ಜಾದುವಿನಲ್ಲಿ ತಕ್ಷಣ ಏನಾದರೂ ಆಗಬೇಕು ಅಂತಲೇ ಎಲ್ಲರೂ ನಿರೀಕ್ಷೆ ಮಾಡುತ್ತಾರೆ. ಕಣ್ಣ ಮುಂದೆಯೇ ಬದಲಾವಣೆ ಕಾಣಬೇಕು ಎಂಬುದೇ ಎಲ್ಲರ ಮನದಾಸೆ ಆಗಿರುತ್ತದೆ. ಹಾಗಾಗಿ, ಹಾಂ ಹೂಂ ಅನ್ನುತ್ತಲೇ, ನಿಂತ ನಿಲುವಿನಲ್ಲೇ ಮೊಟ್ಟೆಯ ಬಣ್ಣ ಬದಲಾವಣೆ ಮಾಡುವುದರಿಂದ ಹೆಚ್ಚಿನ ಚಪ್ಪಾಳೆ ಗಿಟ್ಟಿಸಬಹುದು. ಮೊಟ್ಟೆ ಮೊದಲಾ, ಕೋಳಿ ಮೊದಲಾ ಅನ್ನೋ ವಿಚಾರ ಇದಲ್ಲ. ಜಾದೂಗಾರ ಪ್ರೇಕ್ಷಕರನ್ನು ಕುರಿತು, “ನೀವೆಲ್ಲಾ ಚಿನ್ನದ ಮೊಟ್ಟೆ ಇಡುವ ಕೋಳಿಯ ಕಥೆ ಕೇಳಿರಬಹುದು. ಆದರೆ, ಬೆಳ್ಳಿಯ ಮೊಟ್ಟೆಯನ್ನು ನೋಡಿರಲಿಕ್ಕಿಲ್ಲ ಅಲ್ಲವೇ?’ ಅಂತ ಕೇಳುತ್ತಾನೆ. ಅವರು ಹೌದು, ಹೌದು ಅಂತ ತಲೆ ಆಡಿಸುತ್ತಾರೆ. ಮತ್ತೆ ಮಾತು ಮುಂದುವರಿಸುವ ಜಾದೂಗಾರ “ನನ್ನಲ್ಲಿ ಒಂದು ಕೋಳಿ ಇದೆ. ಅದು ನೀರಿನಲ್ಲಿ ಬೆಳ್ಳಿಯ ಮೊಟ್ಟೆ ಇಡುತ್ತದೆ.’ ಎನ್ನುತ್ತಾನೆ. ನಂತರ ಗ್ಲಾಸಿನೊಳಗೆ ಇರುವ ಒಂದು ಮೊಟ್ಟೆಯನ್ನು ತೋರಿಸುತ್ತಾನೆ. ನಿಜವಾಗಿಯೂ ಅದು ಬೆಳ್ಳಿಯಂತೆಯೇ ಕಾಣುವುದರಿಂದ ಪ್ರೇಕ್ಷಕರು ಆಶ್ಚರ್ಯಚಕಿತರಾಗುತ್ತಾರೆ.
ತಂತ್ರ
ಇದರ ರಹಸ್ಯ ಇಷ್ಟೆ- ಕೋಳಿ ಮೊಟ್ಟೆಯನ್ನು ಕ್ಯಾಂಡಲ್ ಬೆಂಕಿಯ ತುದಿಯಲ್ಲಿ ಹಿಡಿದು ಮೊಟ್ಟೆಯ ಸುತ್ತಲೂ ಮಸಿ ತಾಗುವ ಹಾಗೆ ಮಾಡಿ. ನಂತರ, ಮೊಟ್ಟೆಯನ್ನು ಗಾಜಿನ ಗ್ಲಾಸಿನೊಳಗೆ ಹಾಕಿದರೆ ಹೊರಗಿನಿಂದ ಬೆಳ್ಳಿಯ ಮೊಟ್ಟೆಯಂತೆ ಕಾಣುತ್ತದೆ. ಪ್ರೇಕ್ಷಕರಿಗೆ ಮ್ಯಾಜಿಕ್ ಪ್ರದರ್ಶನಕ್ಕೂ ಮೊದಲೇ ನೀವು ಮಾಡಿರುವ ಈ ಸೀಕ್ರೆಟ್ ತಂತ್ರದ ಬಗ್ಗೆ ಗೊತ್ತಿರುವುದಿಲ್ಲ. ಹೀಗಾಗಿ, ಬೆಳ್ಳಿಮೊಟ್ಟೆ ಕಂಡಕ್ಷಣ ಚಪ್ಪಾಳೆಗಳ ಸುರಿಮಳೆಯಾಗುವುದಂತೂ ಸತ್ಯ.
– ಉದಯ್ ಜಾದೂಗಾರ್