Advertisement

“ಮಹಾ’ಮಳೆಗೆ ಕೃಷ್ಣಾ ನದಿಯಲ್ಲಿ ನೆರೆ

11:19 PM Sep 07, 2019 | Lakshmi GovindaRaju |

ಬೆಂಗಳೂರು/ಹುಬ್ಬಳ್ಳಿ: ರಾಜ್ಯದಲ್ಲಿ ಮುಂಗಾರು ಮಳೆ ಚುರುಕಾಗಿದ್ದು, ಕೊಡಗು, ಮಲೆನಾಡು, ಕರಾವಳಿಯಲ್ಲಿ ಉತ್ತಮ ಮಳೆಯಾಗುತ್ತಿದೆ. ಶನಿವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಕೊಟ್ಟಿಗೆಹಾರದಲ್ಲಿ ರಾಜ್ಯದಲ್ಲಿಯೇ ಅಧಿಕವೆನಿಸಿದ 13 ಸೆಂ. ಮೀ.ಮಳೆ ಸುರಿಯಿತು. ಇದೇ ವೇಳೆ, ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿಯ ಒಳಹರಿವಿನಲ್ಲಿ ಹೆಚ್ಚಳವಾಗಿದ್ದು, ತೀರದ ಜನರಲ್ಲಿ ಆತಂಕ ಮನೆ ಮಾಡಿದೆ. ಮಳೆ ಸಂಬಂಧಿ ಅವಘಢದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

Advertisement

ಬ್ರಹ್ಮಗಿರಿ ಬೆಟ್ಟದಲ್ಲಿ ಆತಂಕಕಾರಿ ಬಿರುಕು: ಕಾವೇರಿಯ ಉಗಮ ಸ್ಥಾನ ತಲಕಾವೇರಿ ವ್ಯಾಪ್ತಿಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಪಶ್ಚಿಮಘಟ್ಟ ವಲಯದ ಬ್ರಹ್ಮಗಿರಿ ಬೆಟ್ಟದಲ್ಲಿ ಮತ್ತೆ ಆತಂಕಕಾರಿ ಬಿರುಕು ಕಾಣಿಸಿಕೊಂಡಿದೆ. ಆಗಸ್ಟ್‌ ಎರಡನೇ ವಾರ ಸುರಿದ ಧಾರಾಕಾರ ಮಳೆಯ ಸಂದರ್ಭ ಬ್ರಹ್ಮಗಿರಿ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಆ.18ರಂದು ಸ್ಥಳಕ್ಕೆ ಭೂವಿಜ್ಞಾನಿಗಳು ಭೇಟಿ ನೀಡಿ ಪರಿಶೀಲಿಸಿದ್ದರು. ಆದರೆ, ವಿಜ್ಞಾನಿಗಳ ವರದಿ ಜಿಲ್ಲಾಡಳಿತದ ಕೈಸೇರುವ ಮೊದಲೇ ಬಿರುಕು ಮತ್ತಷ್ಟು ಆಳವಾಗಿದೆಯಲ್ಲದೆ ವಿಸ್ತರಿಸಿದೆ. ಇದರಿಂದ ಅಕ್ಕಪಕ್ಕದ ಗ್ರಾಮಗಳಲ್ಲಿ ಆತಂಕ ಉಂಟಾಗಿದ್ದು, ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ.

ಮಹಾರಾಷ್ಟ್ರ, ಬೆಳಗಾವಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಕೃಷ್ಣಾ, ವೇದಗಂಗಾ, ಘಟಪ್ರಭಾ ಹಾಗೂ ಮಲಪ್ರಭಾ ನದಿ ನೀರಿನ ಮಟ್ಟದಲ್ಲಿ ಗಣನೀಯ ಹೆಚ್ಚಳವಾಗಿದೆ. ನದಿ ತೀರದ ಗ್ರಾಮಗಳಲ್ಲಿ ಆತಂಕ ಮುಂದುವರಿದಿದೆ. ಹುಬ್ಬಳ್ಳಿ- ವಿಜಯಪುರ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ. ಕೃಷ್ಣಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಆರು ಸೇತುವೆಗಳು ಮುಳುಗಡೆಯಾಗಿವೆ. ಖಾನಾಪುರ ತಾಲೂಕು ಹಾಗೂ ಗೋವಾದಲ್ಲಿ ಭಾರೀ ಮಳೆಯಾಗುತ್ತಿದ್ದು, ಗೋವಾ ಹಾಗೂ ಚೋರ್ಲಾ ಮಧ್ಯೆ ಭೂಕುಸಿತ ಸಂಭವಿಸಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ನೀರಲ್ಲಿ ಕೊಚ್ಚಿಹೋದ ಮಹಿಳೆ: ಘಟಪ್ರಭಾ ನದಿಗೆ 37 ಸಾವಿರ ಕ್ಯೂಸೆಕ್‌ ನೀರು ಹರಿದು ಬರಲಾರಂಭಿಸಿದೆ. ಹಿಡಕಲ್‌ ಜಲಾಶಯ ಸಂಪೂರ್ಣ ಭರ್ತಿಯಾಗಿರು ವುದರಿಂದ ಜಲಾಶಯದಿಂದ ಇಷ್ಟೇ ಪ್ರಮಾಣದ ನೀರನ್ನು ಹೊರಗಡೆ ಬಿಡಲಾಗುತ್ತಿದೆ. ಈ ನಡುವೆ, ಅಥಣಿ ತಾಲೂಕಿನ ಜನವಾಡ ಗ್ರಾಮದಲ್ಲಿ ಶೋಭಾ ಸುತಾರೆ (45) ಎಂಬುವರು ಪಾತ್ರೆ ತೊಳೆಯಲು ಹೋದಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ

30 ಅಡಿ ಆಳಕ್ಕೆ ಗುಡ್ಡ ಕುಸಿತ: ಚಿಕ್ಕಮಗಳೂರು ಮೂಡಿಗೆರೆ ತಾಲೂಕಿನ ಪಟ್ಟಣ, ಕಳಸ, ಚಾರ್ಮಾಡಿ ಘಾಟಿ, ಕೊಟ್ಟಿಗೆಹಾರ, ಜಾವಳಿ ಭಾಗಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಭಾರೀ ಮಳೆಯಿಂದಾಗಿ ಹಂಡುಗುಳಿ ಗ್ರಾಮದ ಸತೀಶ್‌ ಎಂಬುವರ ಕಾಫಿ ತೋಟದಲ್ಲಿ 30 ಅಡಿಗೂ ಹೆಚ್ಚು ಆಳಕ್ಕೆ ಗುಡ್ಡ ಕುಸಿದಿದ್ದು, 1 ಎಕರೆಗೂ ಹೆಚ್ಚು ಪ್ರದೇಶದ ಕಾಫಿ ತೋಟ ಸಂಪೂರ್ಣ ನಾಶವಾಗಿದೆ. ಚೆನ್ನಡ್ಲು ಗ್ರಾಮದಲ್ಲೂ ಗುಡ್ಡ ಕುಸಿಯುವ ಭೀತಿ ಎದುರಾಗಿರುವುದರಿಂದ ಜನ ಗ್ರಾಮ ತೊರೆಯುತ್ತಿದ್ದಾರೆ.

Advertisement

ಮನೆ ಕುಸಿದು ಸಾವು: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅರಳಿಹಳ್ಳಿಯಲ್ಲಿ ಸತತ ಮಳೆಗೆ ರಾತ್ರಿ ವೇಳೆ ಮನೆಯೊಂದು ಕುಸಿದು, ಮಲಗಿದ್ದ ಉಮೇರಾ ಅಂಜಾಮ್‌ ಮೃತಪಟ್ಟಿದ್ದಾರೆ. ಯಾದಗಿರಿ ಜಿಲ್ಲೆಯ ನಾರಾಯಣಪುರ ಜಲಾಶಯಕ್ಕೆ ಒಳಹರಿವು ಹೆಚ್ಚಿರುವುದರಿಂದ ನದಿ ಪಾತ್ರದ ಜನರಿಗೆ ಮುನ್ನೆಚ್ಚರಿಕೆ ಸಂದೇಶ ರವಾನಿಸಲಾಗಿದೆ. ಅಂದಾಜು 519.10 ಮೀಟರ್‌ ನೀರು ಸಾಮರ್ಥ್ಯ ಹೊಂದಿರುವ ಹಿಪ್ಪರಗಿ ಬ್ಯಾರೇಜ್‌ನಲ್ಲಿ 523 ಮೀಟರ್‌ ನೀರು ಬಂದಿದೆ. 1.33 ಲಕ್ಷ ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, ಅದೇ ಪ್ರಮಾಣದಲ್ಲಿ ನೀರು ಹೊರಕ್ಕೆ ಬಿಡಲಾಗುತ್ತಿದೆ.

ಅಪಾಯ ಮಟ್ಟ ಮೀರಿದ ಮಲಪ್ರಭೆ: ಕೃಷ್ಣಾ ನದಿಗೆ 1.33 ಲಕ್ಷ ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಹೀಗಾಗಿ, ಈಗಾಗಲೇ ನೆರೆ ಹಾವಳಿಯಿಂದ ತತ್ತರಿಸಿದ್ದ ತೀರದ ಗ್ರಾಮಗಳ ಜನರು ಮತ್ತೂಮ್ಮೆ ಆತಂಕದ ಸ್ಥಿತಿಯಲ್ಲಿದ್ದಾರೆ. ನವಿಲು ತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ 16 ಸಾವಿರ ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, ಕೊಣ್ಣೂರಿನ ರಾಮಲಿಂಗೇಶ್ವರ ದೇವಸ್ಥಾನವನ್ನು ಸುತ್ತುವರೆದಿದೆ. ಮಲಪ್ರಭೆ ಅಪಾಯ ಮಟ್ಟ ಮೀರಿ ಹರಿಯುತ್ತಿದೆ.

ಬಸವಸಾಗರ ಜಲಾಶಯಕ್ಕೆ ಕಳೆದ ಐದು ದಿನಗಳಿಂದ ನಿರಂತರ ಒಳಹರಿವು ಹರಿದು ಬರುತ್ತಿರುವುದರಿಂದ ಶನಿವಾರ ಮಧ್ಯಾಹ್ನ 2ರ ವೇಳೆಗೆ ಜಲಾಶಯದ 14 ಕ್ರಸ್ಟ್‌ ಗೇಟ್‌ ತೆರೆದು 1 ಲಕ್ಷ 43 ಸಾವಿರ ಕ್ಯೂಸೆಕ್‌ ನೀರನ್ನು ಕೃಷ್ಣಾ ನದಿ ಪಾತ್ರಕ್ಕೆ ಹರಿಬಿಡಲಾಗಿದೆ. ಪ್ರಸ್ತುತ ಆಲಮಟ್ಟಿ ಜಲಾಶಯದಿಂದ ಬಸವಸಾಗರ ಜಲಾಶಯಕ್ಕೆ ಒಳಹರಿವು 1ಲಕ್ಷ 60 ಸಾವಿರ ಕ್ಯೂಸೆಕ್‌ ಇದೆ. 31 ಟಿಎಂಸಿ ಅಡಿ ನೀರು ಸಂಗ್ರಹವಿದೆ. ನದಿ ಪಾತ್ರದ ಗ್ರಾಮಗಳ ಜನ, ಜಾನುವಾರುಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅ ಧಿಕಾರಿಗಳು ಎಚ್ಚರಿಕೆ ಸಂದೇಶ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next