Advertisement

ಮಹದಾಯಿ: ರೈತರ ಮೇಲಿನ ಎಲ್ಲಾ ಕೇಸ್‌ ವಾಪಸ್‌

03:45 AM Feb 16, 2017 | Team Udayavani |

ಬೆಂಗಳೂರು: ಮಹದಾಯಿ ನದಿಯಿಂದ ಕಳಸಾ-ಬಂಡೂರಿ ನಾಲಾ ಯೋಜನೆಗೆ ನೀರು ಬಿಡುಗಡೆ ಮಾಡಲು ನಿರಾಕರಿಸಿದ ನ್ಯಾಯಾಧಿಕರಣದ ಆದೇಶದ ವಿರುದ್ಧ ಮೊಳಗಿದ ಜನಾಕ್ರೋಶದ ವೇಳೆ ರೈತರ ಮೇಲೆ ದಾಖಲಿಸಿರುವ ಎಲ್ಲಾ 94 ಪ್ರಕರಣಗಳನ್ನು ಹಿಂಪಡೆಯಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಅವರು ಈ ಕುರಿತು ಮಾಹಿತಿ ನೀಡಿದರು.

ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ 2016ರ ಜೂನ್‌ ಮತ್ತು ಜುಲೈ ತಿಂಗಳಲ್ಲಿ ನವಲಗುಂದ ಸೇರಿದಂತೆ ಹಲವೆಡೆ ನಡೆದ ಗಲಭೆಗಳಿಗೆ ಸಂಬಂಧಿಸಿದಂತೆ ರೈತರ ವಿರುದ್ಧ 94 ಪ್ರಕರಣಗಳನ್ನು ದಾಖಲಿಸಲಾಗಿತ್ತು. ಈ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ಸಚಿವ ಸಂಪುಟ ಉಪಸಮಿತಿ ರಚಿಸಿದ್ದು, ಉಪ ಸಮಿತಿಯು 72 ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂಪಡೆಯುವ ಬಗ್ಗೆ ತೀರ್ಮಾನಿಸಿತ್ತು. ಇನ್ನುಳಿದ 22 ಪ್ರಕರಣಗಳು ಗಂಭೀರ ಅಪರಾಧಗಳಾಗಿರುವುದರಿಂದ ಅವುಗಳನ್ನು ಹಿಂಪಡೆಯುವ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳದೆ ಸಚಿವ ಸಂಪುಟದ ನಿರ್ಧಾರಕ್ಕೆ ಬಿಡಲಾಗಿತ್ತು. 

ಈ ಮಧ್ಯೆ ವಿಧಾನಸಭೆಯಲ್ಲಿ ಎಲ್ಲಾ ರೈತರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವಂತೆ ಒತ್ತಾಯಿಸಲಾಗಿತ್ತು. ಅದರಂತೆ ಮಹದಾಯಿ ಹೋರಾಟದ ವೇಳೆ ರೈತರ ವಿರುದ್ಧ ದಾಖಲಾದ 72 ಪ್ರಕರಣಗಳು ಮತ್ತು ಗಂಭೀರ ಅಪರಾಧ ಎಂದು ಪರಿಗಣಿಸಲಾಗಿದ್ದು 22 ಪ್ರಕರಣಗಳು ಸೇರಿದಂತೆ ಒಟ್ಟು 93 ಪ್ರಕರಣಗಳನ್ನು ಹಿಂಪಡೆಯಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇನ್ನುಳಿದಂತೆ ಇತರೆಡೆ ನಡೆದ ಗಲಭೆಗಳಿಗೆ ಸಂಬಂಧಿಸಿದಂತೆ ರೈತರ ವಿರುದ್ಧ ದಾಖಲಿಸಿರುವ 60 ಪ್ರಕರಣಗಳು ಮತ್ತು ವಕೀಲರ ವಿರುದ್ಧ ದಾಖಲಾಗಿರುವ 14 ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ಸಮಾಲೋಚನೆ ನಡೆಸಿ ವರದಿ ನೀಡುವಂತೆ ಸಚಿವ ಸಂಪುಟ ಉಪಸಮಿತಿಗೆ ಸೂಚಿಸಲಾಗಿದೆ.

ಕೂಡಲಸಂಗಮದಲ್ಲಿ ಅಕ್ಷರಧಾಮ ಮಾದರಿ ಮ್ಯೂಸಿಯಂ
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕು ಕೂಡಲ ಸಂಗಮದಲ್ಲಿ ದೆಹಲಿಯ ಸ್ವಾಮಿ ನಾರಾಯಣಗುರು ಅಕ್ಷರಧಾಮ ಮಾದರಿಯಲ್ಲಿ ಬಸವೇಶ್ವರ ಮ್ಯೂಸಿಯಂ ಸ್ಥಾಪಿಸುವ ಕಾರ್ಯಕ್ಕೆ ಚಾಲನೆ ನೀಡಲು ಸರ್ಕಾರ ತೀರ್ಮಾನಿಸಿದೆ.

Advertisement

ಒಟ್ಟು 367 ಕೋಟಿ ರೂ. ವೆಚ್ಚದ ಈ ಯೋಜನೆಯಡಿ ಮೊದಲ ಹಂತದಲ್ಲಿ ಮ್ಯೂಸಿಯಂ ಸ್ಥಾಪನೆ ಕಾರ್ಯಕ್ಕೆ ಚಾಲನೆ ನೀಡುವುದರ ಜತೆಗೆ ಬಸವನಬಾಗೇವಾಡಿಯಲ್ಲಿ ಅವಶ್ಯಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು 44.90 ಕೋಟಿ ರೂ. ವೆಚ್ಚಕ್ಕೆ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಸಂಪುಟದ ಇತರೆ ತೀರ್ಮಾನಗಳು
– ರಾಜ್ಯದ 189 ಗ್ರಾಮೀಣ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರತಿ ಕ್ಷೇತ್ರದಲ್ಲಿ 20 ಕಿ.ಮೀ.ಯಂತೆ ಗಾಂಧಿ ಪಥ ಗ್ರಾಮ ಪಥ ಯೋಜನೆಯಡಿ (ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ- 4ನೇ ಹಂತ) 3,982 ಕೋಟಿ ರೂ. ವೆಚ್ಚದಲ್ಲಿ 4,385.71 ಕಿ.ಮೀ. ರಸ್ತೆಯನ್ನು ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಮೂಲಕ ಅನುಷ್ಠಾನಗೊಳಿಸುವುದು.

– ಬೆಂಗಳೂರು ಗ್ರಾಮಾಂತರ ಜಿಲ್ಲೆ ಮುದ್ದೇನಹಳ್ಳಿಯಲ್ಲಿ ದಸ್ಸಾಲ್‌ ಸಿಸ್ಟಮೀಸ್‌ ಮತ್ತು ವಿಶ್ವೇಶ್ವರಯ್ಯ ಆತಂತ್ರಿಕ ವಿವಿ ಸಹಯೋಗದಲ್ಲಿ 288.68 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಅಕಾಶಯಾನ ಮತ್ತು ರಕ್ಷಣಾ ಪಡೆಗಳಲ್ಲಿ ಸೆಂಟರ್‌ ಆಫ್ ಎಕ್ಸಲೆನ್ಸ್‌ ಸ್ಥಾಪನೆ.

– ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಡೆಸಲಾಗುತ್ತಿರುವ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿನಿಲಯ ಮತ್ತು ಆಶ್ರಮ ಶಾಲೆಗಳ ವಿದ್ಯಾರ್ಥಿಗಳಿಗೆ 2016-17ನೇ ಸಾಲಿನಲ್ಲಿ 6.49 ಕೋಟಿ ರೂ. ವೆಚ್ಚದಲ್ಲಿ ಕೊಬ್ಬರಿ ಎಣ್ಣೆ, ಟಾಲ್ಕಂ ಪೌಡರ್‌, ಟೂತ್‌ಪೇಸ್ಟ್‌, ಸಾಬೂಮುಗಳನ್ನೊಳಗೊಂಡ ನಿರ್ಮಲ/ಸಿರಿಗಂಧ ಕಿಟ್‌ಗಳನ್ನು ಕರ್ನಾಟಕ ಸೋಪ್ಸ್‌ ಅಂಡ್‌ ಡಿಟರ್ಜಂಟ್‌ ಲಿಮಿಟೆಡ್‌ನಿಂದ ವಿತರಿಸುವುದು.

– ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಮೃದು ಕೌಶಲ್ಯ ಪಠ್ಯಕ್ರಮಕ್ಕೆ ಅನುಗುಣವಾಗಿ ಎಸ್‌ಸಿಪಿ, ಟಿಎಸ್‌ಪಿ ಅನುದಾನದಿಂದ 75.85 ಕೋಟಿ ರೂ. ವೆಚ್ಚದಲ್ಲಿ 25275 ಲ್ಯಾಪ್‌ಟಾಪ್‌ ವಿತರಣೆ.

– ಸರ್ಕಾರಿ ಪಾಲಿಟೆಕ್ನಿಕ್‌ ಮತ್ತು ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಾರ್ಷಿಕ 2.5 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವ ಎಸ್‌ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಎಸ್‌ಸಿಪಿ, ಟಿಎಸ್‌ಪಿ ಅನುದಾನದಿಂದ 37.06 ಕೋಟಿ ರೂ. ವೆಚ್ಚದಲ್ಲಿ 12854 ಲ್ಯಾಪ್‌ಟಾಪ್‌ ಒದಗಿಸುವುದು.

– ಪದವಿಪೂರ್ವ ಶಿಕ್ಷಣ ಇಲಾಖೆಗೆ 2016-17ನೇ ಸಾಲಿಗೆ ಕಂಪ್ಯೂಟರ್‌ ಪ್ರಿಂಟರ್‌ ಮತ್ತಿತರೆ ಉಪಕರಣಗಳನ್ನು 6.61 ಕೋಟಿ ರೂ. ವೆಚ್ಚದಲ್ಲಿ ನೀಡುವುದು.

– ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ವಿವಿಧ ಆಸ್ಪತ್ರೆಗಳಿಗೆ 2016-17ನೇ ಸಾಲಿನಲ್ಲಿ 22 ಕೋಟಿ ರೂ. ವೆಚ್ಚದಲ್ಲಿ ಅವಶ್ಯಕ ವೈದ್ಯಕೀಯ ಉಪಕರಣ ಮತ್ತು ಪೀಠೊಪಕರಣ ಒದಗಿಸುವುದು.

– ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ ಟರ್ಷಿಯರಿ ಕ್ಯಾನ್ಸರ್‌ ಕೇಂದ್ರವನ್ನು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ 56.18 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವುದು.

– ಮಂಗಳೂರಿನ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ 35.69 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಹ್ರೈಬ್ರಿಡ್‌ ಪ್ರಜೆಕ್ಷನ್‌ ವ್ಯವಸ್ಥೆ ಇರುವ ಆಪ್ಟೋ-ಮೆಕ್ಯಾನಿಕಲ್‌ ಹಾಗೂ 2ಡಿ/3ಡಿ ಡಿಜಿಲ್‌ ಪ್ರೊಜೆಕ್ಷನ್‌ ವ್ಯವಸ್ಥೆಯ ತಾರಾಲಯ ಸ್ಥಾಪನೆ.

Advertisement

Udayavani is now on Telegram. Click here to join our channel and stay updated with the latest news.

Next