Advertisement
ಸ್ವಾಮೀಜಿಗಳ ಪುರಪ್ರವೇಶ, ಉತ್ಸವ, ಯಾಗಶಾಲಾ ಪ್ರವೇಶ, ಪೂರ್ಣಾಹುತಿ ಮತ್ತಿತರ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯೊಂದಿಗೆ ನೆರವೇರಿದವು. ಈ ಬಾರಿ ವಾರಾಣಸಿ ಮಾದರಿಯಂತೆ ನದಿ ಸಂಗಮ ಸ್ಥಳದಲ್ಲಿ ಸಾರ್ವಜನಿಕ ಗಂಗಾಪೂಜೆ ಮತ್ತು ದೀಪಾರತಿ ವಿಶೇಷವಾಗಿತ್ತು. “ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ, ನಾಸ್ತಿಕ ಭಾವಬಿಟ್ಟು ಆಸ್ತಿಕ ಭಾವದಿಂದ ಹೋಗೋಣ ಎಂದು ಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.
Related Articles
Advertisement
ಮಂಗಳವಾರ ಮಾಘಶುದ್ಧ ವ್ಯಾಸ ಪೂರ್ಣಿಮೆ ಪ್ರಯುಕ್ತ ಬೆಳಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಕ್ಷೇತ್ರದತ್ತ ಹರಿದುಬಂದ ಭಕ್ತರು, ತ್ರಿವೇಣಿ ಸಂಗಮದಲ್ಲಿ ಮಿಂದು, ಅಗಸ್ತೇಶ್ವರ ಸ್ವಾಮಿ ಮತ್ತು ಗುಂಜಾ ನರಸಿಂಹಸ್ವಾಮಿ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ, ಧನ್ಯತೆಯಿಂದ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬೆಳಗ್ಗಿನಿಂದಲೇ ಪುಣ್ಯಾಹ, ಸಪ್ತನದೀತೀರ್ಥ ಕಲಶ ಪೂಜೆ, ಹೋಮ, ಕುಂಭಲಗ್ನದಲ್ಲಿ ಪೂರ್ಣಾಹುತಿ, ತ್ರಿವೇಣಿ ಸಂಗಮದಲ್ಲಿ ಕಲಶತೀರ್ಥ ಸಂಯೋಜನೆ ಮಾಡಲಾಯಿತು.
ಮಹೋದಯ ಪುಣ್ಯಸ್ನಾನಕ್ಕೆ ಮೀನಲಗ್ನದಲ್ಲಿ ಬೆಳಗ್ಗೆ 9.35 ರಿಂದ 9.50 ಹಾಗೂ ವೃಷಭ ಲಗ್ನದಲ್ಲಿ ಬೆಳಗ್ಗೆ 11.30 ರಿಂದ ಮಧ್ಯಾಹ್ನ 12ಗಂಟೆವರೆಗೆ ಅಭಿಜಿನ್ ಮುಹೂರ್ತ, ವಿಧಿ ಮುಹೂರ್ತ ಹಾಗೂ ವೇದ ಮುಹೂರ್ತಗಳನ್ನು ನಿಗದಿಪಡಿಸಲಾಗಿತ್ತು. ಈ ಶುಭ ಮುಹೂರ್ತದಲ್ಲಿ ಸ್ವಾಮೀಜಿಗಳು, ಗಣ್ಯರು, ಭಕ್ತಾದಿಗಳು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು.
ಯುವಕರ ಸಂಭ್ರಮ: ಕುಂಭಮೇಳಕ್ಕೆ ಬಂದಿದ್ದ ಯುವಕರು ಮಧ್ಯಾಹ್ನದ ಬಿಸಿಲೇರುತ್ತಿದ್ದಂತೆ ನದಿಗೆ ಇಳಿದು ಈಜಾಡಿ ಸಂಭ್ರಮಿಸಿದರು. ಮಕ್ಕಳು, ಮಹಿಳೆಯರು, ವಯೋವೃದ್ಧರು ಸೇರಿದಂತೆ ಎಲ್ಲ ವಯೋಮಾದವರೂ ಕುಂಭಮೇಳದಲ್ಲಿ ಭಾಗವಹಿಸಿದ್ದರು. ಭಕ್ತರ ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿಯಿಂದ ಉಚಿತ ಬಸ್ ವ್ಯವಸ್ಥೆ ಹಾಗೂ ನಾಲ್ಕು ಕಡೆಗಳಲ್ಲಿ ತಾತ್ಕಾಲಿಕ ಬಸ್ ನಿಲ್ದಾಣದ ವ್ಯವಸ್ಥೆ ಮಾಡಲಾಗಿತ್ತು.
ಭಕ್ತರ ಸುರಕ್ಷತೆ ದೃಷ್ಟಿಯಿಂದ ನದಿಯ ವಿವಿಧ ಭಾಗಗಳಲ್ಲಿ ಯೋಧರು ತೆಪ್ಪದಲ್ಲಿ ಕುಳಿತು ಎಚ್ಚರಿಕೆವಹಿಸಿದ್ದರು. ಜೊತೆಗೆ ಅಗ್ನಿಶಾಮಕ ದಳ, ನುರಿತ ಈಜುಗಾರರನ್ನು ನಿಯೋಜಿಸಲಾಗಿತ್ತು. ಕುಂಭಮೇಳಕ್ಕೆ ಬರುವ ಭಕ್ತರಿಗಾಗಿ ಆದಿಚುಂಚನಗಿರಿ ಮಠ ಹಾಗೂ ಸುತ್ತೂರು ಮಠದಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ವಿಶೇಷ ಆಸಕ್ತಿ: ನದಿಯ ಸ್ವತ್ಛತೆಯ ಸಲುವಾಗಿ ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳಿಂದ ನದಿಗೆ ನೀರು ಬಿಟ್ಟಿದ್ದರಿಂದ ನಡುಗಡ್ಡೆಯ ಮೇಲೆ ನೀರು ನಿಂತು ಭಕ್ತರ ಓಡಾಟಕ್ಕೆ ಕೊಂಚ ಅಡೆತಡೆಯಾಗಿದ್ದು ಬಿಟ್ಟರೆ ಯಾವುದೇ ತೊಂದರೆ ಇಲ್ಲದೆ ಕುಂಭಮೇಳ ಮುಕ್ತಾಯಗೊಂಡಿತು. ಒಟ್ಟಾರೆ ಹಿಂದಿನ ಕುಂಭಮೇಳಗಳಿಗೆ ಹೋಲಿಸಿದರೆ ಈ ಬಾರಿ ಸರ್ಕಾರ ವಿಶೇಷ ಆಸಕ್ತಿವಹಿಸಿ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಟೊಂಕಕಟ್ಟಿ ನಿಂತು ದುಡಿದಿದ್ದರ ಫಲವಾಗಿ 11ನೇ ಕುಂಭಮೇಳದ ಸಿದ್ಧತೆ ಅತ್ಯಂತ ವ್ಯವಸ್ಥಿತವಾಗಿದ್ದರ ಬಗ್ಗೆ ಭಕ್ತರಿಂದ ಮೆಚ್ಚುಗೆ ವ್ಯಕ್ತವಾಯಿತು.
3 ಲಕ್ಷಕ್ಕೂ ಅಧಿಕ ಭಕ್ತರಿಂದ ಪುಣ್ಯಸ್ನಾನ: ಮೂರು ದಿನಗಳ ಕುಂಭಮೇಳದಲ್ಲಿ ಮೊದಲ ದಿನ ಭಕ್ತರ ಸಂಖ್ಯೆ ಕಡಿಮೆಯಿತ್ತಾದರೂ ಇನ್ನುಳಿದ ಎರಡು ದಿನಗಳು ಭಕ್ತರು ಕಿಕ್ಕಿರಿದು ಸೇರಿದ್ದರು. ಮೂರು ದಿನಗಳಲ್ಲಿ ಅಂದಾಜು 3 ಲಕ್ಷಕ್ಕೂ ಹೆಚ್ಚು ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ. ಕುಂಭಮೇಳಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಗುಂಜಾ ನರಸಿಂಹಸ್ವಾಮಿ ದೇವಸ್ಥಾನದಿಂದ ಸಂಗಮದ ನಡುಗಡ್ಡೆಯವರೆಗೆ ಸೇನೆಯ ಯೋಧರು ನಿರ್ಮಿಸಿದ್ದ ತಾತ್ಕಾಲಿಕ ತೇಲುವ ಸೇತುವೆ ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ಆ ಸೇತುವೆಯ ಮೇಲೆ ಓಡಾಡಿ, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
* ಗಿರೀಶ್ ಹುಣಸೂರು