Advertisement
ಮಂಗಳೂರು ವಿ.ವಿ.ಯಲ್ಲಿ ಈ ಮೊದಲು ಕ್ರೀಡಾ ನೀತಿಯೊಂದನ್ನು ರಾಜ್ಯದಲ್ಲೇ ಮೊದಲ ಬಾರಿಗೆ ರಚಿಸಲಾಗಿತ್ತು. ಇದೀಗ ಅದೇ ಮಾದರಿಯಲ್ಲಿ ಸಾಂಸ್ಕೃತಿಕ ನೀತಿ ಜಾರಿಗೆ ತರಲಾಗುತ್ತಿದೆ. ಉಭಯ ಜಿಲ್ಲೆಗಳು ಹಾಗೂ ಕೊಡಗಿಗೆ ಸಂಬಂಧಿಸಿ ಸಾಂಸ್ಕೃತಿಕ ಕಲೆಗಳಿಗೆ ಶಾಸ್ತ್ರೋಕ್ತ ಚೌಕಟ್ಟು ರಚಿಸಿ, ವಿದ್ಯಾರ್ಥಿಗಳಿಗೆ ಅವಕಾಶ ಒದಗಿಸಿ, ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವುದು ಇದರ ಹಿಂದಿನ ಉದ್ದೇಶ.
ಶಿವಮೊಗ್ಗ ಕುವೆಂಪು ವಿ.ವಿ., ಹಾವೇರಿಯ ಜಾನಪದ ವಿ.ವಿ., ವಿಜಯಪುರದ ಮಹಿಳಾ ವಿ.ವಿ.ಗಳ ಕ್ಯಾಂಪಸ್ ಸೇರಿದಂತೆ ವಿವಿಧ ವಿ.ವಿ.ಗಳಲ್ಲಿ ಅಲ್ಲಿನ ಸ್ಥಳೀಯ ಜಾನಪದ ಕಲೆ, ಸಂಸ್ಕೃತಿಗೆ ಸಂಬಂಧಿಸಿದ ಕಲಾಕೃತಿ ಪ್ರದರ್ಶಿಸುವ ಮೂಲಕ ಸಾಂಸ್ಕೃತಿಕ ಅಸ್ತಿತ್ವವನ್ನು ತೋರಿಸಲಾಗಿದೆ. ಅದೇ ಮಾದರಿಯನ್ನು ಇಲ್ಲಿಯೂ ಅನುಸರಿಸುವಂತೆ ಸಮಿತಿ ಶಿಫಾರಸು ಮಾಡಿದ್ದು, ಆಡಳಿತ ಕಚೇರಿ, ಗ್ರಂಥಾಲಯ, ವಿಜ್ಞಾನ ಬ್ಲಾಕ್‌ನ ಎದುರು, ವಿಶ್ವವಿದ್ಯಾನಿಲಯ ಪ್ರವೇಶ ಸ್ಥಳ ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ಕರಾವಳಿಯ ಯಕ್ಷಗಾನ, ಕಂಬಳ, ಹುಲಿವೇಷ, ಭೂತಕೋಲ ಹಾಗೂ ಕೊಡಗು ಜಿಲ್ಲೆಗೆ ಸಂಬಂಧಿಸಿದ ಫೈಬರ್ ಗ್ಲಾಸ್ ಕಲಾಕೃತಿಗಳನ್ನು ಪ್ರದರ್ಶಿಸಲು ಉದ್ದೇಶಿಸಲಾಗಿದೆ.
Related Articles
ಮೂರು ಜಿಲ್ಲೆಗಳಲ್ಲಿ 215 ಕಾಲೇಜುಗಳು ವಿ.ವಿ.ಯ ಸಂಯೋಜನೆಗೆ ಒಳಪಟ್ಟಿದ್ದು, ಸುಮಾರು 1 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಕೊಣಾಜೆ ಮಂಗಳಗಂಗೋತ್ರಿ ವಿ.ವಿ. ಕ್ಯಾಂಪಸ್‌ನಲ್ಲಿ 40 ಶೈಕ್ಷಣಿಕ ಕಾರ್ಯಕ್ರಮಗಳು, 28 ವಿಭಾಗಗಳು ಸೇರಿ 2,500 ವಿದ್ಯಾರ್ಥಿಗಳಿದ್ದಾರೆ. ಬಹುತೇಕ ವಿದ್ಯಾರ್ಥಿಗಳಿಗೆ ನೃತ್ಯ, ನಟನೆ, ಹಾಡುಗಾರಿಕೆ, ಯಕ್ಷಗಾನ ಮೊದಲಾದವುಗಳಲ್ಲಿ ಆಸಕ್ತಿಯಿದ್ದರೂ ಸೂಕ್ತ ತರಬೇತಿಯಿಲ್ಲದೆ ಅವಕಾಶ ವಂಚಿತರಾಗುತ್ತಿದ್ದಾರೆ. ಇಂತಹ ವಿದ್ಯಾರ್ಥಿಗಳನ್ನು ಗುರುತಿಸಿ ತರಬೇತಿ ನೀಡಿ ಅವರನ್ನು ಮುನ್ನೆಲೆಗೆ ತರುವುದು ವಿಶ್ವವಿದ್ಯಾಲಯದ ನೈತಿಕ ಹೊಣೆಗಾರಿಕೆ. ಅದಕ್ಕೆ ಪೂರಕವಾಗಿ ಸಾಂಸ್ಕೃತಿಕ ನೀತಿ ಕೆಲಸ ಮಾಡಲಿದೆ ಎನ್ನುತ್ತಾರೆ ಕುಲಪತಿ ಪ್ರೊ| ಯಡಪಡಿತ್ತಾಯರು.
Advertisement
ಫೆಲೋಶಿಪ್ ಭರತನಾಟ್ಯ, ಯಕ್ಷಗಾನ, ಕರಾವಳಿ-ಕೊಡಗಿನ ಜಾನಪದ ಕಲೆಗಳಲ್ಲಿ ಆಸಕ್ತಿ ಇದ್ದವರನ್ನು ಆಯಾ ಕಾಲೇಜಿನವರು ಗುರುತಿಸಿ ಕೊಟ್ಟರೆ, ತರಬೇತಿ ಕೊಟ್ಟು ಸಾಂಸ್ಕೃತಿಕ ರಂಗದಲ್ಲಿ ಮಿಂಚುವಂತೆ ಮಾಡುವುದು ಅಥವಾ ವಿ.ವಿ. ಮಟ್ಟದ ಸಾಂಸ್ಕೃತಿಕ ಹಬ್ಬಗಳಲ್ಲಿ ಪ್ರತಿಭಾ ಪ್ರದರ್ಶನ ನೀಡುವ ವಿದ್ಯಾರ್ಥಿಗಳನ್ನು ಗುರುತಿಸಿ, ಆಯ್ದ 10 ವಿದ್ಯಾರ್ಥಿಗಳಿಗೆ ಫೆಲೋಶಿಪ್ ನೀಡುವುದು ನೀತಿಯಲ್ಲಿದೆ. ಕೆಲವರಿಗೆ ಉಚಿತ ತರಬೇತಿ ನೀಡುವುದು ಯೋಜನೆಯಲ್ಲಿ ಸೇರಿದೆ. ಸಾಂಸ್ಕೃತಿಕ ನೀತಿಯ ಕರಡು ಬಹುತೇಕ ಸಿದ್ಧವಾಗಿದೆ. ಇದನ್ನು ಅಂತಿಮಗೊಳಿಸುವ ಮೊದಲು ಏನಾದರೂ ಸೇರ್ಪಡೆ ಅಥವಾ ತೆಗೆಯಬೇಕಾದ ವಿಚಾರಗಳಿವೆಯೇ ಎಂದು ಸಾಂಸ್ಕೃತಿಕ ರಂಗದ ಪ್ರಮುಖರ ಜತೆಗೆ ಚರ್ಚೆ ನಡೆಸಲಾಗುವುದು. ಮಾತ್ರವಲ್ಲದೆ ಶೀಘ್ರ ಇದರ ಪ್ರತಿಯನ್ನು ವಿ.ವಿ.ಯ ವೆಬ್‌ಸೈಟ್‌ನಲ್ಲಿ ಹಾಕಿ ಸಾರ್ವಜನಿಕರಿಂದಲೂ ಸಲಹೆ ಸೂಚನೆ ಪಡೆಯಲಾಗುವುದು.
– ಪ್ರೊ| ಪಿ.ಎಸ್. ಯಡಪಡಿತ್ತಾಯ, ಕುಲಪತಿ, ಮಂಗಳೂರು ವಿಶ್ವವಿದ್ಯಾನಿಲಯ – ಭರತ್ ಶೆಟ್ಟಿಗಾರ್