ಬೆಂಗಳೂರು: ಮಹದಾಯಿ ನದಿ ವಿವಾದಕ್ಕೆ ಸಂಬಂಧಪಟ್ಟಂತೆ ಸೃಷ್ಟಿಯಾಗಿರುವ ಸಮಸ್ಯೆಯನ್ನು ಬಗೆಹರಿಸಲು ಸಿದ್ದವಿದ್ದೇವೆ ಎಂದು ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಶೇಕರ್ ಹೇಳಿದ್ದಾರೆ.
ಏರೋ ಇಂಡಿಯಾ-2017ರಲ್ಲಿ ಬುಧವಾರ ಭಾಗಿಯಾದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಹದಾಯಿ ನದಿ ವಿಚಾರ ಕೇವಲ ಒಂದು ರಾಜ್ಯಕ್ಕೆ ಸೀಮಿತವಾಗಿಲ್ಲ. ಅದು ಮೂರು ರಾಜ್ಯಗಳಿಗೆ ಸಂಬಂಧಪಟ್ಟಿದೆ. ಇದೊಂದು ಜಟಿಲ ವಿಚಾರವಾಗಿದ್ದು, ವಿವಾದ ಬಗೆಹರಿಸಲು ಅಗತ್ಯ ಇರುವ ಸಹಕಾರ ನೀಡಲು ನಾವು ಸಿದ್ಧವಿದ್ದೇವೆ ಎಂದು ತಿಳಿಸಿದರು.
ಮಹದಾಯಿ ನೀರು ಹಂಚಿಕೆ ವಿವಾದ ಸಂಬಂಧ ಈಗಾಗಲೇ ಅಂತಾರಾಜ್ಯ ನದಿ ನೀರು ಹಂಚಿಕೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಸಂಬಂಧ ಈಗಾಗಲೇ ಮೂರು ರಾಜ್ಯಗಳಿಗೆ ನ್ಯಾಯಾಧೀಕರಣ ತಂಡ ತೆರಳಿ ಪರಿಶೀಲನೆ ನಡೆಸಿದೆ. ಮೂರು ರಾಜ್ಯಗಳು ಒಂದಾಗಿ ವಿವಾದ ಬಗೆಹರಿಸಿಕೊಳ್ಳಬೇಕು ಎಂದರು.
ಕೃಷ್ಣಾಗೆ ನೀರು ಬಿಡಿ: ಮಹಾರಾಷ್ಟ್ರಕ್ಕೆ ಪತ್ರ
ಬೆಳಗಾವಿ: ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದ್ದು, ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಜಲಾಶಯಗಳಿಂದ ಕೃಷ್ಣಾ ನದಿಗೆ 2 ಟಿಎಂಸಿಯಷ್ಟು ನೀರು ಬಿಡುಗಡೆ ಮಾಡಬೇಕು ಎಂದು ಕೋರಿ ಕರ್ನಾಟಕ ಸರಕಾರ ಮಹಾರಾಷ್ಟ್ರಕ್ಕೆ ಪತ್ರ ಬರೆದಿದೆ.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಂಸದ ಪ್ರಕಾಶ ಹುಕ್ಕೇರಿ, ಈ ಬಾರಿಯೂ ಕೃಷ್ಣಾ ನದಿ ತೀರದ ಚಿಕ್ಕೋಡಿ, ಅಥಣಿ ಹಾಗೂ ರಾಯಬಾಗ ತಾಲೂಕುಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಉಂಟಾಗಲಿದೆ. ಕಳೆದ 8 ದಿನಗಳ ಹಿಂದೆ ಹಿಪ್ಪರಗಿ ಜಲಾಶಯದಲ್ಲಿ 4 ಟಿಎಂಸಿ ನೀರು ಇತ್ತು. ಆದರೆ, ಅಲ್ಲಿಯೂ ಈಗ ನೀರು ಕಡಿಮೆಯಾಗುತ್ತಿದೆ. ಆದ್ದರಿಂದ ಮಹಾರಾಷ್ಟ್ರದ ಜಲಾಶಯಗಳಿಂದ 2 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ. ಅಲ್ಲದೆ, ಈ ಸಂಬಂಧ ಶೀಘ್ರದಲ್ಲೇ ರಾಜ್ಯದ ಜಲಸಂಪನ್ಮೂಲ ಸಚಿವರು ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಅಲ್ಲಿನ ನೀರಾವರಿ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ ಎಂದು ತಿಳಿಸಿದರು.
ಇದಕ್ಕೆ, ಪ್ರತಿಯಾಗಿ ಮಹಾರಾಷ್ಟ್ರ ಸರಕಾರ ಆಲಮಟ್ಟಿ ಜಲಾಶಯದಿಂದ ಭೀಮಾ ನದಿಯ ಇಂಡಿ ಕಾಲುವೆ ಮೂಲಕ ಸೊಲ್ಲಾಪುರ ಭಾಗಗಳಿಗೆ ಕುಡಿಯುವುದಕ್ಕಾಗಿ 2 ಟಿಎಂಸಿ ನೀರು ಬಿಡುವಂತೆ ಕೇಳಿದೆ. ಇದಕ್ಕೆ ಕರ್ನಾಟಕ ಸರಕಾರ ಸಮ್ಮತಿಸಿರುವುದರಿಂದ ಮಹಾರಾಷ್ಟ್ರದಿಂದ ನೀರು ಬಿಡುಗಡೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದರು.