ಹೊರತುಪಡಿಸಿ ಸಮುದ್ರಕ್ಕೆ ವ್ಯರ್ಥವಾಗಿ ಹರಿಯುತ್ತಿರುವ 140 ಟಿಎಂಸಿ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂಬುದು ನಮ್ಮ ಉದ್ದೇಶ ಎಂದರು.

ಕಾಮಗಾರಿ ತಡೆಯಾಜ್ಞೆ ತೆರವಿಗೆ ಸಿದ್ಧತೆ: ಕಳಸಾ ನಾಲಾ ಪ್ರದೇಶದಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳಬಾರದು ಎಂದು 2017, ಆ.17ರಂದು ಸುಪ್ರೀಂಕೋರ್ಟ್‌ ತಡೆಯಾಜ್ಞೆ ನೀಡಿದೆ. ಇದರ ತೆರವಿಗೆ ಅರ್ಜಿ ಸಲ್ಲಿಸಲು ಸಿದಟಛಿತೆ ಮಾಡಿಕೊಳ್ಳಲಾಗುತ್ತಿದೆ. ಈ ತಡೆಯಾಜ್ಞೆ ತೆರವುಗೊಳಿಸಿ ಮಹದಾಯಿ ನ್ಯಾಯಾಧಿಕರಣ ಹಂಚಿಕೆ ಮಾಡಿರುವ ನೀರನ್ನು ಬಳಕೆ ಮಾಡಿಕೊಳ್ಳುವುದು ಸರ್ಕಾರದ ಆದ್ಯತೆಯಾಗಿದೆ. ನ್ಯಾಯಾಧಿಕರಣದ ತೀರ್ಪಿನಂತೆ ನಮ್ಮ ಪಾಲಿನ ಒಟ್ಟಾರೆ 13.42 ಟಿಎಂಸಿ ನೀರು ಬಳಕೆಗೆ ಅಗತ್ಯ ಕಾಮಗಾರಿ ಕೈಗೊಳ್ಳಲು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ ಪಡೆಯಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ತಡೆಯಾಜ್ಞೆ ತೆರವು ಬಳಿಕ ಅಗತ್ಯ ಕಾಮಗಾರಿಗಳನ್ನು ಪೂರ್ಣಗೊಳಿಸಿ ರಾಜ್ಯದ ಪಾಲಿನ ನೀರಿನ ಬಳಕೆ ಮಾಡಿಕೊಳ್ಳಲಾಗುವುದು. ಈ ಬಗ್ಗೆ ಈಗಾಗಲೇ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ ಎಂದರು.

ಭೂ ಸ್ವಾಧೀನಕ್ಕೆ ಸಿದ್ಧ: ಕಳಸಾ ನಾಲಾ ಪ್ರದೇಶದಲ್ಲಿ ಈಗಾಗಲೇ ಕೈಗೊಂಡಿರುವ ಕಾಮಗಾರಿ ಸೇರಿದಂತೆ ಇದುವರೆಗೆ 250 ಕೋಟಿ ರೂ.ವೆಚ್ಚ ಮಾಡಲಾಗಿದೆ. 50 ಲಕ್ಷ ರೂ.ಗಳನ್ನು ಸಮೀಕ್ಷೆ ಕಾರ್ಯಕ್ಕೆ ವಿನಿಯೋಗಿಸಲಾಗುತ್ತಿದೆ. ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಯೋಜನೆ ಕೈಗೊಳ್ಳಲಾಗುವುದು.

ಕಳಸಾ-ಬಂಡೂರಿ ಕಾಮಗಾರಿಗೆ ಒಟ್ಟು 731 ಹೆಕ್ಟೇರ್‌ ಭೂಮಿ ಮುಳುಗಡೆಯಾಗುತ್ತದೆ. ಇದರಲ್ಲಿ ಸುಮಾರು 499 ಹೆಕ್ಟೇರ್‌ನಷ್ಟು ಅರಣ್ಯ ಪ್ರದೇಶ ಇದೆ.ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಲು ಸರ್ಕಾರ ಸಿದ್ಧವಿದೆ. ಇದನ್ನು ಹೊರತುಪಡಿಸಿ 191 ಹೆಕ್ಟೇರ್‌ ಖಾಸಗಿ ಜಮೀನಿನ ಅಗತ್ಯವಿದ್ದು, ಭೂ ಸ್ವಾಧೀನಕ್ಕೆ ಸರ್ಕಾರ ಸಿದ್ಧವಿದೆ ಎಂದರು.

ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಭಿನ್ನಮತವಿಲ್ಲ. ಎಲ್ಲರೂ ನಮ್ಮ ಜೊತೆ ಇದ್ದಾರೆ. ಆಲ್‌ ಈಸ್‌ ವೆಲ್‌. ಆಲ್‌ ಈಸ್‌ ಗುಡ್‌. ಆಲ್‌ ಈಸ್‌ ಫೈನ್‌. ಮಾಧ್ಯಮದವರು ಇದರ ಬಗ್ಗೆ ಇನ್ನಿಲ್ಲದ ವಿವಾದ ಹುಟ್ಟು ಹಾಕುವುದು ಬೇಡ.
– ಡಿ.ಕೆ.ಶಿವಕುಮಾರ್‌,
ಜಲಸಂಪನ್ಮೂಲ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next