ಮೊಟ್ಟೆಯನ್ನು ನೀರಿನೊಳಗೆ ಹಾಕಿದಾಗ ಅದು ಮುಳುಗಿ ಪಾತ್ರೆಯ ತಳ ಸೇರಿಕೊಂಡುಬಿಡುತ್ತದೆ. ಅದು ಸಹಜ. ಆದರೆ ಮೊಟ್ಟೆ ನೀರಿನಲ್ಲಿ ಮೇಲೆಯೂ ಕೆಳಗೂ ಚಲಿಸತೊಡಗಿದರೆ? ಮ್ಯಾಜಿಕ್‌ನಂತೆ ತೋರುವ ಈ ವಿದ್ಯಮಾನ ಅಸಲಿಗೆ ಒಂದು ವೈಜ್ಞಾನಿಕ ಪ್ರಯೋಗ.
ಒಂದು ಬೀಕರಿನಲ್ಲಿ ನೀರನ್ನು ಹಾಕಿ ಅದರಲ್ಲಿ ಒಂದು ಕೋಳಿ ಮೊಟ್ಟೆಯನ್ನು ನಿಧಾನವಾಗಿ ಇಟ್ಟರೆ ಅದು ಮೇಲಕ್ಕೂ, ಕೆಳಕ್ಕೂ ಮುಳುಗೇಳತೊಡಗುತ್ತದೆ. ಇದೊಂದು ರಾಸಾಯನಿಕ ಚಮತ್ಕಾರ.
ಅದರ ರಹಸ್ಯ ಇಷ್ಟೆ. ಬೀಕರಿನಲ್ಲಿ ಇರುವುದು ನೀರಿನ ಹಾಗೆ ಕಂಡರೂ ನಿಜವಾಗಿ ಅದು ನೀರಲ್ಲ. ಅದು ದುರ್ಬಲ ನೈಟ್ರಿಕ್ ಆಮ್ಲ. ಇದರಲ್ಲಿ ಮೊಟ್ಟೆಯನ್ನು ಹಾಕಿದರೆ ಮೊಟ್ಟೆಯ ಕವಚ ಕ್ಯಾಲ್ಸಿಯಂನಿಂದ ಮಾಡಲ್ಪಟ್ಟಿರುತ್ತದೆ. ಆದುದರಿಂದ ಕ್ಯಾಲ್ಸಿಯಂ ನೈಟ್ರಿಕ್ ಆಮ್ಲದೊಡನೆ ಪ್ರತಿಕ್ರಿಯೆಗೊಳಗಾಗಿ ಮೇಲಕ್ಕೂ ಕೆಳಕ್ಕೂ ಈಜುತ್ತಿರುವಂತೆ ಚಲಿಸುತ್ತದೆ.
ಇದನ್ನು ನೀವು ನಿಮ್ಮ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಬಹುದು. ಇದನ್ನು ಮ್ಯಾಜಿಕ್‌ನಂತೆ ಪ್ರದರ್ಶಿಸಬಹುದಾದರೂ ಇದು ವಿಜ್ಞಾನ ಪ್ರಯೋಗ ಎಂಬುದನ್ನು ಮರೆಯದಿರಿ. ಹೀಗಾಗಿ ಮಕ್ಕಳು, ಹಿರಿಯರ ಇಲ್ಲವೇ ಗುರುಗಳ ಮಾರ್ಗದರ್ಶನವಿಲ್ಲದೆ ಒಬ್ಬರೇ ಈ ಪ್ರಯೋಗದಲ್ಲಿ ತೊಡಗಬಾರದು.
ಉದಯ್ ಜಾದೂಗಾರ್