ರಾಮನಗರ: ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಂದ ಗಿಫ್ಟ್ ಕಾರ್ಡ್ ಹಂಚಿಕೆ ವಿಚಾರವಾಗಿ ಕಾಂಗ್ರೆಸ್ ಶಾಸಕರಿಬ್ಬರು ಭಿನ್ನ ಹೇಳಿಕೆ ನೀಡಿದ್ದಾರೆ. ಗಿಫ್ಟ್ ಕಾರ್ಡ್ ವಿಚಾರದಲ್ಲಿ ಮಾಗಡಿ ಶಾಸಕ ಎಚ್ ಸಿ ಬಾಲಕೃಷ್ಣ ಉಲ್ಟಾ ಹೊಡೆದಿದ್ದಾರೆ.
ನಾವು ಯಾವುದೇ ಗಿಫ್ಟ್ ಕಾರ್ಡ್ ನೀಡಿಲ್ಲ. ನನಗೂ ಅದಕ್ಕೂ ಸಂಬಂಧ ಇಲ್ಲ ಎಂದು ಬಾಲಕೃಷ್ಣ ಹೇಳಿದ್ದಾರೆ.
ಮತ್ತೊಂದೆಡೆ ರಾಮನಗರ ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್ ಅವರು, ಗಿಫ್ಫ್ ಕಾರ್ಡ್ ನೀಡಿದ್ದೇವೆ. ಶೀಘ್ರದಲ್ಲೆ ಎಲ್ಲರಿಗೂ ಗಿಫ್ಟ್ ನೀಡುತ್ತೇವೆ ಎಂದಿದ್ದರು.
ಮಾಗಡಿ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಗಿಫ್ಟ್ ಕಾರ್ಡ್ ಆಮಿಷ ನೀಡಿ ಗೆದ್ದಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಶಾಸಕ ಹೆಚ್.ಸಿ.ಬಾಲಕೃಷ್ಣ, ನಮ್ಮ ವಿರೋಧಿಗಳೇ ಇದನ್ನು ಮಾಡಿರಬಹುದು. ಕುಮಾರಸ್ವಾಮಿ ಅದರೆ ಕಾರ್ಡ್ ಮಾಡಿಸಿ ಹಂಚಿಸಿರಬಹುದು.! ನಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಸ್ವತಃ ಕುಮಾರಸ್ವಾಮಿ ಅವರೇ ನಾನು ಚನ್ನಪಟ್ಟಣದಲ್ಲಿ ದುಡ್ಡು ಹಂಚಿದ್ದೇನೆ ಎಂದಿದ್ದಾರೆ. ಅವರ ಮೇಲೆ ಚುನಾವಣಾ ಆಯೋಗ ಸುಮೋಟೊ ಕೇಸ್ ದಾಖಲಿಸುತ್ತಾ? ನಾವು ಕೊಟ್ಟಿದ್ದು ಪ್ರಚಾರದ ಕಾರ್ಡ್ ಅಷ್ಟೇ. ಗಿಫ್ಟ್ ಕಾರ್ಡ್ ಬಗ್ಗೆ ನನಗೆ ಗೊತ್ತಿಲ್ಲ. ಯಾರು ಹಂಚಿದ್ದಾರೊ ಅವರನ್ನು ಕೇಳಿ ಎಂದರು.
ಮಾಜಿ ಸಿಎಂ ಹೀಗೆ ಹೇಳಬಾರದು: ಕರೆಂಟ್ ಬಿಲ್ ಕಟ್ಟಬೇಡಿ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಮಾತನಾಡಿದ ಬಾಲಕೃಷ್ಣ, ಒಬ್ಬ ಮಾಜಿ ಸಿಎಂ ಆಗಿ ಹೀಗೆ ಮಾತನಾಡಬಾರದು. ಅವರು ಸಿಎಂ ಆದ 24 ಗಂಟೆ ಒಳಗೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುತ್ತೇನೆ ಎಂದಿದ್ದರು, ಆದರೆ 24 ಗಂಟೆ ಒಳಗೆ ಸಾಲಮನ್ನಾ ಮಾಡಿದ್ದರಾ? ನಾವು ಕೊಟ್ಟಿರುವ ಎಲ್ಲಾ ಭರವಸೆ ಈಡೇರಿಸುತ್ತೇವೆ. ಅದಕ್ಕೆ ಸ್ವಲ್ಪ ಕಾಲಾವಕಾಶ ಬೇಕು ಅಂದಿದ್ದೇವೆ. ನಮ್ಮಲ್ಲಿ ಸಮರ್ಥ ಸಿಎಂ ಹಾಗೂ ಡಿಸಿಎಂ ಇದ್ದಾರೆ. ಮಂತ್ರಿಮಂಡಲದಲ್ಲಿ ಅನುಭವಿ ಸಚಿವರಿದ್ದಾರೆ. ಅರ್ಹ ಫಲಾನುಭವಿಗಳಿಗೆ ಎಲ್ಲಾ ಗ್ಯಾರಂಟಿ ಸಿಗಲಿದೆ ಎಂದರು.
ಇದನ್ನೂ ಓದಿ:YSRTP ಮೈತ್ರಿ; ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ ವೈ.ಎಸ್.ಶರ್ಮಿಳಾ
ಸಚಿವರಾಗಲು ಯೋಗಬೇಕು: ಸಚಿವ ಸಂಪುಟದಲ್ಲಿ ಸ್ಥಾನ ಸಿಗದ ವಿಚಾರಕ್ಕೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವರಾಗಲು ಯೋಗ ಬೇಕು, ಸದ್ಯಕ್ಕೆ ನಮಗೆ ಯೋಗ ಇಲ್ಲ. ಶಾಸಕನಾಗಲು ಜನರ ಆಶಿರ್ವಾದ ಬೇಕು, ಮಂತ್ರಿಯಾಗಲು ಹೈಕಮಾಂಡ್ ಆಶೀರ್ವಾದಬೇಕು. ಜನರ ಆಶೀರ್ವಾದ ಸಿಕ್ಕಿರುವುದರಿಂದ ಶಾಸಕನಾಗಿದ್ದೇನೆ. ಮೊದಲು ಜನರ ಸಮಸ್ಯೆಗಳನ್ನ ಬಗೆಹರಿಸುತ್ತೇನೆ. ಈಗ ಕೇವಲ ಶಾಸಕನಾಗಿ ಎಲ್ಲಾ ಮಂತ್ರಿಗಳ ಬಳಿಯೂ ಹೋಗಿ ಅನುದಾನ ತರಬಹುದು. ನಾನು ಮಂತ್ರಿಯಾಗಿದ್ದರೆ ಕ್ಷೇತ್ರದ ಅಭಿವೃದ್ಧಿ ಕಷ್ಟವಾಗುತ್ತಿತ್ತು. ಮಂತ್ರಿಗಿರಿ ಕೊಟ್ಟಿದ್ದೇವೆ ಎಂದು ಬಾಯಿ ಕಟ್ಟಾಕಿಬಿಡ್ತಿದ್ದರು. ಆದರೆ ಈಗ ಯಾವುದೇ ಇಲಾಖೆಗೆ ಹೋದರೂ ಕೂತು ಕೆಲಸ ಮಾಡಿಸಿಕೊಂಡು ಬರುತ್ತೇನೆ ಎಂದು ಹೇಳಿದರು.