ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಚೆನ್ನೈ ಸನಿಹವಿರುವ ಮಹಾಬಲೀಪುರಂ ಹಾಗೂ ಮಕರವನಕ್ಕೆ ಭೇಟಿ ಕೊಟ್ಟಿದ್ದೆವು. ಈಚೆಗೆ ಚೆನ್ನೈನ ನಮ್ಮ ನಾದಿನಿಯ ಮನೆಗೆ ಹೋಗಿದ್ದಾಗ ಈ ಎರಡು ಸ್ಥಳಗಳನ್ನು ಮತ್ತೆ ನೋಡುವ ಮನಸ್ಸಾಯಿತು. ಒಂದು ಟ್ಯಾಕ್ಸಿ ಮಾಡಿಕೊಂಡು ಚೆನ್ನೈನಿಂದ ಬೆಳಿಗ್ಗೆ ಹೊರಟೆವು. ಮೊದಲಿಗೆ ಮಹಾಬಲೀಪುರಂ ನೋಡಿಕೊಂಡು ಮಧ್ಯಾಹ್ನ 12.30ಕ್ಕೆ ಮೊಸಳೆವನದ ಸನಿಹ ಬಂದೆವು. ತಲಾ ಇಪ್ಪತ್ತು ರೂಪಾಯಿಗಳ ಟಿಕೆಟ್ ಕೊಂಡು ಒಳಗೆ ಹೋದೆವು. ಮೊದಲ ಬಾರಿ ಭೇಟಿ ಕೊಟ್ಟಿದ್ದಾಗ ಪ್ರವೇಶಧನ ಒಂದು ರೂಪಾಯಿ ಮತ್ತು ಕ್ಯಾಮೆರಾಗೆ ಐದು ರೂಪಾಯಿ ಇತ್ತು! ಈಗ ಒಂದು ಸೂಚನೆಯನ್ನೇ ಹಾಕಿದ್ದರು – ಸಿಹಿ ಸುದ್ದಿ – “ಕ್ಯಾಮೆರಾ ಶುಲ್ಕ ರದ್ದುಪಡಿಸಲಾಗಿದೆ!’ ಎಂದು.
ಪ್ರವೇಶ ದ್ವಾರದ ಸಮೀಪವೇ ಮೊಸಳೆವನ ನಡೆದು ಬಂದ ದಾರಿಯನ್ನು ತೋರಿಸುವ ಒಂದು ಫಲಕವಿದೆ. ಎಪ್ಪತ್ತರ ದಶಕದಲ್ಲಿ ನಮ್ಮ ದೇಶದಲ್ಲಿ ಮೊಸಳೆಗಳ ಸಂತತಿ ಗಣನೀಯವಾಗಿ ಕಡಿಮೆಯಾಗಿತ್ತು. ಇದನ್ನು ಮನಗಂಡ ಸರ್ಕಾರ ಮೊಸಳೆಗಳ ಸಂರಕ್ಷಣೆ ಹಾಗೂ ವಂಶಾಭಿವೃದ್ಧಿಯ ಸಲುವಾಗಿ ಮದ್ರಾಸ್ ಕ್ರೊಕೊಡೈಲ್ ಬ್ಯಾಂಕ್’ ಅನ್ನು ವಿಶ್ವ ವನ್ಯಜೀವಿ ನಿಧಿ, ವನ್ಯಜೀವಿ ಸಂರಕ್ಷಣಾ ನ್ಯಾಸ, ಸ್ಮಿತ್ಸೋಕನಿಯನ್ ಸಂಸ್ಥೆ ಮುಂತಾದ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ 1976ರಲ್ಲಿ ಸ್ಥಾಪಿಸಿತು. ಚೆನ್ನೈ- ಮಹಾಬಲಿಪುರಂ ರಸ್ತೆಯಲ್ಲಿ, ಚೆನ್ನೈನಿಂದ ಸುಮಾರು ನಲ್ವತ್ತೈದು ಕಿ. ಮೀ. ದೂರದಲ್ಲಿರುವ, ವಡೆ°ಮ್ಮಲಿ ಎಂಬ ಗ್ರಾಮದಲ್ಲಿ ಈ ಮೊಸಳೆವನವಿದೆ. ಇಪ್ಪತ್ತೈದು ಎಕರೆ ವ್ಯಾಪಿಸಿಕೊಂಡಿರುವ ಈ ಮೊಸಳೆ ಪಾರ್ಕ್‌ನಲ್ಲಿ ಹತ್ತಾರು ದೇಶಗಳ ವಿವಿಧ ಜಾತಿಯ ಮೊಸಳೆಗಳಲ್ಲದೆ, ಅನೇಕ ಬಗೆಯ ಆಮೆಗಳು, ಉಡಗಳು, ಇವುಗಳನ್ನು ಸಾಕಲಾಗಿದೆ.
ಮೊಸಳೆಗಳ ಜೀವನ ಪದ್ಧತಿ, ಸಂತಾನಾಭಿವೃದ್ಧಿ ಇವುಗಳ ಅಧ್ಯಯನ ಹಾಗೂ ಆರೈಕೆಗಾಗಿ ಇಲ್ಲಿ ಒಂದು ವ್ಯವಸ್ಥಿತ ಪ್ರಯೋಗಾಲಯವೂ ಇದೆ. ಇಲ್ಲಿ ಜನಿಸಿದ ಮೊಸಳೆ ಮರಿಗಳು ದೇಶದ ಅನೇಕ ಮೃಗಾಲಯಗಳು, ವನ್ಯಜೀವಿಧಾಮಗಳು ಅಥವಾ ಸ್ವಾಭಾವಿಕ ಪರಿಸರಕ್ಕೆ ರವಾನೆಯಾಗುತ್ತವೆ. ಪ್ರಾಣಿ ವಿನಿಮಯ ಆಧಾರದಲ್ಲಿ ವಿದೇಶಗಳಿಗೂ ಕಳಿಸಿಕೊಡುವುದುಂಟು.
ಮೊಸಳೆಗಳೂ ಕೂಡಾ ಇತರ ವನ್ಯಜೀವಿಗಳಂತೆ ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮೀನುಗಳ ಅತಿಸಂತಾನದಿಂದ ಆಗುವ ಹಾನಿಯನ್ನು ತಡೆಯುವುದು, ಇಲಿ ಹೆಗ್ಗಣಗಳ ಹಾವಳಿಯನ್ನು ತಡೆಯುವುದು, ನದಿ ಸರೋವರಗಳನ್ನು ಶುಚಿಗೊಳಿಸುವುದು ಮುಂತಾಗಿ ಮೊಸಳೆಗಳಿಂದ ಅನೇಕ ಪ್ರಯೋಜನಗಳಿವೆ. ಅಂತೆಯೇ ಅವುಗಳ ಉಳಿವು, ಅಭಿವೃದ್ಧಿ ಆವಶ್ಯಕ.
ಕೆ. ಪಿ. ಸತ್ಯನಾರಾಯಣ