ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ವಿವಾದವನ್ನು ನ್ಯಾಯಾಧಿಕರಣದ ಹೊರಗೆ ಬಗೆಹರಿಸಿಕೊಳ್ಳುವ ಕುರಿತು ಗೋವಾ, ಮಹಾರಾಷ್ಟ್ರ ಮುಖ್ಯಮಂತ್ರಿಗಳ ಮನವೊಲಿಸಲು ಮುಂದಿನ ತಿಂಗಳ ಮೊದಲಾರ್ಧದಲ್ಲಿ ಬಿಜೆಪಿ ನಿಯೋಗ ಎರಡೂ ರಾಜ್ಯಗಳಿಗೆ ಭೇಟಿ ನೀಡಲಿದೆ. ಕಳಸಾ ಬಂಡೂರಿ ಯೋಜನೆಗೆ ಮಹದಾಯಿ ನದಿಯಿಂದ ನೀರು ಬಿಡುಗಡೆ ಮಾಡುವ ವಿಚಾರವನ್ನು ನ್ಯಾಯಾಧಿ ಕರಣದಲ್ಲೇ ಬಗೆಹರಿಸಿಕೊಳ್ಳಬೇಕು ಎಂದುಗೋವಾ ಪಟ್ಟು ಹಿಡಿದಿದೆ. ಅಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಸಿಎಂ ಮನೋಹರ್ ಪರಿಕ್ಕರ್ ಅವರ ಮನ ವೊಲಿಸಲು ಈ ಪ್ರಯತ್ನ ಮಾಡಲಾಗಿದೆ. ಬಹುತೇಕ ಸೆಪ್ಟೆಂಬರ್ ಮೊದಲ ಅಥವಾ 2ನೇ ವಾರ ನಿಯೋಗ ಕರೆದೊಯ್ಯಲಾಗುವುದು. ಎರಡೂ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿ ಮಾತುಕತೆ ಮೂಲಕ ವಿವಾದ ಬಗೆಹರಿ ಸಿಕೊಳ್ಳಲು ಮನವೊಲಿಸಲಾಗುವುದು. ಪಕ್ಷದ ರಾಷ್ಟ್ರೀಯ ನಾಯಕರು ಮಧ್ಯ ಪ್ರವೇಶ ಮಾಡುತ್ತಿರುವುದರಿಂದ ಗೋವಾ ಸಿಎಂ ಪರಿಕ್ಕರ್ ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳಲು ಒಪ್ಪಿಗೆ ನೀಡುವ ಭರವಸೆ ಇದೆ ಎಂದು ಮೂಲಗಳು ಹೇಳಿವೆ.
ಕಾಂಗ್ರೆಸ್‌ನವರೂ ಪ್ರಯತ್ನಿಸಬೇಕು
ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ವಿವಾದವನ್ನು ನ್ಯಾಯಾಧಿಕರಣದ ಹೊರಗೆ ಬಗೆಹರಿಸಿಕೊಳ್ಳುವ ಕುರಿತು ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳನ್ನು ಒಪ್ಪಿ ಸುವ ಜವಾಬ್ದಾರಿ ನಮ್ಮದು. ಈ ನಿಟ್ಟಿನಲ್ಲಿ ಶೀಘ್ರವೇ ನಿಯೋಗ ತೆರಳಲಾಗುವುದು. ಸಿಎಂ ಸಿದ್ದರಾಮಯ್ಯ ಅವರಿಗೆ ಆಸಕ್ತಿ ಇದ್ದರೆ ಎರಡೂ ರಾಜ್ಯಗಳಲ್ಲಿ ಪ್ರತಿಪಕ್ಷವಾಗಿರುವ ಕಾಂಗ್ರೆಸ್‌ನ ನಾಯಕರನ್ನು ಅವರು ಒಪ್ಪಿಸಬೇಕು ಎಂದು ಹೇಳಿದರು.