Advertisement

ಪಣಜಿ: ಮಹದಾಯಿ ನೀರು ನಿರ್ವಹಣಾ ಪ್ರಾಧಿಕಾರ ರಚಿಸುವಂತೆ ಕೇಂದ್ರಕ್ಕೆ ಗೋವಾ ಸರಕಾರ ಒತ್ತಾಯ

05:41 PM Jan 02, 2023 | Team Udayavani |

ಪಣಜಿ: ಮಹದಾಯಿ ನದಿಯಿಂದ ಅಕ್ರಮವಾಗಿ ನೀರು ತಿರುಗಿಸುವುದನ್ನು ತಡೆಯಲು ಮಹದಾಯಿ ನೀರು ನಿರ್ವಹಣಾ ಪ್ರಾಧಿಕಾರವನ್ನು ರಚಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಗೋವಾ  ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ರಾಜ್ಯ ಸಚಿವ ಸಂಪುಟವು ಇಂದು ನಿರ್ಧರಿಸಿದೆ. ಕಳಸಾ-ಭಂಡೂರಿ ನೀರಿನ ಯೋಜನೆಗೆ ಕರ್ನಾಟಕದ ವಿವರವಾದ ಯೋಜನಾ ವರದಿಗೆ ನೀಡಲಾದ ಎನ್‍ಒಸಿಯನ್ನು ತಕ್ಷಣವೇ ಹಿಂಪಡೆಯಲು ಕೇಂದ್ರಕ್ಕೆ ಪತ್ರ ಬರೆಯಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.

Advertisement

ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದಲ್ಲಿ ಸೋಮವಾರ ಪಣಜಿಯಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಸಿ ಮಹದಾಯಿ ಸಮಸ್ಯೆ ಕುರಿತು ಚರ್ಚಿಸಲಾಯಿತು. ಸಂಪುಟ ಸಭೆಯ ನಂತರ ಸುದ್ಧಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾತನಾಡಿ- ಮಹದಾಯಿ ನದಿಯಿಂದ ಅಕ್ರಮವಾಗಿ ನೀರು ತಿರುಗಿಸುವುದನ್ನು ತಡೆಯಲು ಮಹದಾಯಿ ನೀರು ನಿರ್ವಹಣಾ ಪ್ರಾಧಿಕಾರವನ್ನು ರಚಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ನಾವು ನಿರ್ಧರಿಸಿದ್ದೇವೆ. ಮಹದಾಯಿ ವಿಚಾರವಾಗಿ ಕೇಂದ್ರ ಹಾಗೂ ನೆರೆಯ ಕರ್ನಾಟಕ ರಾಜ್ಯದೊಂದಿಗೆ ಹೋರಾಟ ಮುಂದುವರಿಸಲಿದೆ ಎಂದು ಗೋವಾ ಸಿಎಂ ಪ್ರಮೋದ ಸಾವಂತ್ ಹೇಳಿದರು.

ಮಹದಾಯಿ ವಿಚಾರದಲ್ಲಿ ಸರ್ಕಾರ ಯಾವತ್ತೂ ಕೈ ಬಿಟ್ಟಿಲ್ಲ. ಮಹದಾಯಿ ನದಿಯ ಕುಡಿವ ನೀರಿನ ಕಳಸಾ-ಭಂಡೂರ (ಕಾಲುವೆ) ಯೋಜನೆಯ ವಿವರವಾದ ಯೋಜನಾ ವರದಿ (ಡಿಪಿಆರ್) ಪ್ರತಿಯನ್ನು ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಿದ್ದೇವೆ. ಕಳಸಾ-ಭಂಡೂರಿ ನೀರಿನ ಯೋಜನೆಗೆ ಕರ್ನಾಟಕದ ವಿವರವಾದ ಯೋಜನಾ ವರದಿಗೆ ನೀಡಿರುವ ಎನ್‍ಒಸಿಯನ್ನು ತಕ್ಷಣವೇ ಹಿಂಪಡೆಯಲು ನಾವು ಕೇಂದ್ರಕ್ಕೆ ಪತ್ರ ಬರೆಯುತ್ತೇವೆ. ಅಗತ್ಯವಿದ್ದರೆ, ಗೋವಾಕ್ಕೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳಲು ಎಲ್ಲಾ ಶಾಸಕಾಂಗ ಪಕ್ಷದ ನಿಯೋಗವು ಪಿಎಂ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಜಲಶಕ್ತಿ ಸಚಿವರನ್ನು ಭೇಟಿಮಾಡಲಿದೆ. ಮಹದಾಯಿ ನದಿ ವಿಚಾರದಲ್ಲಿ ಕೇಂದ್ರದ ಜತೆ ಹೋರಾಟ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಹೇಳಿದರು.

ಈ ಹೋರಾಟದಲ್ಲಿ ಒಗ್ಗಟ್ಟಾಗಿರಲು ನಾನು ಎಲ್ಲಾ ಶಾಸಕರಲ್ಲಿ ಮನವಿ ಮಾಡುತ್ತೇನೆ; ಈ ಹೋರಾಟದಲ್ಲಿ ನಾವೆಲ್ಲರೂ ಜೊತೆಯಾಗಿದ್ದೇವೆ ಎಂಬುದನ್ನು ಸಾಬೀತುಪಡಿಸಬೇಕು. ಕರ್ನಾಟಕದ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್) ನೀಡಿರುವ ಕೇಂದ್ರದ ಅನುಮೋದನೆಯನ್ನು ಹಿಂಪಡೆಯುವಂತೆ ಪ್ರಧಾನಿಗೆ ಮನವಿ ಮಾಡುವುದಾಗಿ ಹೇಳಿದ ಮುಖ್ಯಮಂತ್ರಿ ಪ್ರಮೋದ ಸಾವಂತ್,  ಅದೇ ರೀತಿ, ಆದಷ್ಟು ಬೇಗ ಅನುಮೋದನೆಯನ್ನು ಹಿಂಪಡೆಯುವಂತೆ ನಾವು ಕೇಂದ್ರ ಜಲಶಕ್ತಿ ಸಚಿವರಿಗೆ ಮನವಿ ಮಾಡುತ್ತೇವೆ.

ನ್ಯಾಯಾಧಿಕರಣದ ಆದೇಶವನ್ನು ಕಾರ್ಯಗತಗೊಳಿಸುವಿಕೆಯನ್ನು ಮೇಲ್ವಿಚಾರಣೆ ಮಾಡಲು ಮೂರು ನದಿ ಹಂಚಿಕೆ ರಾಜ್ಯಗಳಾದ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ಸದಸ್ಯರನ್ನು ಒಳಗೊಂಡಿರುವ ಮಹದಾಯಿ ಪ್ರಾಧಿಕಾರವನ್ನು ಕೇಂದ್ರ ಸರ್ಕಾರವು ರಚಿಸಬೇಕು ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಆಘ್ರಹಿಸಿದರು.

Advertisement

ಕೆಲವು ದಿನಗಳ ಹಿಂದೆ ನಾವು ದೆಹಲಿಗೆ ತೆರಳಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಹದಾಯಿ ಬಗ್ಗೆ ಯಾವುದೇ ಚರ್ಚೆ ನಡೆದಿರಲಿಲ್ಲ. ಶಾಸಕ ವಿಜಯ್ ಸರ್ದೇಸಾಯಿ ಉದ್ದೇಶಪೂರ್ವಕವಾಗಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದರು. ಅಕ್ರಮವಾಗಿ ಮಹದಾಯಿ ನೀರು ಹರಿಸುತ್ತಿರುವ ಕರ್ನಾಟಕದ ಕ್ರಮಕ್ಕೆ ನಮ್ಮ ವಿರೋಧವನ್ನು ಮುಂದುವರಿಸುತ್ತೇವೆ. ಮಹದಾಯಿ ನೀರು ಹರಿಸುವ ಕಳಸಾ-ಭಂಡೂರ ಯೋಜನೆಗೆ ನೀಡಿರುವ ಅನುಮೋದನೆಯನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು. ಈ ಪತ್ರಿಕಾಗೋಷ್ಠಿಯಲ್ಲಿ ಸಚಿವ ಮಾವಿನ್ ಗುದಿನ್ಹೊ, ಸುಭಾಶ ಶಿರೋಡಕರ್ ಉಪಸ್ಥಿತರಿದ್ದರು.

ಇದನ್ನೂ ಓದಿ: ಅಂಕೋಲಾ: ಕಿರಾಣಿ ಅಂಗಡಿಯಲ್ಲಿ ಬೆಂಕಿ, ಕೋಟ್ಯಂತರ ಮೌಲ್ಯದ ವಸ್ತು ಬೆಂಕಿಗಾಹುತಿ

Advertisement

Udayavani is now on Telegram. Click here to join our channel and stay updated with the latest news.

Next