Advertisement

ಮಹದಾಯಿ: ರಾಜಕೀಯ ಗಿಮಿಕ್‌ಗಳ ಮೇಲಾಟ..!

12:15 PM Jul 14, 2017 | Team Udayavani |

ಹುಬ್ಬಳ್ಳಿ: ಮಹದಾಯಿ ವಿಷಯ “ಹಾವು ಸಾಯಲಿಲ್ಲ..ಕೋಲು ಮುರಿಯಲಿಲ್ಲ..’ ಎಂಬ ಗಾದೆಗೆ ಪ್ರತೀಕದಂತೆ ಭಾಸವಾಗತೊಡಗಿದೆ. ಮಹದಾಯಿ ನ್ಯಾಯಾಧಿಕರಣದ ವಿಚಾರಣೆ ತೀವ್ರಗೊಳ್ಳಬೇಕು, ಪ್ರಧಾನಿ ಮಧ್ಯಸ್ಥಿಕೆ, ರಾಜಿ ಸಂಧಾನ ಕುರಿತ ರೈತರಬೇಡಿಕೆಗೆ ಕನಿಷ್ಠ ಸ್ಪಂದನೆ ಇಲ್ಲವಾಗಿದೆ. ರಾಜಕೀಯ ಗಿಮಿಕ್‌ಗಳ ಮೇಲಾಟವೇ ಮೆರೆದಾಡತೊಡಗಿದೆ. 

Advertisement

ಮಹದಾಯಿ, ಕಳಸಾ-ಬಂಡೂರಿ ನಾಲಾ ಯೋಜನೆ ಜಾರಿಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟ ಎರಡು ವರ್ಷ ಗತಿಸಿದರೂ ಪರಿಹಾರದ ಸಣ್ಣ ಆಶಾಭಾವವೂ ಇಲ್ಲವಾಗಿದೆ. ನ್ಯಾಯಾಧಿಕರಣದ ಕಾಲಾವಧಿ ಮುಗಿಯುತ್ತಿದೆ. ಮೂರೂ ರಾಜ್ಯಗಳ ಸೌಹಾರ್ದ ಮಾತುಕತೆಗೆ ಸರ್ವಸಮ್ಮತ ವೇದಿಕೆಯೂ ಇಲ್ಲವಾಗುತ್ತಿದೆ.

2018ಕ್ಕೆ ಅವಧಿ ಮುಕ್ತಾಯ: ಮಹದಾಯಿ ನ್ಯಾಯಾಧಿಕರಣ ಗೋವಾ, ಕರ್ನಾಟಕ, ಮಹಾರಾಷ್ಟ್ರಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತ್ತಲ್ಲದೆ, ಹಲವು ವಿಚಾರಣೆಗಳನ್ನು ಕೈಗೊಂಡಿದೆ. ನ್ಯಾಯಾಧಿಕರಣದಿಂದ ವಿಚಾರಣೆ ತೀವ್ರಗತಿಯಲ್ಲಿ ಸಾಗಿ ತೀರ್ಪು ಹೊರ ಬೀಳಲಿದೆ ಎಂಬ ಕರ್ನಾಟಕ ನಿರೀಕ್ಷೆಗೂ ನಿರೀಕ್ಷಿತ ಫ‌ಲ ಇಲ್ಲವಾಗುತ್ತಿದೆ. ಮಧ್ಯಂತರ ಪರಿಹಾರದ ಬೇಡಿಕೆಗೂ ಮನ್ನಣೆ ಇಲ್ಲವಾಗಿದೆ.

ನ್ಯಾಯಾಧಿಕರಣದ ಅವಧಿ ಮುಗಿದಿದ್ದರಿಂದ ಈಗಾಗಲೇ ಅವಧಿ ವಿಸ್ತರಿಸಲಾಗಿದ್ದು, ಇದೀಗ ಅದರ ಅವಧಿಯೂ 2018ರ ಅಕ್ಟೋಬರ್‌ಗೆ ಮುಕ್ತಾಯವಾಗಲಿದೆ. ನಿಯಮದಲ್ಲಿ ಎರಡನೇ ಬಾರಿಗೆ ನ್ಯಾಯಾಧಿಕರಣದ ಅವಧಿ ವಿಸ್ತರಣೆಗೆ ಅವಕಾಶ ಇಲ್ಲವೆನ್ನಲಾಗುತ್ತಿದೆ. ಆದರೆ ಸಂಸತ್‌ನಲ್ಲಿ ಈ ಅವಧಿಯನ್ನು ವಿಸ್ತರಿಸುವ ನಿರ್ಣಯ ಕೈಗೊಂಡಿದ್ದಾದರೆ ಮತ್ತೆ ಕೆಲವು ತಿಂಗಳವರೆಗೆ ನ್ಯಾಯಾಧಿಕರಣಕ್ಕೆ ಅವಕಾಶ ನೀಡಬಹುದಾಗಿದೆ ಎಂಬುದು ಕಾನೂನು ತಜ್ಞರ ಅಭಿಮತ.

ರಾಜಿ ಸಂಧಾನವೆಂಬ ಮರೀಚಿಕೆ: ಮಹದಾಯಿ ವಿಚಾರದಲ್ಲಿ ಪ್ರಧಾನಿ ಮಧ್ಯ ಪ್ರವೇಶ, ರಾಜಿ ಸಂಧಾನ ವಿಚಾರ ಮರೀಚಿಕೆಯಾಗಿಯೇ ಸಾಗಿದೆ. ಸ್ವತಃ ನ್ಯಾಯಾಧಿಕರಣವೇ ಸೌಹಾರ್ದ ಮಾತುಕತೆಗೆ ಅವಕಾಶ ನೀಡಿ ತಿಂಗಳುಗಳೇ ಉರುಳಿದರೂ, ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನದ ಇಚ್ಛಾಶಕ್ತಿ ಇಲ್ಲವಾಗಿದೆ. 

Advertisement

ಪ್ರಧಾನಿ ಮಧ್ಯಪ್ರವೇಶ, ರಾಜಿ ಸಂಧಾನ ಎಂಬುದು ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವಿನ ಕೆಸರೆರೆಚಾಟದ ವೇದಿಕೆಯಾಗಿದೆ. ಪ್ರಧಾನಿ ಮಧ್ಯ ಪ್ರವೇಶಿಸಲಿ ಎಂಬುದು ಕಾಂಗ್ರೆಸ್‌ ಒತ್ತಾಯವಾದರೆ, ಗೋವಾದಲ್ಲಿ ವಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್‌ನವರನ್ನು ಕಾಂಗ್ರೆಸ್‌ ನಾಯಕರು ಒಪ್ಪಿಸಲಿ ಎಂದು ಹಾಗೂ ನಾವು ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ಮಹದಾಯಿ ಸಮಸ್ಯೆಗೆ ಪರಿಹಾರ ಎಂದು ಬಿಜೆಪಿ ಅಬ್ಬರಿಸುತ್ತಿದೆ. 

ಗೋವಾ ಚುನಾವಣೆ ಮುಗಿದ ಅನಂತರದಲ್ಲಿ ಮಹದಾಯಿ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗಳು ಹುಸಿಯಾಗಿವೆ. ಈ ನಡುವೆ ಮಹದಾಯಿ ಸೌಹಾರ್ದ ಇತ್ಯರ್ಥ ಸಭೆ ಕುರಿತಾಗಿ ಜು.7ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಇದಕ್ಕೆ ಪೂರಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜು.12ರಂದು ಗೋವಾ ಮುಖ್ಯಮಂತ್ರಿ ಮನೋಹರ ಪರ್ರಿಕ್ಕರ್‌ ಅವರಿಗೆ ಪತ್ರ ಬರೆದಿದ್ದಾರೆ.

ಗೋವಾದ ಮುಖ್ಯಮಂತ್ರಿಯಿಂದ ಯಾವ ಅನಿಸಿಕೆ ವ್ಯಕ್ತವಾಗುತ್ತಿದೆ ಎಂಬ ನಿರೀಕ್ಷೆ ಹೆಚ್ಚಿದೆ. ಸೌಹಾರ್ದ ಮಾತುಕತೆ ನಿಟ್ಟಿನ ಪ್ರಕ್ರಿಯೆ ಕೇವಲ ಮುಖ್ಯಮಂತ್ರಿಗಳ ನಡುವಿನ ಪತ್ರ ವ್ಯವಹಾರಕ್ಕೆ ಸೀಮಿತವಾಗಬಾರದು. ಪ್ರಧಾನಿ ಮಧ್ಯಪ್ರವೇಶ ಹಾಗೂ ಸಂಧಾನ ಮಾತುಕತೆ ಯತ್ನದ ಜತೆಗೆ ನ್ಯಾಯಾಧಿಕರಣದ ವಿಚಾರಣೆ  ತೀವ್ರಗೊಳ್ಳುವಿಕೆ ನಿಟ್ಟಿನಲ್ಲಿ ಗಂಭೀರ ಯತ್ನಗಳನ್ನು ನಡೆಯಬೇಕಿದೆ. ಅದು ಬಿಟ್ಟು ಮಹದಾಯಿ ರಾಜಕೀಯ ಪಕ್ಷಗಳಿಗೆ ಮತ್ತೂಮ್ಮೆ ಚುನಾವಣೆ ಸ್ಟೆಂಟ್‌ ಆಗದಿರಲಿ ಎಂಬುದು ರೈತರ ಅನಿಸಿಕೆ. 

* ಅಮರೇಗೌಡ ಗೋನವಾರ 

Advertisement

Udayavani is now on Telegram. Click here to join our channel and stay updated with the latest news.

Next