ಜಾದೂಗಾರನಿಗೆ ಇರುವ ಮುಖ್ಯವಾದ ಶಕ್ತಿಗಳು ಯಾವುದು ಗೊತ್ತಾ? ಒಂದು ಸೃಷ್ಟಿ ಮಾಡೋದು, ಇನ್ನೊಂದು ಮಾಯ ಮಾಡೋದು. ಖಾಲಿ ಡಬ್ಬಿಗೆ ಕೈ ಹಾಕಿ ಏನನ್ನೋ ತೆಗೆದು ಅಥವಾ ಕೈಯಲ್ಲಿ ಹಿಡಿದಿದ್ದನ್ನು ಫಟ್ ಅಂತ ಮಾಯ ಮಾಡಿ ಆತ ಜಾದೂಗಾರ ಅನ್ನಿಸಿಕೊಳ್ತಾನೆ. ನೀವೂ ಜಾದೂಗಾರ ಅನ್ನಿಸಿಕೊಳ್ಳಲು, ಮಾಯ ಮಾಡೋ ಈ ಶಕ್ತಿಯನ್ನು ಕಲಿತುಕೊಳ್ಳಿ.
ಬೇಕಾಗುವ ವಸ್ತುಗಳು: ಟೂತ್‌ಪಿಕ್, ಉಂಗುರ (ಬೆರಳಿನಲ್ಲಿ ಧರಿಸಿರಬೇಕು)
ಪ್ರದರ್ಶನ: ಜಾದೂಗಾರ ಕೈಯಲ್ಲಿ ಟೂತ್‌ಪಿಕ್ ಒಂದನ್ನು ಹಿಡಿದುಕೊಂಡಿರುತ್ತಾನೆ. ನಂತರ ನಿಧಾನಕ್ಕೆ ಕೈಗಳನ್ನು ಚಲಿಸುತ್ತಾ ಗಾಳಿಯಲ್ಲಿ ಒಂದೆರಡು ಬಾರಿ ಕೈ ಆಡಿಸುತ್ತಾನೆ. ಆಮೇಲೆ ನಿಧಾನವಾಗಿ ಬೆರಳುಗಳನ್ನು ಬಿಡಿಸಿ, ಕೈಯನ್ನು ಪ್ರೇಕ್ಷಕರಿಗೆ ತೋರಿಸುತ್ತಾನೆ. ಟೂತ್‌ಪಿಕ್ ಮಾಯ!
ತಯಾರಿ: ಈ ಜಾದೂವಿನ ರಹಸ್ಯ ಅಡಗಿರುವುದು ನೀವು ಧರಿಸಿರುವ ಉಂಗುರದಲ್ಲಿ. ಟೂತ್‌ಪಿಕ್‌ನ ಮೇಲ್ಭಾಗವನ್ನು (ಚಿತ್ರದಲ್ಲಿ ತೋರಿಸಿರುವಂತೆ) ಹೆಬ್ಬೆರಳಿನಿಂದ ಹಿಡಿದುಕೊಳ್ಳಿ. ನಿಧಾನಕ್ಕೆ ಟೂತ್‌ಪಿಕ್ ಅನ್ನು ಮಧ್ಯದ ಬೆರಳು ಮತ್ತು ಉಂಗುರದ ಬೆರಳಿನ ನಡುವೆ ತೂರಿಸಿ. ಟೂತ್‌ಪಿಕ್ ಉಂಗುರದೊಳಗೆ ನೀಟಾಗಿ ಸೇರಿಕೊಳ್ಳಬೇಕು. ನೋಡುಗರಿಗೆ ಟೂತ್‌ಪಿಕ್ ಕಾಣಿಸಬಾರದು. ಪ್ರೇಕ್ಷಕರಿಗೆ ಅನುಮಾನ ಬಾರದಂತೆ ಕೈಯನ್ನು ಗಾಳಿಯಲ್ಲಿ ಅಲ್ಲಾಡಿಸುತ್ತಾ ಇರಿ.
ಪ್ರದರ್ಶನಕ್ಕೂ ಮುನ್ನ ಈ ಜಾದೂವನ್ನು ಪ್ರಯೋಗಿಸಿ, ಪ್ರದರ್ಶನದ ವೇಗ ಹೆಚ್ಚಿಸಿಕೊಳ್ಳಿ. ನೋಡುಗರಿಗೂ, ನಿಮಗೂ ಸ್ವಲ್ಪ ಅಂತರವಿದ್ದರೆ ಒಳ್ಳೆಯದು ಹಾಗೂ ಉಂಗುರ ಧರಿಸಿರುವುದರ ಬಗ್ಗೆ ನೋಡುಗರಿಗೆ ಸಂಶಯ ಮೂಡಬಾರದು.
ವಿನ್ಸೆಂಟ್ ಲೋಬೋ