ಕೆಲವು ಸಿನಿಮಾಗಳು ಯಾವುದೇ ಸ್ಟಾರ್ ನಟ-ನಟಿಯರು ಇಲ್ಲದಿದ್ದರೂ ತನ್ನ ಕಂಟೆಂಟ್ ಮೂಲಕ ಗಮನ ಸೆಳೆಯುತ್ತವೆ. ಹೀಗೆ ಗಮನ ಸೆಳೆದ ಸಿನಿಮಾಗಳು ಮುಂದೆ ಚಿತ್ರಮಂದಿರಗಳಲ್ಲಿ ಗೆದ್ದು ನಗೆ ಬೀರಿದ ಉದಾಹರೆಣೆಗಳು ಸಾಕಷ್ಟಿವೆ. ಈಗ ಇದೇ ಸಾಲಿಗೆ ಸೇರ್ಪಡೆಯಾಗುತ್ತಿರುವ ಸಿನಿಮಾ “ಮಗಳೇ’. ಈ ಚಿತ್ರ ಇಂದು ತೆರೆಕಾಣುತ್ತಿದೆ.
ಕಂಟೆಂಟ್ ಅನ್ನು ನಂಬಿಕೊಂಡು, ಹೊಸ ಕಾನ್ಸೆಪ್ಟ್ನೊಂದಿಗೆ ತಯಾರಾಗಿರುವ “ಮಗಳೇ’ ಸಿನಿಮಾದ ಟ್ರೇಲರ್ ಹಾಗೂ ಒಂದು ಹಾಡು ಕೆಲವು ದಿನಗಳ ಹಿಂದಷ್ಟೇ ಬಿಡುಗಡೆಯಾಗಿತ್ತು. ತಂದೆ-ಮಗಳ ಬಾಂಧವ್ಯ ಹಾಗೂ ಪೋಷಕರು ಹಾಗೂ ಮಗಳ ಸುತ್ತ ನಡೆಯುವ ಕಥಾಹಂದರವನ್ನು ಹೊಂದಿರುವ ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಚಿತ್ರತಂಡ ಖುಷಿಯಾಗಿದೆ. ಈ ಚಿತ್ರವನ್ನು ಸೋಮು ಕೆಂಗೇರಿ ನಿರ್ದೇಶಿಸಿದ್ದಾರೆ. ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆಯನ್ನು ಬರೆದಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ಸೋಮು, “ನಮ್ಮದು ಸಂಪೂರ್ಣ ಹೊಸಬರ ತಂಡ. ಎಲ್ಲರ ಸಹಕಾರದೊಂದಿಗೆ ಈ ಸಿನಿಮಾ ಮಾಡಿದ್ದೇವೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಹಾಗೂ ಹಾಡು ಬಿಡುಗಡೆಯಾಗಿದ್ದು, ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರದೊಳಗೊಂದು ಗಟ್ಟಿ ಕಂಟೆಂಟ್ ಇದೆ ಎಂಬ ಮಾತು ಕೇಳಿಬರುತ್ತಿದೆ’ ಎನ್ನುತ್ತಾರೆ. ಇವತ್ತು ಕಂಟೆಂಟ್ ಸಿನಿಮಾಗಳು ಪ್ರೇಕ್ಷಕ ಜೈಕಾರ ಹಾಕುತ್ತಿರುವುದರಿಂದ ತಮ್ಮ ಸಿನಿಮಾವನ್ನೂ ಇಷ್ಟಪಡುತ್ತಾನೆ ಎಂಬ ವಿಶ್ವಾಸ ಚಿತ್ರತಂಡಕ್ಕಿದೆ. ಸಿನಿಮಾ ಬಿಡುಗಡೆ ಮಾಡಲು ಕಷ್ಟಪಡುತ್ತಿದ್ದಾಗ ಜಪಾನ್‌ನ ಮ್ಯಾಕಿನ್ ಹಾಗೂ ಅವರ ಸ್ನೇಹಿತರು ಬೆಂಬಲವಾಗಿ ನಿಂತರು. ಅವರ ಸಹಕಾರದಿಂದ ಈಗ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ. ನಮ್ಮ ಆಡಿಯೋವನ್ನು ಪಿಆರ್‌ಕೆ ಬಿಡುಗಡೆ ಮಾಡಿದೆ ಎನ್ನುವುದು ತಂಡದ ಮಾತು.
ಮಡಿಕೇರಿ, ಶುಂಠಿಕೊಪ್ಪ, ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ರೇ. ನೂ. ಸೋಮ್ ಛಾಯಾಗ್ರಹಣ, ಎ.ಬಿ.ಎಂ. ಸಂಗೀತ, ಪ್ರಶಾಂತ್ ಗುಣಕಿ ಸಾಹಿತ್ಯ, ಕೆಂಪರಾಜ್ ಸಂಕಲನವಿದ್ದು, ಚಿತ್ರ ನಿರ್ದೇಶಕ ಸೋಮಶೇಖರ್ ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆಯನ್ನು ಬರೆದಿದ್ದಾರೆ.
ಇನ್ನು ಚಿತ್ರದಲ್ಲಿ ಗುರುರಾಜ ಶೆಟ್ಟಿ, ಬಿಂದು ರಕ್ಷಿಧಿ, ಸುಪ್ರಿತಾ ರಾಜ್, ಗ್ರೀಷ್ಮ ಶ್ರೀಧರ್, ಬಿಷನ್ ಶೆಟ್ಟಿ, ನೀನಾಸಂ ನವೀನ್ ಕುಮಾರ್ ಮುಂತಾದವರು ಅಭಿನಯಿಸಿದ್ದಾರೆ. ಈ ಚಿತ್ರವನ್ನು “ಜೆಡ್ ನೆಟ್ ಕಮ್ಯುನಿಕೇಷನ್’ ಲಾಂಛನದ ಅಡಿಯಲ್ಲಿ ನಿರ್ಮಾಪಕ ಪ್ರವೀಣ್ ನಿರ್ಮಿಸುತ್ತಿದ್ದು, ಇವರಿಗೆ ಜಪಾನ್‌ನ ಮ್ಯಾಕಿಮ್ ಹಾಗೂ ಅವರ ಸ್ನೇಹಿತರು ಸಾಥ್ ನೀಡಿದ್ದಾರೆ.