ಮಾಗಡಿ: ಮಂಚನಬೆಲೆ ಜಲಾಯದಿಂದ ಮಾಗಡಿ ಪಟ್ಟಣಕ್ಕೆ ಪೂರೈಕೆಯಾಗುತ್ತಿರುವ ಕುಡಿಯುವ ನೀರಿನ ಪೈಪ್ ವಿ.ಜಿ.ದೊಡ್ಡಿ ಮಂಚನಬೆಲೆ ಮಾರ್ಗಮಧ್ಯೆದಲ್ಲಿ ಹೊಡೆದು ಹೋಗಿದ್ದು, ಪುರಸಭೆಯ ನಿರ್ಲಕ್ಷ್ಯತನದಿಂದ ನಿತ್ಯ ಸಾವಿರಾರು ಲೀಟರ್ ನೀರು ಪೋಲಾಗುತ್ತಿದೆ.
ನೀರು ಪೋಲಾಗುವುದರ ಜೊತೆಗೆ ರಸ್ತೆಯೂ ಗುಂಡಿ ಬಿದ್ದು, ಅಲ್ಲಿ ನೀರು ಶೇಖರಣೆಯಾಗಿ ರಸ್ತೆ ಹಾಳಾಗುತ್ತಿದೆ. ಎಂದು ಪುರಸಭೆಯ ನಿರ್ಲಕ್ಷ್ಯತನದ ವಿರುದ್ಧ ಮಂಚನಬೆಲೆ ಮತ್ತು ವಿಜಿದೊಡ್ಡಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಗಡಿ ತಾಲೂಕಿನ ಮಂಚನಬೆಲೆ ಜಲಾಶಯದಿಂದ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ನೀರಿನ ಪೈಪ್ ಅಲ್ಲಲ್ಲಿ ಹೊಡೆದು ಹೋಗಿರುವುದರಿಂದ ಕಲುಷಿತ ನೀರು ಪಟ್ಟಣಕ್ಕೆ ಪೂರೈಕೆಯಾಗುತ್ತಿದೆ ಎಂಬ ದೂರು ಪುರನಾಗರಿಕರಿಂದ ಕೇಳಿ ಬರುತ್ತಿದೆ.
ಹನಿ ನೀರು ಅಮೂಲ್ಯ ಮಿತವಾಗಿ ನೀರನ್ನು ಬಳಸಿ ಎಂದು ಮಾರುದ್ಧ ಭಾಷಣ ಬಿಗಿಯುವ ಅಧಿಕಾರಿಗಳಿಗೆ ನಿತ್ಯ ಸಾವಿರಾರು ಲೀಟರ್ ನೀರು ರಸ್ತೆ ಮೇಲೆ ಹರಿದು ಪೋಲಾಗುತ್ತಿದ್ದರೂ, ಸಹ ಕಂಡು ಕಾಣದಂತೆ ಪುರಸಭೆ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಮಂಚನಬೆಲೆ ಗ್ರಾಮಸ್ಥರಾದ ಸುನಿಲ್, ಜಗದೀಶ್, ಉಮೇಶ್, ಪ್ರವೀಣ್ ಆರೋಪಿಸಿದ್ದಾರೆ.
ಶೀಘ್ರದಲ್ಲಿಯೇ ಹೊಡೆದು ಹೋಗಿರುವ ನೀರಿನ ಪೈಪ್‌ನ್ನು ದುರಸ್ತಿಪಡಿಸಿ ನೀರು ಪೋಲಾಗುವುದನ್ನು ತಡೆಯಬೇಕು. ಇಲ್ಲದಿದ್ದರೆ, ಮಂಚನಬೆಲೆ ಜಲಾಶಯದ ಪಂಪ್ ಹೌಸ್‌ಗೆ ಮುತ್ತಿಗೆ ಹಾಕುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ಪುರಸಭೆ ಎಂಜಿನಿಯರ್ ಪ್ರಶಾಂತ್ ಕುಮಾರ್ ಶೆಟ್ಟಿ ಅವರು, ಮಂಚನಬೆಲೆ ವಿ.ಜಿ.ದೊಡ್ಡಿ ಮಾರ್ಗದಲ್ಲಿ ದನಗಾಹಿಗಳು ದನಗಳಿಗೆ ನೀರು ಕುಡಿಸಲು ಪೈಪ್‌ಗ್ಳನ್ನು ಹೊಡೆದು ಹಾಕುತ್ತಿದ್ದಾರೆ. ಎರಡು ಬಾರಿ ಪೈಪ್ ದುರಸ್ತಿಪಡಿಸಿ ಮರು ಜೋಡಣೆ ಮಾಡಲಾಗಿದೆ. ಆದರೂ ಸಹ ದನಗಾಹಿಗಳು ನೀರಿಗಾಗಿ ಪೈಪ್‌ಗ್ಳನ್ನು ತೂತು ಮಾಡುತ್ತಿದ್ದಾರೆ ಎಂಬ ದೂರಿದ್ದು, ಈ ಸಂಬಂಧ ಪುರಸಭೆ ವತಿಯಿಂದ ಆರೋಪಿಗಳ ಪತ್ತೆಗೆ ಪೊಲೀಸರಿಗೂ ಸಹ ದೂರು ನೀಡಲಾಗಿದೆ.
ಆದರೂ ಕಿಡಿಗೇಡಿಗಳು ಪೈಪ್‌ಗ್ಳನ್ನು ಹೊಡೆದು ತೂತು ಮಾಡಿ ನೀರು ರಸ್ತೆ ಮೇಲೆ ಹರಿಯುವಂತೆ ಮಾಡುತ್ತಿದ್ದಾರೆ. ಮುಂಜಾಗ್ರತಾ ಕ್ರಮದಿಂದ ಕಾಂಕ್ರೀಟ್ ಹಾಕಿ ಪೈಪ್ ಅಳವಡಿಸಲಾಗುವುದು|
ಅದೇ ರೀತಿ ಕಿಡಿ ಗೇಡಿ ಗಳು ಪೈಪ್ ಹೊಡೆದು ಹಾಕುವ ಪ್ರಯತ್ನ ಮಾಡಿದರೆ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾಗಿ ತಿಳಿಸಿದ್ದಾರೆ.