Advertisement

ಮಾಗಡಿ ಕೋಟೆ ಕಾಮಗಾರಿ ಅಪೂರ್ಣ

03:00 PM Oct 12, 2022 | Team Udayavani |

ಮಾಗಡಿ: ಪಟ್ಟಣದಲ್ಲಿನ ಐತಿಹಾಸಿಕ ನಾಡಪ್ರಭು ಕೆಂಪೇಗೌಡ ಗತವೈಭವದ ಕಾಲದ ಬೃಹತ್‌ ಕಲ್ಲಿನ ಕೋಟೆಯ ಜೀರ್ಣೋದ್ಧಾರದ ಕಾಮಗಾರಿ ಆರಂಭವಾಗಿ ಹಲವು ವರ್ಷಗಳೇ ಕಳೆದರೂ ಪೂರ್ಣಗೊಳ್ಳದೆ ನನೆಗುದಿಗೆ ಬಿದ್ದಿದ್ದು, ಇನ್ನಾದರೂ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ಷೇತ್ರದ ಜನಪ್ರತಿನಿಧಿಗಳು ಪ್ರಯತ್ನಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

ಕೋಟೆ ಹೆಬ್ಟಾಗಿಲಲ್ಲಿ ನಾಡಪ್ರಭುವನ್ನು ಪ್ರತಿಷ್ಠಾಪಿಸಿದರೆ ಮಾತ್ರ ಬೆಂಗಳೂರಿನಂತೆ ಮಾಗಡಿಯೂ ಅಭಿವೃದ್ಧಿ ಹೊಂದುವ ಎಲ್ಲ ಲಕ್ಷಣಗಳು ಕಾಣುತ್ತಿದ್ದು, ಪ್ರಾರಂಭವಾಗಿರುವ ಜೀರ್ಣೋದ್ಧಾರ ಕಾಮಗಾರಿಗೆ ಶೀಘ್ರದಲ್ಲೇ ಮುಕ್ತಿ ನೀಡಲು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂಬುದು ನಾಗರಿಕರ ಆಗ್ರಹವಾಗಿದೆ. ಬೆಂಗಳೂರನ್ನು ನಿರ್ಮಾಣ ಮಾಡಿದ್ದ ವಿಶ್ವಖ್ಯಾತಿ ಮಾಗಡಿಯ ಕೆಂಪೇಗೌಡರಿಗೆ ಸಲ್ಲುತ್ತದೆ. ಆದರೆ, ನಾಡನ್ನು ಆಳಿದ ಇತಿಹಾಸವುಳ್ಳ ಶಿಥಿಲ ಕೆಂಪೇಗೌಡರ ಕೋಟೆಯ ಜೀರ್ಣೋದ್ಧಾರ ಯಾವಾಗ ಎಂಬ ಪ್ರಶ್ನೆ ಪುರನಾಗರಿಕರನ್ನು ಕಾಡುತ್ತಿದೆ.

ಅನುದಾನವಿದ್ದರೂ ಅಭಿವೃದ್ಧಿಯಿಲ್ಲ: ಮಾಗಡಿ ಕೋಟೆಯ ಗೋಡೆಗಳ ಮೇಲೆ ಕುರುಚಲು ಗಿಡಗಳು ಸೇರಿದಂತೆ ಗಿಡಗಂಟಿಗಳು ಬೆಳೆಯಲು ಆರಂಭವಾಗಿದೆ. ಕೆಂಪೇಗೌಡ ಕಾಲದ ಪಳಯುಳಿಕೆಗಳನ್ನು ಜೀರ್ಣೋದ್ಧಾರಗೊಳಿಸುವ ಮೂಲಕ ಸಂರಕ್ಷಣೆ ಮಾಡಬೇಕು ಎಂಬ ಉದ್ದೇಶದಿಂದ ಕೆಂಪೇಗೌಡರ ಹೆಸರಿನಲ್ಲಿ ಅಭಿವೃದ್ಧಿ ಪ್ರಾಧಿಕಾರವೂ ಸಹ ರಚನೆಯಾಗಿ ಹಲವು ವರ್ಷಗಳೇ ಕಳೆದಿದೆ. ಅಲ್ಲದೆ, ಜೀರ್ಣೋದ್ಧಾರದ ಜೊತೆಗೆ ಅಭಿವೃದ್ಧಿಗಾಗಿ ಕೋಟ್ಯಂತರ ರೂ. ಅನುದಾನವೂ ಮಂಜೂರಾಗಿದೆ. ಆದರೂ, ಕೋಟೆಯ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ ಎಂಬ ಆರೋಪ ಜನರಿಂದ ಕೇಳಿಬರುತ್ತಿದೆ.

ಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ: ನಾಡನ್ನಾಳುವ ದೊರೆಗಳೆಲ್ಲರೂ ಕೆಂಪೇಗೌಡರ ಆದರ್ಶಗಳ ಮಾತನ್ನಾಡುತ್ತಾ ಆಡಳಿತ ನಡೆಸುತ್ತಿದ್ದಾರೆ. ಆದರೂ, ಇತಿಹಾಸ ಸಾರುವ ಕೆಂಪೇಗೌಡರ ಕಾಲದ ಕೋಟೆ- ಕೊತ್ತಲು, ಗುಡಿ- ಗೋಪುರಗಳು, ಕೆರೆ-ಕಟ್ಟೆ, ಬಾವಿಗಳು, ಕಲ್ಯಾಣಿಗಳು ಅಭಿವೃದ್ಧಿ ಕಾಣದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಕೋಟೆಯ ಜೀರ್ಣೋದ್ಧಾರದ ಕಾಮಗಾರಿ ಅಪೂರ್ಣವಾಗಿದೆ ಎಂಬ ಆರೋಪ ನಾಗರಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ದೂರದೃಷ್ಟಿಯುಳ್ಳ ಕೆಂಪೇಗೌಡರು ಬೃಹತ್‌ ಬೆಂಗಳೂರು ನಗರವನ್ನು ಸುಂದರವಾಗಿ ನಿರ್ಮಾಣ ಮಾಡಿದ್ದಲ್ಲದೆ, ಅನೇಕ ಜನೋಪಯೋಗಿ ಪೇಟೆಗಳನ್ನು ನಿರ್ಮಿಸಿ, ಎಲ್ಲಾ ವರ್ಗಗಳಿಗೂ ಸಾಮಾಜಿಕ ನ್ಯಾಯವನ್ನು ಕಲ್ಪಿಸಿದ್ದ ಕೀರ್ತಿಗೆ ಭಾಜನರಾಗಿದ್ದಾರೆ. ಅವರು ಜನರಿಗೆ ಅನುಕೂಲವಾಗುವಂತೆ ನಿರ್ಮಾಣ ಮಾಡಿರುವ ಕೆರೆಕಟ್ಟೆಗಳು, ಕೋಟೆಗಳು, ಕಲ್ಯಾಣಿಗಳು ಹೀಗೆ ವಿವಿಧ ರೀತಿಯ ಕಟ್ಟಣಗಳನ್ನು ಉಳಿಸಿ, ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.

Advertisement

ಅನುದಾನಕ್ಕೆ ಮನವಿ: ಕ್ಷೇತ್ರದ ಶಾಸಕ ಎ. ಮಂಜುನಾಥ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಕೋಟೆ ಜೀರ್ಣೋದ್ಧಾರದ ಮನವರಿಕೆ ಮಾಡಿಕೊಡುವ ಮೂಲಕ ವಿಶೇಷ ಅನುದಾನಕ್ಕೆ ಮನವಿ ಮಾಡಿದರೆ, ವಿಶೇಷ ಅನುದಾನ ಮಂಜೂರು ಆಗಬಹುದು. ಇದರಿಂದಾಗಿ ನಾಡಪ್ರಭು ಕೆಂಪೇಗೌಡರ ಐತಿಹಾಸಿಕ ಕೋಟೆಯ ಜೀರ್ಣೋದ್ಧಾರದ ಕಾಮಗಾರಿ ಪೂರ್ಣಗೊಳಿಸುವ ಸಾಧ್ಯತೆ ಹೆಚ್ಚಿದೆ ಎಂಬುದು ಕೆಲವರ ಅಭಿಪ್ರಾಯವಾಗಿದೆ.

ದಾಖಲೆ ಬರೆಯಿರಿ: ಮಾಗಡಿ ಬೃಹತ್‌ ಕೋಟೆಯ ಜೀರ್ಣೋದ್ಧಾರದ ಕಾಮಗಾರಿ ಪೂರ್ಣಗೊಳಿಸಿ, ವಿನೂತನ ರೂಪ ನೀಡುವ ಮೂಲಕ ಪ್ರವಾಸಿ ತಾಣವನ್ನಾಗಿಸಿದರೆ, ಮಾಗಡಿ ಪಟ್ಟಣದ ಸೌಂದರ್ಯವೂ ಹೆಚ್ಚಾಗುತ್ತದೆ. ಕೋಟೆ ಜೀರ್ಣೋ ದ್ಧಾರ ಮಾಡಿದ ಕೀರ್ತಿ ಎಚ್‌ಡಿಕೆ ಹಾಗೂ ಸ್ಥಳೀಯ ಶಾಸಕರಿಗೂ ಸಲ್ಲುತ್ತದೆ. ಇದೊಂದು ಇತಿಹಾಸದ ದಾಖಲೆಯಾಗುತ್ತದೆ ಎಂಬ ಆಶಯ ನಾಗರಿಕರದಾಗಿದೆ.

ಇನ್ನಾದರೂ ಸರ್ಕಾರ ಮತ್ತು ಜನಪ್ರತಿನಿಧಿ ಗಳು ಎಚ್ಚೆತ್ತುಕೊಂಡು ಇತಿಹಾಸ ಸಾರುವ ನಾಡಪ್ರಭು ಕೆಂಪೇಗೌಡರ ಗತಕಾಲದ ಕೋಟೆ ಜೀರ್ಣೋದ್ಧಾರ ಕಾಮಗಾರಿ ಪೂರ್ಣಗೊಳಿಸಲು ಮುಂದಾಗುವರೇ ಕಾದು ನೋಡಬೇಕಿದೆ. ಎಚ್‌ಡಿಕೆ ಸಿಎಂ ಆಗಿದ್ದಾಗ ಕ್ಷೇತ್ರದ ಶಾಸಕರಾಗಿದ್ದ ಎಚ್‌ .ಸಿ.ಬಾಲಕೃಷ್ಣ ಅವರು 18 ಕೋಟಿ ರೂ. ಅನುದಾನ ತಂದು ಕೋಟೆ ಜೀರ್ಣೋದ್ಧಾರ ಕಾಮಗಾರಿ ನಡೆಸಿದರು. ಬದಲಾದ ಸರ್ಕಾರದಿಂದ ಕಾಮಗಾರಿ ನನೆಗುದಿ ಬಿದ್ದಿದೆ. ಇಲ್ಲಿಯವರೆವಿಗೂ ಒಂದೇ ಒಂದು ಕಲ್ಲು ಜೋಡಿಸಿ, ಕಾಮಗಾರಿ ಪೂರ್ಣಗೊಳಿಸಲಿಲ್ಲ. ಈಗಿನ ಶಾಸಕರು ಇತ್ತ ಗಮನಹರಿಸಿ, ಅಗತ್ಯ ಅನುದಾನ ತಂದು ಪೂರ್ಣಗೊಳಸಬೇಕಿದೆ.  ರಾಜಣ್ಣ, ಪ್ರಗತಿಪರ ರೈತ

ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಕೋಟೆ ಕಾಮಗಾರಿ ಅಪೂರ್ಣವಾಗಿದೆ, ಇದಕ್ಕೆ ಖರ್ಚಾಗಿರುವ ಲೆಕ್ಕಪತ್ರ, ಅಂಕಿ- ಅಂಶಗಳನ್ನು ಪಡೆದು, ಮುಂದಿನ ಕ್ರಮ ಕೈಗೊಳ್ಳಲಾಗುವುದು. – ಎ.ಮಂಜುನಾಥ್‌, ಶಾಸಕ, ಮಾಗಡಿ

ಗತಕಾಲದ ಕೆಂಪೇಗೌಡರ ಕೋಟೆ ಸಂರಕ್ಷಣೆ ಮಾಡಲು ನಾಯಕರಿಗೆ ಸಮಯವಿಲ್ಲ. ಇಚ್ಛಾಶಕ್ತಿಯುಳ್ಳವರಿಂದ ಮಾತ್ರ ಕೆಂಪೇಗೌಡರು ಕಟ್ಟಿದ ಕೋಟೆ ಜೀರ್ಣೋದ್ಧಾರವಾಗುತ್ತದೆ. – ಕೃಷ್ಣಮೂರ್ತಿ, ಚಿಂತಕ

ದೀಪದ ಕೆಳಗೆ ಕತ್ತಲು ಎಂಬಂತೆ ಮಾಗಡಿ ಕೋಟೆ ಶುಕ್ರವಾರದ ಕುರಿ, ಮೇಕೆ ಸಂತೆಯಾಗಿದೆ. ರಾಷ್ಟ್ರೀಯ ಹಬ್ಬಗಳ ಆಚರಣೆ, ರಾಜಕಾರಣಿಗಳ ಸಭೆ ಸಮಾರಂಭಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆದರೂ, ಇಚ್ಛಾಶಕ್ತಿ ತೋರದ ರಾಜಕಾರಣಿಗಳಿಂದ ಕೋಟೆ ಅಭಿವೃದ್ಧಿ ಕಾಮಗಾರಿಅಪೂರ್ಣವಾಗಿದೆ. ಇದು ಜೀರ್ಣೋದ್ಧಾರಗೊಂಡರೆ ಮಾಗಡಿ ಐಸಿರಿಯಾಗಿ ಕಾಣಲಿದೆ.– ಗಿರೀಶ್‌, ಯುವ ಚಿಂತಕ

 

-ತಿರುಮಲೆ ಶ್ರೀನಿವಾಸ್‌

Advertisement

Udayavani is now on Telegram. Click here to join our channel and stay updated with the latest news.

Next