ಮುಂಬಯಿ: ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಜೀವ ಬೆದರಿಕೆ ಹಾಕಿರುವುದನ್ನು ನಮ್ಮ ಸರಕಾರ ಗಂಭೀರವಾಗಿ ಪರಿಗಣಿಸಿದೆ ಮತ್ತು ತನಿಖೆಗೆ ಸೂಚನೆ ನೀಡಿದ್ದೇವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಶುಕ್ರವಾರ ಹೇಳಿದ್ದಾರೆ.
ಪವಾರ್ ಅವರನ್ನು “ಹಿರಿಯ ಗೌರವಾನ್ವಿತ ನಾಯಕ” ಎಂದು ಕರೆದಿರುವ ಶಿಂಧೆ, ಅವರ ಭದ್ರತೆಗಾಗಿ ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುವುದು. ಅಗತ್ಯವಿದ್ದರೆ ಪವಾರ್ ಅವರ ಭದ್ರತೆಯನ್ನು ಹೆಚ್ಚಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಿಎಂ ಹೇಳಿದರು.
”ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಲು ಉದ್ದೇಶಪೂರ್ವಕ ಪ್ರಯತ್ನಗಳು ನಡೆಯುತ್ತಿವೆ.ಶಿವಸೇನೆ ಸಂಬಂಧಿತ ವಿಷಯಗಳಲ್ಲಿ ಸುಪ್ರೀಂಕೋರ್ಟ್ ತೀರ್ಪಿನಿಂದ ಕೆಲವರು ಅಸಮಾಧಾನಗೊಂಡಿದ್ದಾರೆ, ಇದರಿಂದಾಗಿ ಔರಂಗಜೇಬ್ ಮತ್ತು ಟಿಪ್ಪು ಸುಲ್ತಾನ್ ಅನ್ನು ವೈಭವೀಕರಿಸುವ ಮೂಲಕ ವಾತಾವರಣವನ್ನು ಹಾಳು ಮಾಡಲು ಪ್ರಯತ್ನಿಸಲಾಗುತ್ತಿದೆ. ಈ ಪ್ರಯತ್ನಗಳನ್ನು ವಿಫಲಗೊಳಿಸಲಾಗುವುದು. ಸ್ವಾರ್ಥಿ ರಾಜಕೀಯ ಹಿತಾಸಕ್ತಿಗಾಗಿ ಗೊಂದಲ ಸೃಷ್ಟಿಸುವ ಷಡ್ಯಂತ್ರವನ್ನು ವಿಫಲಗೊಳಿಸುತ್ತೇವೆ” ಎಂದು ಮುಖ್ಯಮಂತ್ರಿ ಶಿಂಧೆ ಹೇಳಿದರು.
82 ವರ್ಷದ ಎನ್‌ಸಿಪಿ ನಾಯಕ, ಪಕ್ಷದ ಅಧ್ಯಕ್ಷ ಪವಾರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಂದೇಶವನ್ನು ಸ್ವೀಕರಿಸಿದ್ದಾರೆ, ಅದರಲ್ಲಿ “ಅವರು ನರೇಂದ್ರ ದಾಭೋಲ್ಕರ್ ಅವರಂತೆಯೇ ಅದೇ ಭವಿಷ್ಯವನ್ನು ಶೀಘ್ರದಲ್ಲೇ ಎದುರಿಸುತ್ತಾರೆ” ಎಂದು ಬರೆಯಲಾಗಿತ್ತು.ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಮೂಢ ನಂಬಿಕೆಗಳ ವಿರುದ್ಧ ಹೋರಾಡಿದ ನರೇಂದ್ರ ದಾಭೋಲ್ಕರ್ ಅವರನ್ನು ಆಗಸ್ಟ್ 20, 2013 ರಂದು ಪುಣೆಯಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು.