ಪಣಜಿ: ಮಹದಾಯಿ ನಮ್ಮ ಅಸ್ತಿತ್ವ. ಎಲ್ಲರ ತಾಯಿ ಮತ್ತು ಜೀವದಾಯಿನಿ, ಮಹದಾಯಿ ಮೇಲೆ ಹೇರಿರುವ ಬಿಕ್ಕಟ್ಟನ್ನು ತೊಡೆದುಹಾಕಲು ನಲವತ್ತು ಶಾಸಕರು ಮುಂದಾಗಬೇಕು. ಇಲ್ಲದಿದ್ದರೆ ಕೇವಲ ಕುರ್ಚಿಗಳನ್ನು ಕಾಯಿಸುವ ಬದಲು ನಲವತ್ತು ಶಾಸಕರಾದರೂ ರಾಜೀನಾಮೆ ನೀಡಿ ಮನೆಯಲ್ಲಿ ಕುಳಿತುಕೊಳ್ಳಬೇಕು ಎಂದು ಮಾಜಿ ಶಾಸಕ ಪ್ರತಾಪ್ ಗವಾಸ್ ಹೇಳಿಕೆ ನೀಡಿದ್ದಾರೆ.
ಗೋವಾದ ಸಾಖಳಿಯಲ್ಲಿ ಆಯೋಜಿಸಲಾಗಿರುವ ‘ಮಹದಾಯಿ ಬಚಾವ್ ಜನಾಂದೋಲನ ಹೋರಾಟದ ಹಿನ್ನೆಲೆಯಲ್ಲಿ ಜನಜಾಗೃತಿ ಮೂಡಿಸಲು ಸಾಖಳಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ನೀರು ಪ್ರತಿ ಜೀವಿಯ ಅಗತ್ಯ. ಮಹದಾಯಿಯನ್ನು ಉಳಿಸದಿದ್ದಲ್ಲಿ ಇಡೀ ಗೋವಾದ ಅಸ್ತಿತ್ವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಆತಂಕ ವ್ಯಕ್ತಪಡಿಸಿದ ಪ್ರತಾಪ್ ಗವಾಸ್, ಜೀವದಾನ ನೀಡುವ ಮಹದಾಯಿ ಉಳಿವಿಗಾಗಿ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸುನೀತಾ ವೆರೆಕರ್, ಮಂಗಲದಾಸ್ ನಾಯ್ಕ್ ಉಪಸ್ಥಿತರಿದ್ದರು.
ನಗರಸಭೆ ನೀಡಿದ್ದ ಅನುಮತಿ ರದ್ದು……!
ಗೋವಾದ ಸಾಖಳಿಯಲ್ಲಿ ಆಯೋಜಿಸಿದ್ದ ಮಹದಾಯಿ ಬಚಾವ್ ಜನಾಂದೋಲನ ಹೋರಾಟ ಸಭೆಗೆ ನೀಡಿದ್ದ ಅನುಮತಿಯನ್ನು ಸ್ಥಳೀಯ ನಗರಸಭೆ ಹಿಂಪಡೆದಿದೆ. ಸೋಮವಾರ (16ರಂದು) ಸಾಖಳಿಯ ಬೃಹತ್ ಮೈದಾನದಲ್ಲಿ ಈ ಮಹಾಸಭೆ ಆಯೋಜಿಸಲಾಗಿತ್ತು. ಈ ಸಭೆಗೆ ಸಾಖಳಿಯ ನಗರಸಭೆಯಿಂದಲೂ ಅನುಮತಿ ನೀಡಲಾಗಿತ್ತು. ಆದರೆ, ಈಗ ಈ ಅನುಮತಿಯನ್ನು ಹಿಂಪಡೆಯಲಾಗಿದೆ.