Advertisement

ಮಹದಾಯಿ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಧರಣಿ

06:25 AM Dec 24, 2017 | Team Udayavani |

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು 20 ದಿನಗಳೊಳಗೆ ಮಹದಾಯಿ ಸಮಸ್ಯೆಗೆ ಪರಿಹಾರ ಕಲ್ಪಿಸುವುದಾಗಿ ನೀಡಿದ್ದ ವಾಗ್ಧಾನ ಈಡೇರಿಲ್ಲವೆಂದು ರೈತ ಸೇನಾ ಕರ್ನಾಟಕ ಕಾರ್ಯಕರ್ತರು ಶನಿವಾರ ನಗರದ ಮಲ್ಲೇಶ್ವರ ಬಿಜೆಪಿ ಕಚೇರಿ ಮುಂಭಾಗ ಅನಿರ್ದಿಷ್ಟ ಪ್ರತಿಭಟನೆ ಪ್ರಾರಂಭಿಸಿದ್ದಾರೆ.

Advertisement

ಯಡಿಯೂರಪ್ಪ ಅವರು ಕೊಟ್ಟ ಭರವಸೆಯಂತೆ ಮಹದಾಯಿ ವಿಚಾರದಲ್ಲಿ ನ್ಯಾಯ ದೊರಕಿಸಿಕೊಡುವವರೆಗೂ ನಾವು ಕದಲುವುದಿಲ್ಲ ಎಂದು ಪಟ್ಟು ಹಿಡಿದಿರುವ ಪ್ರತಿಭಟನಾಕಾರರು ಕಚೇರಿ ಮುಂದೆಯೇ ಅಡುಗೆ ಮಾಡಿಕೊಂಡು ಅಲ್ಲೇ ವಾಸ್ತವ್ಯ ಹೂಡಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ ಅವರು ಪ್ರತಿಭಟನಾಕಾರರ ಜತೆ ಮಾತನಾಡಿ ನಮ್ಮ ಪ್ರಯತ್ನ ಆರಂಭಿಸಿದ್ದೇವೆ. ಶೀಘ್ರದಲ್ಲೇ ಸಿಹಿ ಸುದ್ದಿ ಸಿಗಲಿದೆ . ನೀವು ಪ್ರತಿಭಟನೆ ಹಿಂಪಡೆದು ಹೋಗಿ ಎಂದು ಮನವಿ ಮಾಡಿ ಪದಾಧಿಕಾರಿಗಳ ಜತೆ ಸಂಧಾನ ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಯಡಿಯೂರಪ್ಪ ಅವರು ಸ್ಥಳಕ್ಕೆ ಬರುವವರೆಗೂ ಕದಲುವುದಿಲ್ಲ ಎಂದು ಪ್ರತಿಭಟನೆ ಮುಂದುವರಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಸೇನಾ ಕರ್ನಾಟಕ ಇದರ ರಾಜ್ಯ ಉಪಾಧ್ಯಕ್ಷ ಶಂಕರ ಅಂಬಲಿ, ಮಹದಾಯಿ ನೀರಿಗಾಗಿ 892 ದಿನದಿಂದ ಹೋರಾಟ ಮಾಡುತ್ತಲೇ ಬಂದಿದ್ದೇವೆ. ನ.13ರಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರ ಮನೆ ಮುಂದೆ ಧರಣಿ ಮಾಡಿದ್ದೇವು. ಬಿಜೆಪಿ ಪರಿವರ್ತನೆ ಯಾತ್ರೆಯ ಸಂದರ್ಭದಲ್ಲಿ ನ.15ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು, 20ದಿನದೊಳಗೆ ಸಮಸ್ಯೆಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ಒಂದು ತಿಂಗಳು ಕಳೆದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಮಹದಾಯಿ ನೀರು ಕರ್ನಾಟಕಕ್ಕೆ ಬರುವವರೆಗೂ ಇಲ್ಲೇ ಶಾಂತಿಯುತ ಪ್ರತಿಭಟನೆ ಮಾಡಲಿದ್ದೇವೆ ಎಂದು  ಹೇಳಿದರು.

ಮಹದಾಯಿ ನದಿ ನೀರು ಕರ್ನಾಟಕಕ್ಕೆ ಪೂರೈಕೆ ಮಾಡುವ ಸಂಬಂಧ ಗೋವಾ ಮುಖ್ಯಮಂತ್ರಿಯವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. 7.56 ಟಿಎಂಸಿ ನೀರು ಕರ್ನಾಟಕಕ್ಕೆ ದೊರೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದೊಂದಿಗೆ ಸೇರಿಕೊಂಡು ಕಾನೂನಾತ್ಮಕ ಕ್ರಮವನ್ನು ಬಿಜೆಪಿಯವರು ತೆಗೆದುಕೊಳ್ಳಬೇಕು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಉತ್ತರ ಕರ್ನಾಟಕದ ಜನತೆಗೆ ಭವರವಸೆ ನೀಡಿದ್ದಾರೆ. ಅದನ್ನು ಈಡೇರಿಸುತ್ತಾರೆ ಎಂಬ ನಂಬಿಕೆಯೂ ಇದೆ. ತಾವು ಘೋಷಿಸಿದ ನಂತರ ವಿಳಂಬದಿಂದ ಸಮಸ್ಯೆ ಹೆಚ್ಚಾಗಬಾರದು. ಹೀಗಾಗಿ ಸಮಸ್ಯೆಗೆ ಪರಿಹಾರ ಸಿಗುವವರೆಗೂ ನಾವು ಇಲ್ಲೇ ಇರುತ್ತೇವೆ ಎಂದರು.

Advertisement

ಬಿಜೆಪಿ ಕಚೇರಿ ಎದುರೇ ಅಡುಗೆ:
ಉತ್ತರ ಕರ್ನಾಟಕದ ನರಗುಂದ, ನವಲಗುಂದ, ರಾಮದುರ್ಗ ಭಾಗದಿಂದ ಸುಮಾರು 250 ಕ್ಕೂ ಅಧಿಕ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಮಧ್ಯಾಹ್ನದ ಊಟಕ್ಕಾಗಿ ಅವರೇ ಅಡುಗೆ ತಯಾರಿಸಿಕೊಂರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next