Advertisement

ಶಿವ-ಶಿವೆಯರ ಪುಟಪಾಕಗೊಂಡ ಲೀಲೆ

12:58 AM Mar 11, 2021 | Team Udayavani |

ಮಹಾಶಿವರಾತ್ರಿ ಶಿವ ತಣ್ತೀವನ್ನು ಮನದಲ್ಲಿ ಜಾಗ್ರತಗೊಳಿಸಿ ಶಿವಸ್ವರೂಪದ ಅನುಸಂಧಾನ ಮಾಡುವ ದಿನ ವಿಶೇಷವಾಗಿದೆ. ಆ ದಿನ-
ಶ್ರೋತ್ರೇಣ ಶ್ರವಣಂ ತಸ್ಯ ವಚಸಾ ಕೀರ್ತನಂ ತಥಾ|
ಮನಸಾ ಮನನಂ ತಸ್ಯ ಮಹಾಸಾಧನಮುಚ್ಯತೇ||
-ಶಿವಪುರಾಣದ ಈ ಹಾಡಿನ ಅರ್ಥದಂತೆ ಮಹೇಶ್ವರನ ಶ್ರವಣ, ಕೀರ್ತನ, ಮನನವನ್ನು ಮಾಡಬೇಕು; ಈ ಶ್ರುತಿ ವಾಕ್ಯವು ನಮಗೆಲ್ಲರಿಗೂ ಪ್ರಮಾಣಭೂತವಾಗಿದೆ. ಇದೇ ಸಾಧನೆಯಿಂದ ಸಮಸ್ತ ಮನೋರಥಗಳ ಸಿದ್ಧಿಯಲ್ಲಿ ತೊಡಗಿರುವ ನೀವೆಲ್ಲರೂ ಪರಮಸಾಧ್ಯವನ್ನು ಪಡೆದುಕೊಳ್ಳುವಿರಿ. ಮಾಘ ಕೃಷ್ಣ ಚತುರ್ದಶಿಯನ್ನು ಮಹಾಶಿವರಾತ್ರಿ ಎಂದು ಆಚರಿಸುವುದು ಪ್ರಾಚೀನ ಸಂಪ್ರದಾಯ. ಪುರಾಣಗಳು ಈ ದಿನದ ವಿಷಯವಾಗಿ ಈ ರೀತಿ ಹೇಳುತ್ತವೆ:

Advertisement

ಮಾಘಫಾಲ್ಗುಣಯೋರ್ಮಧ್ಯೇ ಕೃಷ್ಣಾಂ ಯಾ ತು ಚತುರ್ದಶೀ|
ತಸ್ಯಾಂ ಜಾಗರಣಾದ್ರುದ್ರಃ ಪೂಜಿತೋ ಭುಕ್ತಿ ಮುಕ್ತಿದಃ||
-ಉಪವಾಸ ಮಾಡಿದ್ದಾದ ಮೇಲೆ ಬಿಲ್ವಗಳಿಂದ ಪೂಜಿಸಿ ರಾತ್ರಿಯೆಲ್ಲ ಜಾಗರಣೆ ಮಾಡಿದವನನ್ನು ಶಿವನು ನರಕದಿಂದ ಉದ್ಧರಿಸುವನು ಮತ್ತು ಅವನಿಗೆ ಭೋಗ, ಮೋಕ್ಷಗಳನ್ನು ಕರುಣಿಸುವನು. ಈ ದಿನದ ವಿಶೇಷತೆ ಅರಿ ಯದೆಯೇ ಮಾಡಿದ ಉಪವಾಸವೂ ಜಾಗ ರಣೆಯೂ ಅನಂತ ಫಲವನ್ನು ದೊರಕಿ ಸಿಕೊಡುತ್ತವೆ. ಇದಕ್ಕೆ ನಿದರ್ಶನವಾಗಿ ನಿಷಾದನ ಕಥೆಯೂ ಪ್ರಸಿದ್ಧ ವಾಗಿದೆ- ಇದು ಬೇಡರ ಕಣ್ಣಪ್ಪನ ಕಥೆ ಯಾಗಿ ಜನಜನಿತವಾಗಿದೆ. ನಾಗರಖಂಡ ಎಂಬ ಗ್ರಂಥ ದಲ್ಲಿ ಬರುವ ಹೇಳಿಕೆಯಂತೆ ವರ್ಷದ ಪಾಪ ಗಳನ್ನೆಲ್ಲ ನೀಗಲು ಸಮಸ್ತ ಲಿಂಗಗಳಲ್ಲಿಯೂ ನನ್ನ ಅಂಶ ಸಂಕ್ರಮಿಸುವಂತೆ ಮಾಡುತ್ತೇನೆ. ಇದರಲ್ಲಿ ಸಂಶಯವಿಲ್ಲ. ಮಂತ್ರಗಳಿಂದ ರಾತ್ರಿ ಪೂಜೆ ಮಾಡುವವರಿಗೆ ಪಾಪ ಭಯವಿರುವುದಿಲ್ಲ.

ಮಾಘಮಾಸಸ್ಯ ಕೃಷ್ಣಾಯಾಂ ಚತುರ್ದಶ್ಯಾಂ ಸುರೇಶ್ವರ
ಅಹಂ ಯಾಸ್ಯಾಮಿ ಭೂಪೃಷ್ಟೇ ರಾತ್ರೌ ದೈವ ದಿವಾಕತಾ||
ಲಿಂಗೇಷು ಚ ಸಮಸ್ತೇಷು ಚಲೇಷು ಚ ಸ್ಥಾವರೇಷು ಚ|
ಸಂಕ್ರಮಿಷ್ಯಾಮ್ಯಸಂದಿಗ್ಧಂವರ್ಷಮಾಸಸವಿಷುದ್ದಯೇ||
ತಸ್ಮಾದ್ರಾತ್ರೌ ಹಿ ಮೇ ಪೂಜಾಂ ಯಃ ಕರಿಷ್ಯತಿ ಮಾನವಃ|
ಮಂತ್ರೇರೇತ್ರೆŒ„ ಸುರಶ್ರೇಷ್ಠ ವಿಪಾಪ ಸ ಭವಿಷ್ಯತಿ||
ಶಂಕರಾಚಾರ್ಯರು ರಚಿಸಿದ “ಶಿವಾನಂದ ಲಹರಿ’ಯ ಮೊದಲ ಹಾಡು ಶಿವ ಪಾರ್ವತಿಯರನ್ನು ಪರಸ್ಪರರ ತಪಸ್ಸಿನ ಫಲಸ್ವರೂಪರು ಎಂದು ಕೊಂಡಾಡುತ್ತದೆ. ಇದು ಸೃಷ್ಟಿಯ ಕುರಿತಾಗಿ ಹೇಳಿದರೆ ಮತ್ತೂಂದು ವಿಧದಿಂದ ಪುರುಷ -ಪ್ರಕೃತಿ; ಪ್ರಪಂಚದ ಅಭಿವ್ಯಕ್ತಿ ಮತ್ತು ಅಭಿವ್ಯಕ್ತಿಯ ಹಿಂದಿರುವ ಮೂಲ ಧಾತು; ಹಾಗೆಯೇ ಮಾಯಾ-ಜ್ಞಾನ ಇದನ್ನು ಕುರಿತಾಗಿ ಚಿಂತಿಸುವಂತೆ ಮಾಡುತ್ತದೆ.

ಶಿವ-ಶಕ್ತಿಯರ ಆರಾಧನೆಯೆಂದರೆ ಇಡೀ ವಿಶ್ವವನ್ನೇ ಅಂದರೆ ವಿಶ್ವದಲ್ಲಿ ನಮ್ಮ ಮುಂದೆ ಕಾಣುವ ಅಭಿವ್ಯಕ್ತಿಯನ್ನು ಮತ್ತು ಅಭಿವ್ಯಕ್ತಿಗೆ ಕಾರಣವಾದ ಮೂಲ ಚೇತನವನ್ನು ಕೂಡ ಆರಾಧಿಸುವುದು. ಇಲ್ಲಿ ಭುಕ್ತಿಗೂ ಮುಕ್ತಿಗೂ ಸಮಾನ ಗೌರವ. ಶಿವನ ಆರಾಧನೆಯೆಂದರೆ ಶಕ್ತಿಯ ಸ್ಮರಣೆಯೂ ಹೌದು; ಶಕ್ತಿಯ ಆರಾಧನೆಯೆಂದರೆ ಶಿವನಿಗೆ ಅರ್ಪಿಸುವ ನಮನವೂ ಹೌದು. ಶಿವನ ಕಾರುಣ್ಯ ಬೇಕಾದರೆ ಮಾಯೆಯ ಅಂದರೆ ಶಿವೆಯ ಅಥವಾ ಪ್ರಕೃತಿಯ ಕರುಣೆಯೂ ಬೇಕು.

ಮಾಯಾ ಅಂದರೆ ಜಡ-ಚೇತನ ಪ್ರಕೃತಿ ತನ್ನೊಡ ಲನ್ನು ತೆರೆದು ದಾರಿ ತೋರಿದರೆ ಮಾತ್ರ ಶಿವನ ಜಗನ್ನಿಯಾ ಮಕನ ಕರುಣಾಕಟಾಕ್ಷ ನಮಗೆ ಪ್ರಾಪ್ತವಾಗಲು ಸಾಧ್ಯ. ಇದನ್ನೇ ಆಚಾರ್ಯ ಶಂಕರರು “ನಿಜತಪ ಫಲಾಭ್ಯಾಂ’ ಎಂದು ಶಿವ-ಶಿವೆ ಯರನ್ನು ಪರಸ್ಪರರ ತಪಸ್ಸಿನ ಫಲಸ್ವರೂಪರು ಎಂದದ್ದು. ಇಲ್ಲಿ ಸಂಸಾರದ ಗಂಡ-ಹೆಂಡತಿಯೂ ಹೀಗೆಯೇ ಇರಬೇಕೆಂಬ ಮಾದರಿ ಇದೆ. ಇದಕ್ಕೆ ನಿದರ್ಶನವಾಗಿ ಪುರಾಣದಲ್ಲಿ ಬರುವ ಶಿವ-ಪಾರ್ವತಿಯರ ವಿವಾಹದ ಕಥೆಯೂ ಇದೆ.

Advertisement

ದಕ್ಷನ ಯಾಗದಲ್ಲಿ ತನ್ನ ಪತಿ ರುದ್ರನಿಗೆ ಹವಿರ್ಭಾಗ ಸಿಗಲಿಲ್ಲವೆಂದು ಅವಮಾನಿತ ಳಾಗಿ ತನ್ನನ್ನು ದಹಿಸಿಕೊಂಡ ಸತಿಯ ವಿಯೋಗ ಶಿವನನ್ನು ಅಂತರ್ಮುಖ ನನ್ನಾಗಿ ಸುತ್ತದೆ. ದಾಕ್ಷಾಯಣಿಯು ವಿಯೋಗ ಶಿವನನ್ನು ಅಂತರ್ಮುಖನ ನ್ನಾಗಿಸಿತು ಮತ್ತು ಇದೇ ಕಠೊರ ತಪಸ್ಸಿಗೆ ಕಾರಣವಾಯಿತು. ದಾಕ್ಷಾಯಿಣಿಯೇ ಮುಂದೆ ಹಿಮವಂತನಿಗೆ ಮಗಳಾಗಿ ಬರುತ್ತಾಳೆ,

ಗೌರಿಯೆಂದು. ಗೌರಿಯು ಶಿವನನ್ನೇ ಪತಿಯನ್ನಾಗಿ ಪಡೆಯಲು ತಾನೂ ತಪಸ್ಸನ್ನು ನಡೆಸುತ್ತಾಳೆ. ಇದನ್ನೇ ಆಚಾರ್ಯ ಶಂಕರರು ಕಂಡ ರೀತಿ “ನಿಜತಪಃ ಫಲಾಭ್ಯಾಂ’ -ಪರಸ್ಪರರ ತಪಸ್ಸಿನ ಫಲಸ್ವರೂಪರು ಎಂದು. ಶಿವ ಸತಿಯ ಅಗಲಿಕೆಯ ಕಾರಣ ತಪಕ್ಕೆ ತೊಡಗಿದರೆ; ಗೌರಿ ಶಿವನಿಗೋಸ್ಕರ ತಪಸ್ಸಿಗೆ ತೊಡಗುತ್ತಾಳೆ. ಇಲ್ಲಿ ಗಮನಿಸಬೇಕಾದದ್ದು ಗೌರಿ ಮತ್ತೆ ಜನಿಸಿ ಶಿವನ ಕುರಿತಾಗಿ ತಪಸ್ಸಿಗೆ ತೊಡಗುವುದು-ಇದು ಶಿವನ ತಪದ ಫಲ. ಗೌರಿಯ ತಪದ ಫಲಸ್ವರೂಪವಾಗಿ ಶಿವ ಆಕೆಗೆ ಒಲಿಯುವುದು-ಕಾಮದಹನದ ಮೂಲಕ. ತಾರಕಾಸುರನ ವಧೆಯಾಗಲು ಶಿವನ ಮಗನ ಆವಿರ್ಭಾವವಾಗಬೇಕು. ಇದಕ್ಕೆ ಶಿವನ ತಪಸ್ಸಿನ ಭಂಗವಾಗ ಬೇಕು-ಆದರೆ ಶಿವ ಅಂತರ್ಮುಖೀಯಾಗಿದ್ದಾನೆ. ಹಾಗಾಗಿ ಕಾಮದೇವನ ಸಹಾಯದಿಂದ ಶಿವನ ಅಂತರ್ಮುಖತೆಯು ಭಂಗವಾಗುತ್ತದೆ.

ಇಲ್ಲಿ ಮುಖ್ಯವಾಗಿ ನಮಗೆ ತೋರುವುದು “ಕಾಮದಹನ’ ಎಂಬ ರೂಪಕದ ಮೂಲಕ ಅಭಿವ್ಯಕ್ತವಾಗುವ ತಥ್ಯ. ಅಂದರೆ ತನ್ನ ಅಸ್ತಿತ್ವದ ಮತ್ತೂಂದು (ಶಿವನಿಗೆ ಶಿವೆ, ಶಿವೆಗೆ ಶಿವ) ನೆಲೆ ಅಥವಾ ಮುಖದ ಬೆನ್ನು ಹಿಡಿದ ಶಿವ-ಶಿವೆಯರಿಗೆ ತಮ್ಮ ತಪದ ಅಥವಾ ಇಚ್ಛೆಯ ಫಲ ಸಿಕ್ಕಿದಾಗ ಅವರ ಕಾಮ ಅಥವಾ ಬಯಕೆಯ ಬೆಂಕಿಯ ಉಪಶಮನವಾಯಿತು ಎಂಬ ಅಲೌಕಿಕ ಸ್ತರದ ಕಾಣ್ಕೆಗೆ ಎಡೆ ಇದೆಯಲ್ಲ! ಇದು ತಥ್ಯದರ್ಶನ.

ಶಿವನನ್ನು ಅಷ್ಟಮೂರ್ತಿ ಎಂದು ಆರಾಧಿಸುವುದು ಪ್ರಾಚೀನ ಭಾರತೀಯ ಪದ್ಧತಿ. ಎಂಟು ಧಾತುಗಳಲ್ಲಿ ಶಿವನನ್ನು ಉಪಾಸನೆ ಮಾಡುತ್ತಿದ್ದರು. ಪಂಚ ಭೂತಗಳು, ಸೂರ್ಯ, ಚಂದ್ರ ಮತ್ತು ಜೀವಾತ್ಮ. ಶಿವನ ಸಂಕೇತವಾಗಿ ಇವನ್ನು ಬಳಸುತ್ತಿದ್ದರು. ಅಂದರೆ ಶಿವನನ್ನು ಪ್ರಕೃತಿಯಲ್ಲಿ ಕಾಣುವುದು. ಲಲಿತಾಸಹಸ್ರನಾಮದಲ್ಲಿ ದೇವಿಗೆ ಅಷ್ಟಮೂರ್ತಿ ಎಂಬ ಹೆಸರಿರುವುದನ್ನು ನೋಡುತ್ತೇವೆ-“ಅಷ್ಟಮೂರ್ತಿರಜಾಜೈಯತ್ರೀ ಲೋಕಯಾತ್ರಾವಿಭಾವಿನೀ’. ಹಾಗಾಗಿ ಶಿವನೂ ಶಿವೆಯೂ ಇಬ್ಬರೂ ಅಷ್ಟಮೂರ್ತಿಗಳೇ. ಇಲ್ಲಿ ಅರ್ಧನಾರೀಶ್ವರ ತಣ್ತೀ ಮತ್ತು “ನಿಜತಪಃ ಫಲಾಭ್ಯಾಂ’ ಎಂಬ ವಿವೃತಿ ಪುಟಪಾಕಗೊಳ್ಳುವ ಲೀಲಾವಿನೋದವನ್ನು ಕಾಣಬಹುದು.

ಶಿವ ಕಾಲಸ್ವರೂಪಿ. ಲಯ ಶಿವನ ಸ್ವರೂಪವೆನ್ನುವುದು ಕಾಲಸಂಬಂಧಿಯಾಗಿ ಗಣಿಸಬೇಕಾದ ಸ್ಥಿತಿ. ಲಯವೆಂದರೆ ನಾಶವೆನ್ನುವ ಸ್ಥೂಲಾರ್ಥ ಇದೆಯಷ್ಟೇ? ಅಂತೆಯೇ ಸೂಕ್ಷ್ಮತರದಲ್ಲಿ ನೋಡಿದರೆ ಲಯವೆಂದರೆ ಲೀನವಾಗುವಿಕೆಯೆನ್ನುವುದೂ ಕೂಡ. “ತಾಲಃ ಕಾಲಕ್ರಿಯಾಮಾನಂ ಲಯ ಸ್ವಾಮ್ಯ’. ಇದು ತಾಳದ ಬಗೆಗೆ ಅಮರಕೋಶದ ಮಾತು ಅಂದರೆ ನಾಟ್ಯಾದಿಗಳ ಕಾಲದ ಪರಿಮಿತಿ ಮತ್ತು ತಾಳದ ಸಮತ್ವ ಎನ್ನುವ ಮಾತು ತಾಳದ ಕುರಿತಾಗಿ ಇದೆ. ಇಡೀ ವೈಶ್ವಿ‌ಕ ಕ್ರಿಯೆಯು ಒಂದು ಸಮತೆಯಲ್ಲಿರುವಂತೆ ನೋಡುವ ಚೈತನ್ಯವೇ ಶಿವ.

ಇಡೀ ವಿಶ್ವದ ಕ್ರಿಯೆಯಲ್ಲಿ ಸಮತ್ವ ಇದ್ದಾಗ ಅದರ ಆಭಾಸ ಅಂದರೆ, ಪ್ರತಿಫಲನದಲ್ಲೂ ಸಮತ್ವ ಇರುತ್ತದೆ. ಭೂಮಿ ತನ್ನ ಅಕ್ಷದಲ್ಲಿ ನಿರ್ದಿಷ್ಟವಾದ ಕಾಲಗತಿಯಲ್ಲಿ ಸುತ್ತುವುದು; ಸೂರ್ಯನ ಕಕ್ಷೆಗಿದರ ಪ್ರದಕ್ಷಿಣೆ -ಇದರಿಂದಾಗಿ ಪ್ರಕೃತಿಯಲ್ಲಿ ಒಂದು ಬಗೆಯ ಲಯಾನ್ವಿತ, ಅಂದರೆ ಕಾಲಾಧೀನವಾಗಿ ನಡೆಯುವ ತರಂಗಿತತೆಯಿಂದ ನಡೆಯುವ ಬದಲಾವಣೆ -ಇವೆಲ್ಲವೂ ಲಯಾನ್ವಿತವೇ ಹೌದು. ಅಂದರೆ ದೇಶವನ್ನು (ಸ್ಪೇಸ್‌) (ಪ್ರಕೃತಿಯನ್ನು, ಅಭಿವ್ಯಕ್ತಿಯನ್ನು, ಜಡ-ಚೇತನಾತ್ಮಕ ಜೀವಿ-ಅಜೀವಿಗಳನ್ನು) ಕಾಲವು (ಟೈಮ್‌) ಕಟ್ಟಿಟ್ಟು ಸಮತೆಯನ್ನು (ಲಯವನ್ನು) ಕಾಯ್ದುಕೊಳ್ಳುತ್ತದೆ. ಇದೇ ಶಿವ-ಶಕ್ತಿಯ ಲೀಲೆ.

– ಕೃಷ್ಣಪ್ರಕಾಶ ಉಳಿತ್ತಾಯ, ಪೆರ್ಮಂಕಿ

Advertisement

Udayavani is now on Telegram. Click here to join our channel and stay updated with the latest news.

Next