ಕನ್ನಡದಲ್ಲಿ ಈಗ ಕಂಟೆಂಟ್ ಆಧರಿತ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿದೆ. ಅದಕ್ಕೆ ಪೂರಕವಾಗಿ ಕಂಟೆಂಟ್ ಸಿನಿಮಾಗಳು ಗೆಲುವಿನ ನಗೆ ಬೀರುತ್ತಿದೆ. ಇದು ಚಿತ್ರರಂಗಕ್ಕೆ ಹೊಸದಾಗಿ ಬರುವ ಅನೇಕರಿಗೆ ಪ್ರೇರಣೆಯಾಗುತ್ತಿರುವುದಂತೂ ಸುಳ್ಳಲ್ಲ. ಇದೇ ಪ್ರೇರಣೆಯಿಂದ ಚಿತ್ರವೊಂದು ತಯಾರಾಗಿ, ಬಿಡುಗಡೆಯ ಹಂತಕ್ಕೆ ಬಂದಿದೆ. ಅದು “ಮಗಳೇ’.
ಹೌದು, ಹೀಗೊಂದು ಕಂಟೆಂಟ್ ಅನ್ನು ನಂಬಿಕೊಂಡು ಸಿನಿಮಾವೊಂದು ತಯಾರಾಗಿದ್ದು, ಏ.21ರಂದು ತೆರೆಗೆ ಬರುತ್ತಿದೆ. ಮೊದಲ ಹಂತವಾಗಿ ಈ ಚಿತ್ರದ ಟ್ರೇಲರ್ ಹಾಗೂ ಹಾಡು ಬಿಡುಗಡೆಯಾಗಿದೆ. ಸೋಮಶೇಖರ್ ಈ ಸಿನಿಮಾದ ನಿರ್ದೇಶಕರು. ಇವರಿಗಿದು ಚೊಚ್ಚಲ ಸಿನಿಮಾ. ಈ ಹಿಂದೆ ಅನೇಕ ನಿರ್ದೇಶಕರ ಜೊತೆ ಕೆಲಸ ಮಾಡಿರುವ ಅನುಭವದೊಂದಿಗೆ ಈಗ “ಮಗಳೇ’ ಚಿತ್ರವನ್ನು ಮಾಡಿದ್ದಾರೆ.
ಹೆತ್ತವರ ಹಾಗೂ ಮಕ್ಕಳ ನಡುವಿನ ಬಾಂಧ್ಯವದ ಕಥಾಹಂದರದ ಈ ಚಿತ್ರವನ್ನು “ಜೆಡ್ ನೆಟ್ ಕಮ್ಯುನಿಕೇಷನ್’ ಲಾಂಛನದ ಅಡಿಯಲ್ಲಿ ನಿರ್ಮಾಪಕ ಪ್ರವೀಣ್ ನಿರ್ಮಿಸುತ್ತಿದ್ದು, ಇವರಿಗೆ ಜಪಾನ್‌ನ ಮ್ಯಾಕಿಮ್ ಹಾಗೂ ಅವರ ಸ್ನೇಹಿತರ ಸಾಥ್ ನೀಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಸೋಮಶೇಖರ್, “ಇದು ಕಂಟೆಂಟ್ ಆಧರಿತ ಸಿನಿಮಾ.
ನಾವು ಸಂಪೂರ್ಣ ಹೊಸಬರು. ಎಲ್ಲರ ಬೆಂಬಲದೊಂದಿಗೆ ಈ ಸಿನಿಮಾ ಮಾಡಿದ್ದೇವೆ. ಇವತ್ತಿನ ಪಾಲಕರು ಮಗಳ ಜೊತೆ ಹೇಗಿರಬೇಕು, ಎಷ್ಟು ಸೂಕ್ಷ್ಮವಾಗಿರಬೇಕು ಎಂಬ ಅಂಶದೊಂದಿಗೆ ಈ ಸಿನಿಮಾ ಮಾಡಿದ್ದೇವೆ. ಸಿನಿಮಾ ಬಿಡುಗಡೆ ಮಾಡಲು ಕಷ್ಟಪಡುತ್ತಿದ್ದಾಗ ಜಪಾನ್‌ನ ಮ್ಯಾಕಿನ್ ಹಾಗೂ ಅವರ ಸ್ನೇಹಿತರು ಬೆಂಬಲವಾಗಿ ನಿಂತರು. ಅವರ ಸಹಕಾರದಿಂದ ಈಗ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ. ನಮ್ಮ ಆಡಿಯೋವನ್ನು ಪಿಆರ್‌ಕೆ ಬಿಡುಗಡೆ ಮಾಡಿದೆ. ಒಂದು ಹೊಸ ಪ್ರಯೋಗದ ಚಿತ್ರವಾಗಿ “ಮಗಳೇ’ ಇಷ್ಟವಾಗುತ್ತದೆ ಎಂಬ ವಿಶ್ವಾಸವಿದೆ’ ಎಂದರು.
ಮಡಿಕೇರಿ, ಶುಂಠಿಕೊಪ್ಪ, ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ರೇ. ನೂ. ಸೂರಿ ಛಾಯಾಗ್ರಹಣ, ಎ.ಬಿ.ಎಂ. ಸಂಗೀತ, ಪ್ರಶಾಂತ್ ಗುಣಕಿ ಸಾಹಿತ್ಯ, ಕೆಂಪರಾಜ್ ಸಂಕಲನವಿದ್ದು, ಚಿತ್ರ ನಿರ್ದೇಶಕ ಸೋಮಶೇಖರ್ ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆಯನ್ನು ಬರೆದಿದ್ದಾರೆ.
ಇನ್ನು ಚಿತ್ರದಲ್ಲಿ ಗುರುರಾಜಶೆಟ್ಟಿ , ಬಿಂದು ರಕ್ಷಿಧಿ, ಸುಪ್ರಿತಾ ರಾಜ್, ಗ್ರೀಷ್ಮ ಶ್ರೀಧರ್, ಬಿಷನ್ ಶೆಟ್ಟಿ, ನೀನಾಸಂ ನವೀನ್ ಕುಮಾರ್ ಮುಂತಾದವರು ಅಭಿನಯಿಸಿದ್ದು, ಪತ್ರಿಕಾಗೋಷ್ಟಿಯಲ್ಲಿ ತಮ್ಮ ಅನುಭವ ಹಂಚಿಕೊಂಡರು.