Advertisement

ಮೌನವಾಯಿತು ಮಗ್ಗ

12:55 PM Aug 20, 2019 | Suhan S |

ಬೆಳಗಾವಿ: ರೈತರು ಹಾಗೂ ನೇಕಾರರು ದೇಶದ ಎರಡು ಕಣ್ಣುಗಳು ಎನ್ನಲಾಗುತ್ತದೆ. ನೈಸರ್ಗಿಕ ವಿಕೋಪ ಈ ಬಾರಿ ಇವೆರಡೂ ಕಣ್ಣುಗಳಲ್ಲಿ ಈಗ ಬರೀ ನೋವು ತುಂಬಿಸಿದೆ. ಎರಡೂ ಕಣ್ಣುಗಳಲ್ಲಿ ವಿಶ್ವಾಸದ ಹೊಳಪು ಮತ್ತು ನೋಟ ಮಾಯವಾಗಿದೆ.

Advertisement

ದಿನಪೂರ್ತಿ ಕಟಕಟ ಶಬ್ದ ಮಾಡುತ್ತಲೇ ಇರುತ್ತಿದ್ದ ಮಗ್ಗಗಳು ನಿಶಬ್ದವಾಗಿವೆ. ಮಗ್ಗಗಳ ಜಾಗವನ್ನು ಕೆಸರು ಮತ್ತು ಕಸಕಡ್ಡಿ ಆವರಿಸಿದೆ.

ಈಗ ನೀರು ಇವರ ಪಾಲಿಗೆ ದಾಹ ತಣಿಸುವ ಅಮೃತವಾಗಲಿಲ್ಲ. ಬದಲಾಗಿ ಹೊಟ್ಟೆಯ ಮೇಲಿನ ತಣ್ಣೀರಾಯಿತು. ಉಪಜೀವನದ ಆಧಾರವನ್ನೇ ಕಳೆದುಕೊಳ್ಳುವಂತೆ ಮಾಡಿತು. ಒಬ್ಬರು ಹೊಟ್ಟೆ ತುಂಬಿಸಿದರೆ, ಇನ್ನೊಬ್ಬರು ಮಾನ ಮುಚ್ಚುವವರು. ಆದರೆ ಇವರಿಬ್ಬರೂ ತಮ್ಮ ಮಾನ ಮುಚ್ಚಿಕೊಳ್ಳಲು ಪರದಾಡಬೇಕಾದ ಶೋಚನೀಯ ಸ್ಥಿತಿಯಲ್ಲಿದ್ದಾರೆ. ಒಮ್ಮೆಲೇ ನುಗ್ಗಿಬಂದ ನೀರು ಭದ್ರ ಬದುಕನ್ನೇ ಅಲ್ಲಾಡಿಸಿದೆ. ಮೈಮೇಲೆ ಬರೆ ಬಿದ್ದಿದೆ.

ಇದು ಬೆಳಗಾವಿ ಜಿಲ್ಲೆಯ ಮಲಪ್ರಭಾ ನದಿ ತಟದಲ್ಲಿರುವ ರಾಮದುರ್ಗ ಹಾಗೂ ಸವದತ್ತಿ ತಾಲೂಕಿನ ವಿವರ. ಸುದೀರ್ಘ‌ ವರ್ಷಗಳ ನಂತರ ಈ ಎರಡೂ ತಾಲೂಕಿನ ಜನರು ಮಲಪ್ರಭೆಯ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ. ಮಲಪ್ರಭೆಯ ಮುನಿಸಿನಿಂದ ಇಲ್ಲಿಯ ನೇಕಾರರು ಹಾಗೂ ರೈತರು ಅಂಜಿ ಕುಳಿತಿದ್ದಾರೆ. ನೀರು ಎಂದರೆ ಬೆಚ್ಚಿಬೀಳುತ್ತಾರೆ.

ಈಗ ಪ್ರವಾಹ ಇಳಿದಿದೆ. ಎರಡು ವಾರಗಳ ಕಾಲ ನಿಶಬ್ದವಾಗಿದ್ದ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ದಿನಸಿ ವ್ಯಾಪಾರದ ಅಂಗಡಿಕಾರರು ಎಂದಿನಂತೆ ಅಂಗಡಿ ತೆರೆದು ಕುಳಿತಿದ್ದಾರೆ. ತರಕಾರಿ ಮಾರುವವರು, ಹಾಲು,ಬೆಣ್ಣೆ ,ಮೊಸರು ಮಾರುವವರು ತಮ್ಮ ವ್ಯಾಪಾರ ಆರಂಭಿಸಿದ್ದಾರೆ. ಗ್ಯಾರೇಜ್‌ ಮಾಲೀಕ ಗಾಡಿಗಳ ರಿಪೇರಿ ಮಾಡುತ್ತಿದ್ದಾನೆ. ಹೀಗೆ ಎಲ್ಲರೂ ತಮ್ಮ ಉದ್ಯೋಗಕ್ಕೆ ಮರಳಿದರೂ ಖರೀದಿ ಮಾಡಲು ಜನರೇ ಇಲ್ಲ.

Advertisement

ವಿದ್ಯುತ್‌ ಮಗ್ಗಗಳ ಮೇಲೆ ದಿನಪೂರ್ತಿ ಸೀರೆ ನೇಯುವ ನೇಕಾರರ ಮತ್ತು ಹೊಲಗದ್ದೆಗಳಿಗೆ ಹೋಗಿ ಅಷ್ಟಿಷ್ಟು ತರಕಾರಿ ಬೆಳೆದು ಪೇಟೆಗೆ ತಂದು ಮಾರಿ ಉಪಜೀವನ ನಡೆಸುವ ರೈತರ ಬದುಕು ಮಾತ್ರ ಹಳಿಗೆ ಬಂದಿಲ್ಲ.

ರಾಮದುರ್ಗ, ಸವದತ್ತಿ ಹಾಗೂ ಬೆಳಗಾವಿ ತಾಲೂಕಿನಲ್ಲಿ 600 ಕ್ಕೂ ಹೆಚ್ಚು ಮಗ್ಗಗಳು ಮತ್ತೆ ಕೆಲಸಕ್ಕೆ ಬಾರದಷ್ಟು ಹಾಳಾಗಿವೆ. ಇದನ್ನೇ ನಂಬಿಕೊಂಡಿದ್ದ ಬದುಕು ಮೂರಾಬಟ್ಟೆ ಆಗಿದೆ. ಈ ಎರಡೂ ವರ್ಗಗಳು ಸಾವಿರಾರು ಮನೆಗಳ ಜೊತೆಗೆ ಹೊಟ್ಟೆ ಹೊರೆಯುವ ತಮ್ಮ ಮೂಲಾಧಾರವನ್ನೇ ಕಳೆದುಕೊಂಡಿವೆ.

ವಾರವೆಲ್ಲ ದುಡಿದು ವಾರಾಂತ್ಯದಲ್ಲಿ ಮಾಲಿಕನಿಂದ ಕೂಲಿ ಪಡೆದು ಶನಿವಾರವೋ, ರವಿವಾರವೋ ಸಂತೆ ಮಾಡಿದಾಗಲೇ ನೇಕಾರನ ಕುಟುಂಬದ ಹೊಟ್ಟೆ ತುಂಬಲು ಸಾಧ್ಯ. ಆದರೆ ಕನಸಿನಲ್ಲಿಯೂ ನಿರೀಕ್ಷೆ ಮಾಡದಿದ್ದ ನೆರೆ ಎಲ್ಲವನ್ನೂ ಅಯೋಮಯ ಮಾಡಿದೆ. ಸವದತ್ತಿ ತಾಲೂಕಿನ ಮುನವಳ್ಳಿ, ರಾಮದುರ್ಗ ತಾಲೂಕಿನ ಸುರೇಬಾನ, ಹಲಗತ್ತಿ, ಶಿವಪೇಟೆ, ರಾಮದುರ್ಗದ ವಿಠuಲ ಪೇಟೆ ಮತ್ತಿತರ ಕಡೆಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಮಗ್ಗಗಳು ಅಕ್ಷರಶಃ ಸ್ತಬ್ಧವಾಗಿವೆ. ಇಡಿ ನೇಕಾರ ಓಣಿಯೇ ಮೌನವಾಗಿದೆ. ಮೊದಲೇ ಮನೆ ಮಠ ಕಳೆದುಕೊಂಡಿರುವ ಸಾವಿರಾರು ನೇಕಾರರು ಸದ್ಯ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದು ಅಲ್ಲಿಂದ ಹೊರಬಂದರೆ ಹೋಗುವುದೆಲ್ಲಿ ಎಂಬ ಚಿಂತೆಯಲ್ಲಿದ್ದಾರೆ. ದುಡಿಯಬೇಕೆಂದರೆ ಮಗ್ಗಗಳೇ ಇಲ್ಲ. ಎಲ್ಲವೂ ಸರ್ವನಾಶವಾಗಿವೆ.

ಸೊಸೈಟಿ, ಬ್ಯಾಂಕ್‌, ಲೇವಾದೇವಿದಾರರ ಹತ್ತಿರ ಸಾಲ ಮಾಡಿ ಒಂದೊಂದು ಮಗ್ಗಕ್ಕೆ ಒಂದು ಲಕ್ಷದಂತೆ ಮೂರು ಮಗ್ಗಗಳನ್ನು ಕೂಡಿಸಿದ್ದೇವೆ. ಮನೆಯ ಮೂರೂ ಜನ ಹಗಲು ರಾತ್ರಿ ದುಡಿಯುತ್ತಿದ್ದೇವೆ. ವಾರದಲ್ಲಿ ಸುಮಾರು ಆರೇಳು ಸೀರೆ ಮಾಡಿ ಮಾರಾಟ ಮಾಡುತ್ತೇವೆ. ಆದರೆ ಈಗ ನೆನಸಿಕೊಳ್ಳಲೂ ಭಯವಾಗುತ್ತದೆ. ಮನೆಯ ಜೊತೆಗೆ ಬದುಕೇ ಕಳಚಿ ಬಿದ್ದಿದೆ.

ಮನೆಯೂ ಹೋಯಿತು. ಮಗ್ಗಗಳೂ ಹೋದವು. ಜೀವ ಅಲ್ಲಾಡುತ್ತಿದೆ. ಈಗ ನಮಗೆ ಯಾವ ದಾರಿಯೂ ಕಾಣುತ್ತಿಲ್ಲ. ದೇವರೇ ಕೈಹಿಡಿದು ಎತ್ತಬೇಕು ಎಂದು ಸಾವಿತ್ರಿ ಹುಲ್ಲೂರ ಹೇಳುವಾಗ ಕಣ್ಣೀರು ಒಂದೇ ಸಮನೆ ಸುರಿಯುತ್ತಿತ್ತು.

ನೆರೆ ಹಾವಳಿಯಿಂದ ಬೆಳಗಾವಿ ಜಿಲ್ಲೆಯಲ್ಲಿ ಸಾಕಷ್ಟು ಮಗ್ಗಗಳು ನೀರಲ್ಲಿ ಮುಳುಗಿ ಹಾಳಾಗಿವೆ. ನೇಕಾರರಿಗೆ ಮೊಟ್ಟ ಮೊದಲು ಈ ಮಗ್ಗಗಳನ್ನು ಸುಸ್ಥಿತಿಗೆ ತರುವುದು ಬೇಕಾಗಿದೆ.ಅವರ ಕೈಗಳಿಗೆ ಕೆಲಸ ದೊರೆತು ವಾರದ ಸಂತೆ ನಡೆಯಬೇಕಾದರೆ ಇದು ಬಹಳ ಅತ್ಯವಶ್ಯ. ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬೆಳಗಾವಿಗೆ ಬಂದಾಗ ನೇಕಾರರ ಬಗ್ಗೆ ಸಾಂತ್ವನದ ಮಾತುಗಳನ್ನು ಹೇಳಿದ್ದಾರೆ. ಈ ಸಾಂತ್ವನದ ಮಾತುಗಳು ಹೆಚ್ಚಿನ ಪರಿಹಾರದ ರೂಪದಲ್ಲಿ ಬರಬೇಕು ಎಂಬುದು ನೇಕಾರರ ಆಶಯ.

ನೇಕಾರರ 100 ಕೋಟಿ ರೂ.ಸಾಲ ಮನ್ನಾ ಮಾಡಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರೆ.ಆದರೆ ಕೇವಲ ಸಹಕಾರ ಬ್ಯಾಂಕುಗಳ ಸಾಲಕ್ಕೆ ಮಾತ್ರ ಇದು ಅನ್ವಯಿಸುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ರಾಷೀr್ರಕೃತ ಬ್ಯಾಂಕುಗಳ ಸಾಲವನ್ನೂ ಸಹ ಮನ್ನಾ ಮಾಡಲೇಬೇಕಾಗಿದೆ. ಇಲ್ಲವಾದರೆ ಈಗಿನ ಸ್ಥಿತಿಯಲ್ಲಿ ನೇಕಾರರು ಸಾಲ ತುಂಬುವುದಂತೂ ಅಸಾಧ್ಯದ ಮಾತೇ ಸರಿ ಎಂಬುದು ನೇಕಾರರ ಅಳಲು.

ಆನ್ನದಾತನ ಸ್ಥಿತಿಯೂ ಭೀಕರ: ರೈತರ ಸ್ಥಿತಿಯೂ ಇದಕ್ಕಿಂತ ಬೇರೆಯಾಗಿಲ್ಲ. ದೇಶದ ಬೆನ್ನೆಲುಬು ಎಂದು ಕರೆಸಿಕೊಳ್ಳುವ ಅನ್ನದಾತದ ಬೆನ್ನು ನೆರೆಯಿಂದ ಮುರಿದು ಹೋಗಿದೆ. ನದಿಗುಂಟ ಇರುವ ಜಮೀನುಗಳಲ್ಲಿ ಬೆಳೆಗಳ ಬದಲು ರಾಶಿ ರಾಶಿ ತಾಜ್ಯವಸ್ತು ಕಾಣುತ್ತಿವೆ. ಎತ್ತರಕ್ಕೆ ಬೆಳೆದು ನಿಂತಿದ್ದ ಬಾಳೆ, ಕಬ್ಬು, ತರಕಾರಿ ಮೊದಲಾದ ಬೆಳೆಗಳು ನೀರಿನ ಒಡಲು ಸೇರಿವೆ.

ನನ್ನ 70 ವರ್ಷದ ಜೀವನದಲ್ಲಿ ಹಿಂದೆಂದೂ ಈ ರೀತಿಯ ಅನಾಹುತ ನೋಡಿರಲಿಲ್ಲ. ಈಗ ಏನು ಮಾತನಾಡಬೇಕು ಗೊತ್ತಾಗುತ್ತಿಲ್ಲ. ಯಾರನ್ನು ದೂಷಿಸಬೇಕು ಎಂದು ಹೊಳೆಯುತ್ತಿಲ್ಲ. ಪರಿಹಾರ ಕೇಂದ್ರಕ್ಕೆ ಬಂದಿರುವ ನನಗೆ ಮರಳಿ ಊರಿಗೆ ಹೋಗಲು ಹೆದರಿಕೆಯಾಗುತ್ತಿದೆ. ನೀರಿನಲ್ಲಿ ಕೊಚ್ಚಿಹೋಗಿರುವ ಹೊಲಗಳ ಕಡೆಗೆ ಹೋಗಲು ಧೈರ್ಯ ಬರುತ್ತಿಲ್ಲ. ನೆರೆಯಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದೇನೆ ಎಂದು ರಾಮದುರ್ಗ ತಾಲೂಕಿನ ರೈತ ಬಸಪ್ಪ ಹೊಸಮನಿ ಹೇಳುತ್ತಾರೆ.

ಎರಡು ತಿಂಗಳ ಹಿಂದಷ್ಟೇ ಹೊಲಗಳಿಗೆ ನೀರು ಕೊಡಿ ಎಂದು ಕಳಕಳಿಯಿಂದ ಬೇಡಿಕೊಂಡಿದ್ದ ರೈತಾಪಿ ಜನ ಈಗ ಪ್ರವಾಹದಿಂದ ಹಾಳಾದ ಬೆಳೆಗಳಿಗೆ ಪರಿಹಾರ ಕೊಡಿ. ಅದಕ್ಕಿಂತ ಮೊದಲು ನಮಗೆ ಎರಡು ಹೊತ್ತು ಊಟ, ಇರಲು ಮನೆ ಕೊಡಿ ಎಂದು ಅಂಗಲಾಚುತ್ತಿದ್ದಾರೆ.

ನೇಕಾರರ ಕಣ್ಣಲ್ಲಿ ಕಂಡಿದ್ದು ನೀರಲ್ಲ, ರಕ್ತ ಮಲಪ್ರಭೆಯ ಪ್ರವಾಹ ಇಳಿದ ಮೇಲೆ ಮಗ್ಗಗಳ ಸ್ಥಿತಿ ಊಹಿಸಲೂ ಅಸಾಧ್ಯವಾಗಿದೆ. ಅವುಗಳನ್ನೇ ಜೀವನಾಧಾರ ಮಾಡಿಕೊಂಡಿರುವ ಸಾವಿರಾರು ನೇಕಾರ ಕುಟುಂಬಗಳ ಕಣ್ಣಲ್ಲಿ ಕಂಡಿದ್ದು ನೀರಲ್ಲ, ರಕ.್ತ ಇದು ನಿಜಕ್ಕೂ ಕರುಳು ಹಿಂಡುವ ಸ್ಥಿತಿ. ಮಗ್ಗಗಳ ಮೇಲೆ ದಪ್ಪವಾಗಿ ಮೆತ್ತಿಕೊಂಡಿದ್ದ ಕೆಸರು. ನೀರಿನಲ್ಲಿ ಹರಿದುಬಂದ ಕಸ ರಾಶಿ ನೋಡಿದಾಗ ನೇಕಾರರಷ್ಟೇ ಅಲ್ಲ ಅಲ್ಲಿಗೆ ಹೋದವರಿಗೂ ಒಂದು ಕ್ಷಣ ನಂಬಲಾಗದಂಥ ಸ್ಥಿತಿ. ದಿಕ್ಕು ತಪ್ಪಿದಂತಿದ್ದ ನೇಕಾರರು ಈ ಮಗ್ಗಗಳ ಮೇಲೆ ಮುಂದೆ ಕೆಲಸ ಸಾಧ್ಯವೇ ಎನ್ನುವ ಮಾತಿಲ್ಲದ ನೋಟ. ಇವು ನಿಜವಾಗಿಯೂ ಮಗ್ಗಗಳೇ ಎಂಬ ಅನುಮಾನ ಮೂಡಿದ್ದು ಸುಳ್ಳಲ್ಲ. ಇಂಥ ಒಂದು ಮಗ್ಗದ ಬೆಲೆ ಒಂದಕ್ಕೆ ಒಂದರಿಂದ ಒಂದೂವರೆ ಲಕ್ಷ. ಸದ್ಯ ರಿಪೇರಿ ಮಾಡಿಸುತ್ತೇವೆಂದರೆ ಐವತ್ತು ಸಾವಿರವಾದರೂ ಬೇಕು. ಬಿಂಬ್‌ ಗೆ 11000, ಮೋಟರ್‌ ಗೆ 5000, ಬಾಬಿನ್‌ಗೆ3000, ರಿಪೇರಿಗೆ 3000 . ಬೆಜ, ಚೋಪ, ಡಿಸೈನ್‌, ವೈಪನ್‌, ವೈಸೆಟ್, ಸಲಾಯಿ ಗುಂಡ ಮತ್ತಿತರ ಸಾಮಗ್ರಿ ಸೇರಿ 50 ಸಾವಿರ ರೂ.ಬೇಕೇ ಬೇಕು. ಈ ಹಣವನ್ನು ಎಲ್ಲಿಂದ ಹೊಂದಿಸಬೇಕು ಎಂಬುದು ತಿಳಿಯುತ್ತಿಲ್ಲ ಎನ್ನುತ್ತಾರೆ ಆತಂಕದಿಂದ ಮುನವಳ್ಳಿಯ ಶಂಕರ ಹುಲ್ಲೂರ.
•ಕೇಶವ ಆದಿ
Advertisement

Udayavani is now on Telegram. Click here to join our channel and stay updated with the latest news.

Next