Advertisement

ಮಹದಾಯಿ ಅಧಿಸೂಚನೆಗೆ ಒತ್ತಾಯ

12:10 PM Jan 02, 2020 | Suhan S |

ಬೆಳಗಾವಿ: ಮಹದಾಯಿ ನ್ಯಾಯಾಧೀಕರಣದ ತೀರ್ಪಿನನ್ವಯ ಕೂಡಲೇ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುವಂತೆ ಆಗ್ರಹಿಸಿ ಜೆಡಿಎಸ್‌ ಮುಖಂಡ ಎನ್‌.ಎಚ್‌. ಕೋನರಡ್ಡಿ ನೇತೃತ್ವದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ನಗರದ ರಾಣಿ ಚನ್ನಮ್ಮ ವೃತ್ತದಿಂದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಜೆಡಿಎಸ್‌ಮುಖಂಡರು, ಕರ್ನಾಟಕ ಸಂಗ್ರಾಮ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣ ಸೇರಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಜಿಲ್ಲಾ ಧಿಕಾರಿ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ರವಾನಿಸಿದರು.

ನ್ಯಾಯಾಧೀಕರಣದ ತೀರ್ಪಿನನ್ವಯ ಕರ್ನಾಟಕದ ನೀರಿನ ಪಾಲನ್ನು ಕೇಂದ್ರ ಸರ್ಕಾರ ತಕ್ಷಣ ಅಧಿಸೂಚನೆ ಹೊರಡಿಸಬೇಕು. ಜನೇವರಿ 2ರಂದು ತುಮಕೂರಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ರೈತರಲ್ಲಿ  ಆಶಾಕಿರಣ ಮೂಡಿದೆ. ಈ ಆಶಾಭಾವನೆ ಹುಸಿಗೊಳಿಸಬಾರದು. ಸಮಾವೇಶದಲ್ಲಿ ಮಹದಾಯಿ ಹೋರಾಟದ ವಿಚಾರವಾಗಿ ಮಾತನಾಡುತ್ತಾರೆ ಎಂಬ ನಂಬಿಕೆ ಇದೆ. ಹೊಸ ವರ್ಷಕ್ಕೆ ಶುಭ ಸುದ್ದಿ ನೀಡಬೇಕು ಎಂದು ಆಗ್ರಹಿಸಿದರು.

ಮಹದಾಯಿ ನದಿ ಪಾತ್ರದಿಂದ ಮಲಪ್ರಭಾ ನದಿಗೆ ನೀರು ಹರಿಸುವ ಕಳಸಾ ಬಂಡೂರಿ ನಾಲಾ ಜೋಡಣೆ ಯೋಜನೆಗಾಗಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು, ಜನಸಾಮಾನ್ಯರು ನಿರಂತರ ಹೋರಾಟದ ಫಲವಾಗಿ ತೀರ್ಪು ಬಂದಿದೆ. ಆದರೆ ಈ ತೀರ್ಪಿನನ್ವಯ ಇನ್ನೂ ಅಧಿಸೂಚನೆ ಆಗದಿರುವುದು ಈ ಭಾಗದ ಜನರಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ದೂರಿದರು. ನ್ಯಾಯಾಧೀಕರಣ ತೀರ್ಪಿನಲ್ಲಿ ಕರ್ನಾಟಕಕ್ಕೆ ಕೇವಲ 13.5ಟಿಎಂಸಿ ನೀರನ್ನು ಮಾತ್ರ ಹಂಚಿಕೆ ಮಾಡಿ ಅನ್ಯಾಯವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಸಂವಿಧಾನಿಕ ಹಕ್ಕಿನ ಮೂಲಕ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್‌ ಮುಖಂಡ ಎನ್‌.ಎಚ್‌. ಕೋನರಡ್ಡಿ ಮಾತನಾಡಿ, ಅನೇಕ ವರ್ಷಗಳಿಂದ ಮಹದಾಯಿ, ಕಳಸಾ ಬಂಡೂರಿ ಯೋಜನೆಗಾಗಿ ಹೋರಾಟ ನಡೆಸಲಾಗುತ್ತಿದೆ. ನ್ಯಾಯಾಧಿಕರಣ ತೀರ್ಪು ಬಂದು ವರ್ಷ ಕಳೆದಿದೆ. ಆದರೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುತ್ತಿಲ್ಲ. ಹೋರಾಟದಲ್ಲಿ ನಿರತರಾದ ರೈತರ ವಿರುದ್ಧ ಹಾಕಿರುವ ಕೇಸುಗಳನ್ನು ಹಿಂಪಡೆಯಬೇಕುಎಂದು ಆಗ್ರಹಿಸಿದರು.

Advertisement

ಜ. 5ರಂದು ಹುಬ್ಬಳಿ ಪ್ರವಾಸಿ ಮಂದಿರದಲ್ಲಿ ಮಹದಾಯಿ ನದಿ ವ್ಯಾಪ್ತಿಗೆ ಬರುವ ಶಾಸಕರು, ಸಂಸದರು, ಸಚಿವರ ಸಭೆ ಕರೆಯಲಾಗಿದೆ. ಅಲ್ಲಿ ಸಮಸ್ಯೆ ಕುರಿತು ಚರ್ಚಿಸಲಾಗುತ್ತದೆ. ಕೇಂದ್ರ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟದ ರೂಪರೇಷೆ ಬದಲಾಗಲಿದೆ. ರಾಜ್ಯದಲ್ಲಿರುವ ಬಿಜೆಪಿಯ 25 ಸಂಸದರು ಕೇಂದ್ರದ ಗಮನಕ್ಕೆ ತಂದು ನಮ್ಮ ಬೇಡಿಕೆಗೆ ಸ್ಪಂದಿಸಬೇಕು. ಸರ್ಕಾರ ನ್ಯಾಯಯುತ ಬೇಡಿಕೆಗೆ ಮೀನಾಮೇಷ ಎನಿಸಬಾರದು ಎಂದರು.

ಜೆಡಿಎಸ್‌ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ರೈತ ಮುಖಂಡರಾದ ಚೂನಪ್ಪ ಪೂಜಾರಿ, ಶ್ವೇತಾ ದುಮನಾಳ, ಯಶೋಧಾ ಬಿರಡಿ, ನಿರ್ಮಾಲಾ ಹಡಗಲಿ, ಜಯಶ್ರೀ ಗುರನ್ನವರ, ಈಶ್ವರಗೌಡ ಪಾಟೀಲ, ಶಾಂತಾ ಶಿಂಧೆ, ಮಹಾದೇವಿ ಹಿರೇಮಠ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next