ದೇಶಾದ್ಯಂತ ಗುರುವಾರ(ಮಾರ್ಚ್ 11) ಶಿವನನ್ನು ಭಕ್ತಿಯಿಂದ ಆರಾಧಿಸಲಾಗುತ್ತದೆ. ಮಾಘ ಮಾಸದ ಕೃಷ್ಣ ಪಕ್ಷದ ಚತುದರ್ಶಿಯಂದು ಆಚರಿಸಲಾಗುವ ಶಿವರಾತ್ರಿ ಭಕ್ತರ ಪಾಲಿನ ವಿಶಿಷ್ಟ ಹಬ್ಬವಾಗಿದ್ದು, ಈ ಹಿನ್ನೆಲೆಯಲ್ಲಿ ದೇಶದಲ್ಲಿ ಇರುವ ಪವಿತ್ರ 12 ಜ್ಯೋತಿರ್ಲಿಂಗ ಹೊಂದಿರುವ ದೇವಾಲಯಗಳ ಸಂಕ್ತಿಪ್ತ ವಿವರ ಇಲ್ಲಿದೆ.
ಭಾರತದಲ್ಲಿ 12 ಪವಿತ್ರ ಜ್ಯೋತಿರ್ಲಿಂಗಗಳಿದ್ದು, ಇದನ್ನು ಶಿವನ ತೇಜಸ್ಸು ಹೊಂದಿರುವ ಸ್ಥಳ ಎಂದೇ ಪರಿಗಣಿಸಲಾಗಿದೆ. ಜ್ಯೋತಿ ಅಂದರೆ ಕಾಂತಿ, ತೇಜಸ್ಸು ಮತ್ತು ಲಿಂಗ. ಇದು ಭಗವಾನ್ ಶಿವನ ಅಂಶವಾಗಿದೆ.
ಸೋಮನಾಥ ದೇವಾಲಯ:
ಗುಜರಾತಿನ ಸೌರಾಷ್ಟ್ರ ಪ್ರದೇಶದ ಪ್ರಭಾಸ ಕ್ಷೇತ್ರದಲ್ಲಿರುವ ಸೋಮನಾಥ ಜ್ಯೋತಿರ್ಲಿಂಗ ಪವಿತ್ರ ಜ್ಯೋತಿರ್ಲಿಂಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಸೋಮನಾಥವನ್ನು ಅನಂತಮಯ ದೇಗುಲವೆಂದು ಬಣ್ಣಿಸಲಾಗುತ್ತದೆ.
ಮಲ್ಲಿಕಾರ್ಜುನಾ ದೇವಾಲಯ:
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಪ್ರಸಿದ್ಧ ಮಲ್ಲಿಕಾರ್ಜುನ ಕ್ಷೇತ್ರ ಶಿವನ ಪವಿತ್ರ ಜ್ಯೋತಿರ್ಲಿಂಗಗಳಲ್ಲಿ ಒಂದು. ಇದು ಕೃಷ್ಣಾ ನದಿಯ ಪರ್ವತ ಪ್ರದೇಶದಲ್ಲಿದೆ. ಶ್ರೀಶೈಲ ಎಂದೇ ಖ್ಯಾತಿಯಾಗಿರುವ ಇದು ಪವಿತ್ರ ಭೂಮಿಯಾಗಿದೆ. ಇಲ್ಲಿ ಆದಿ ಶಂಕರಾಚಾರ್ಯರು ಶಿವಾನಂದ ಲಹರಿಯನ್ನು ರಚಿಸಿದ್ದರು.
ಮಹಾಕಾಲೇಶ್ವರ್ ದೇವಾಲಯ:
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಮಹಾಕಾಲ ಶಿವಲಿಂಗ ದೇವಾಲಯವಿದೆ. ಇದು ಸ್ವಯಂಭೂ ಲಿಂಗವಾಗಿದೆ. ಇದು 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಇಲ್ಲಿ ಶಿವಲಿಂಗವನ್ನು ಸ್ಪರ್ಶಿಸಬಹುದಾಗಿದೆ.
ಮಹಾಕಾಲೇಶ್ವರ್ ನಲ್ಲಿ ಎರಡು ನಂದಾದೀಪಗಳು ನಿರಂತರವಾಗಿ ಉರಿಯುತ್ತಾ ಬಂದಿದೆ ಎಂದು ಹೇಳುತ್ತಾರೆ.
ಮಹಾಕಾಲೇಶ್ವರ್ ನಲ್ಲಿ ಲಿಂಗದ ಮುಖ ದಕ್ಷಿಣ ದಿಕ್ಕಿಗೆ ಇದ್ದು, ಈ ಭಾಗದಲ್ಲಿರುವ ಲಿಂಗ ದೇಶದ ಯಾವ ದೇವಾಲಯದಲ್ಲಿಯೂ ಇಲ್ಲ. ಇಲ್ಲಿ ಮೂರು ಶಿವಲಿಂಗಗಳನ್ನು ಮೂರು ಅಂತಸ್ತಿನಲ್ಲಿ ಪ್ರತಿಷ್ಠಾಪಿಸಲಾಗಿದೆ. ಮೊದಲ ಅಂತಸ್ತಿನಲ್ಲಿ ಮಹಾಕಾಳ ಲಿಂಗ, ಎರಡನೇ ಅಂತಸ್ತಿನಲ್ಲಿ ಓಂಕಾರ ಲಿಂಗ, ಮೂರನೇ ಅಂತಸ್ತಿನಲ್ಲಿ ನಾಗಚಂದ್ರೇಶ್ವರ ಲಿಂಗವಿದೆ. ಈ ಮೂರು ಲಿಂಗಗಳಲ್ಲಿ ನಾಗಚಂದ್ರೇಶ್ವರ ಲಿಂಗದ ದರ್ಶನ ನಾಗ ಪಂಚಮಿಯಂದು ಮಾತ್ರ ಭಕ್ತರಿಗೆ ಅವಕಾಶ ನೀಡಲಾಗುತ್ತದೆ.
ಓಂಕಾರೇಶ್ವರ:
ಮಧ್ಯಪ್ರದೇಶದ ಇಂಧೋರ್ ನಿಂದ 77 ಕಿಲೋ ಮೀಟರ್ ದೂರದಲ್ಲಿ ನರ್ಮದಾ ನದಿ ದಂಡೆಯ ದ್ವೀಪದ ಮೇಲೆ ಓಂಕಾರೇಶ್ವರ ಜ್ಯೋತಿರ್ಲಿಂಗ ದೇವಾಲಯವಿದೆ. ದೇವಾಲಯವು ಮಧ್ಯದಲ್ಲಿರುವ ಮಾಂಧಾತ ಅಥವಾ ಶಿವಪುರಿ ಎಂದು ಕರೆಯಲ್ಪಡುವ ದ್ವೀಪದಲ್ಲಿದೆ. ಈ ದ್ವೀಪವು ಓಂ ಆಕಾರದಲ್ಲಿರುವುದರಿಂದ ಓಂಕಾರೇಶ್ವರ ಎಂಬ ಹೆಸರು ಬಂದಿದೆ. ಇದು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದು. ನದಿಯ ಆಚೆ ದಡದಲ್ಲಿ ಅಮರೇಶ್ವರ ಎಂಬ ಇನ್ನೊಂದು ಶಿವದೇವಾಲಯವಿದ್ದು, ಇದನ್ನೂ ಜ್ಯೋತಿರ್ಲಿಂಗವೆಂದು ಹೇಳುತ್ತಾರೆ.
ಕೇದಾರನಾಥ ದೇವಾಲಯ:
ಉತ್ತರಾಖಂಡದ ಮಂದಾಕಿನಿ ನದಿ ತಟದಲ್ಲಿ ಸ್ಥಾಪಿತವಾಗಿರುವ ಕೇದಾರನಾಥ ಪ್ರಮುಖ ಜ್ಯೋತಿರ್ಲಿಂಗಗಳಲ್ಲಿ ಒಂದು. ಈ ಕ್ಷೇತ್ರ ಸಮುದ್ರ ಮಟ್ಟಕ್ಕಿಂತ ಎತ್ತರದಲ್ಲಿದ್ದು, ಹಿಮಾಲಯ ಶ್ರೇಣಿಗಳ ತಪ್ಪಲಿನಲ್ಲಿದೆ. ಕೇದಾರನಾಥಕ್ಕೆ ಏಪ್ರಿಲ್ ನಿಂದ ನವೆಂಬರ್ ವರೆಗೆ ಮಾತ್ರ ಭಕ್ತರಿಗೆ ತೆರೆದಿರುತ್ತದೆ. ಉಳಿದ ಸಮಯ ಹಿಮಾವೃತದಿಂದಾಗಿ ದೇವಾಲಯ ಮುಚ್ಚಿರುತ್ತದೆ.
ಭೀಮಾಶಂಕರ್ ದೇವಾಲಯ:
ಭೀಮಾಶಂಕರ ದೇವಾಲಯ ಮಹಾರಾಷ್ಟ್ರದ ಪೂನಾ ಸಮೀಪವಿದೆ. ಭೀಮಾಶಂಖರ ದೇವಾಲಯದ ತಟದಲ್ಲಿ ಭೀಮಾನದಿಯ ಉಗಮವಾಗುತ್ತದೆ. ಭೀಮಾಶಂಕರ ಒಂದು ಅತ್ಯಂತ ಪುರಾತನವಾದ ಪುಣ್ಯಕ್ಷೇತ್ರವಾಗಿದೆ. ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಇದು ಒಂದು. ಭೀಮಾಶಂಕರ ಯಾತ್ರಿಗಳ ಸ್ವರ್ಗ ಎಂದು ಕರೆಯಲಾಗಿದೆ. ಆಗಸ್ಟ್ ನಿಂದ ಫೆಬ್ರವರಿ ತಿಂಗಳವರೆಗೆ ಭೀಮಾಶಂಕರ ದೇವಾಲಯಕ್ಕೆ ಭೇಟಿ ನೀಡಲು ಉತ್ತಮ ಸಮಯ.
ಕಾಶಿ ವಿಶ್ವನಾಥ:
ಎಲ್ಲಾ ಜ್ಯೋತಿರ್ಲಿಂಗಗಳಿಗಿಂತ ಕಾಶಿ ವಿಶ್ವನಾಥ ಅತ್ಯಂತ ಪವಿತ್ರ ಎಂದು ಹೇಳಲಾಗುತ್ತಿದೆ. ಇದು ವಾರಣಾಸಿಯ ಗಂಗಾನದಿಯ ತಟದಲ್ಲಿದೆ. ಸ್ಥಳ ಭಕ್ತರಿಗೆ ಕಾಶಿ ಅಥವಾ ಬನಾರಸ್ ಎಂದೇ ಚಿರಪರಿಚಿತವಾಗಿದೆ. ವಿಶ್ವನಾಥ ಭಕ್ತರ ಪಾಲಿಗೆ ಜಗತ್ತಿನ ಒಡೆಯನಾಗಿದ್ದಾನೆ. ಬನಾರಸ್ ಇತಿಹಾಸದ ಪ್ರಕಾರ ಸುಮಾರು 3,500 ವರ್ಷಗಳ ಹಿಂದಿನ ಪುರಾತನ ನಗರವಾಗಿದೆ.
ತ್ರ್ಯಯಂಬಕೇಶ್ವರ ದೇವಾಲಯ:
ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ತ್ರಿಂಬಕ್ ಪಟ್ಟಣದಲ್ಲಿರುವ ಪ್ರಾಚೀನ ಹಿಂದೂ ದೇವಾಲಯ ತ್ರ್ಯಂಬಕೇಶ್ವರ. ಇದು ಗೋದಾವರಿ ನದಿಯ ಉಗಮಸ್ಥಾನದ ಸಮೀಪವಿದೆ. ಶಿವದೇವಾಲಯವಿರುವ ಈ ಕ್ಷೇತ್ರ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದು. ತ್ರ್ಯಂಬಕೇಶ್ವರದ ವೈಶಿಷ್ಟ್ಯವೆಂದರೆ ಇಲ್ಲಿನ ಜ್ಯೋತಿರ್ಲಿಂಗವು ಮೂರು ಮುಖಗಳನ್ನು ಹೊಂದಿದ್ದು, ಈ ಮುಖಗಳು ಬ್ರಹ್ಮ, ವಿಷ್ಣು ಮತ್ತು ಶಿವನ ಪ್ರತೀಕವಾಗಿದೆ.ತ್ರ್ಯಂಬಕೇಶ್ವರ ದೇವಾಲಯ ವಾಸ್ತುಶಿಲ್ಪಕ್ಕೆ ಹೆಸರಾಗಿದೆ. ನಾಸಿಕ್ ನಲ್ಲಿ 12 ವರ್ಷಗಳಿಗೊಮ್ಮೆ ಕುಂಭ ಮೇಳ ನಡೆಯುತ್ತದೆ.
ವೈದ್ಯನಾಥ ಜ್ಯೋತಿರ್ಲಿಂಗ:
ಶ್ರೀವೈದ್ಯನಾಥೇಶ್ವರ ಜ್ಯೋತಿರ್ಲಿಂಗವು ಜಾರ್ಖಂಡ್ (ಹಿಂದಿನ ಬಿಹಾರ ರಾಜ್ಯ)ನಲ್ಲಿದೆ. ಶ್ರೀವೈದ್ಯನಾಥೇಶ್ವರ ಸ್ವಾಮಿ ಜ್ಯೋತಿರ್ಲಿಂಗವನ್ನು ರಾವಣ ಕೈಲಾಸದಿಂದ ತಂದನೆಂದು ಪ್ರತೀತಿ ಇದೆ. ಇದು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ.
ನಾಗೇಶ್ವರ ಜ್ಯೋತಿರ್ಲಿಂಗ:
ನಾಗೇಶ್ವರ ಜ್ಯೋತಿರ್ಲಿಂಗ ಗುಜರಾತ್ ನ ಜಾಮ್ ನಗರ ಜಿಲ್ಲೆಯ ದ್ವಾರಕಾ ನಗರದ ಸಮೀಪವಿದೆ. ನಾಗೇಶ್ವರ ಜ್ಯೋತಿರ್ಲಿಂಗ ದರ್ಶನದಿಂದ ಎಲ್ಲಾ ಅಭೀಷ್ಟಗಳೂ ಪೂರ್ಣಗೊಳ್ಳುತ್ತದೆ ಎಂದು ಭಕ್ತರು ನಂಬಿದ್ದಾರೆ. ಆದರೆ ಇದೇ ಹೆಸರಿನ ಜ್ಯೋತಿರ್ಲಿಂಗವೆಂದು ಹೇಳುವ ಇನ್ನೆರಡು ಸ್ಥಳಗಳಿವೆ. ಉತ್ತರಾಖಂಡದ ಆಲಮೋರಾ ಸಮೀಪದ ಜಾಗೇಶ್ವರ ಎಂದು ಕರೆಯಲ್ಪಡುವ ಒಂದು ಹಾಗೂ ಮಹಾರಾಷ್ಟ್ರದ ಅವುನ್ಧದಲ್ಲಿರುವ ನಾಗನಾಥ ದೇವಾಲಯ.
ರಾಮೇಶ್ವರಂನ ರಾಮನಾಥಸ್ವಾಮಿ:
ದಕ್ಷಿಣಭಾರತದ ರಾಮೇಶ್ವರಂ ಪವಿತ್ರ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ರಾವಣನ ವಿರುದ್ಧ ಯುದ್ಧ ಮಾಡುವ ಸಂದರ್ಭದಲ್ಲಿ ಏನೇ ತಪ್ಪು, ಪಾಪ ಕೃತ್ಯ ಎಸಗಿದ್ದರೆ ಮುಕ್ತಿಗೊಳಿಸಬೇಕೆಂದು ಶ್ರೀ ರಾಮ ರಾಮೇಶ್ವರದಲ್ಲಿ ಶಿವನನ್ನು ಪ್ರಾರ್ಥಿಸಿಕೊಂಡಿದ್ದ ಎಂಬುದು ಪ್ರತೀತಿ. ತಮಿಳುನಾಡಿನ ರಾಮೇಶ್ವರಂನಲ್ಲಿರುವ ರಾಮನಾಥಸ್ವಾಮಿ ದೇವಾಲಯದಲ್ಲಿ ಶಿವನನ್ನು ಇಲ್ಲಿ ರಾಮನಾಥೇಶ್ವರನಾಗಿ ಪೂಜಿಸಲಾಗುತ್ತದೆ.
ಶ್ರೀಗೃಷ್ಣೇಶ್ವರ ಜ್ಯೋತಿರ್ಲಿಂಗ:
ಶ್ರೀಗೃಷ್ಣೇಶ್ವರ ಜ್ಯೋತಿರ್ಲಿಂಗ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದು. ಇದು ಮಹಾರಾಷ್ಟ್ರದ ಔರಂಗಬಾದ್ ನಿಂದ 30 ಕಿಲೋ ಮೀಟರ್ ದೂರದಲ್ಲಿದೆ. ಸಮೀಪದಲ್ಲೇ ಇರುವ ಎಲ್ಲೋರಾ ಕೈಲಾಸ ದೇವಾಲಯ ನೋಡಿಕೊಂಡು ಶ್ರೀ ಗೃಷ್ಣೇಶ್ವರ ಜ್ಯೋತಿರ್ಲಿಂಗವನ್ನು ನೋಡಲು ಹೋಗಬಹುದು. ರಾಜಸ್ಥಾನದಲ್ಲಿ ಘಶ್ಮೇಶ್ವರ ಜ್ಯೋತಿರ್ಲಿಂಗವೆಂದು ಹೆಸರಾದ ಇನ್ನೊಂದು ಜ್ಯೋತಿರ್ಲಿಂಗವೂ ಇದೆ.