ಒಂದು ಕಡೆ, “ಕೋಟಿ-ಕೋಟಿ ಗಟ್ಟಲೆ ಪೋರ್ನ್ ವೆಬ್‌ಸೈಟ್ ಇದಾವಣ್ಣ. ಬರಿ ನಮ್ ದೇಶದಲ್ಲೆ 84 ಕೋಟಿ ಜನ ನೆಟ್ ಯೂಸ್ ಮಾಡೋರು ಇದಾರೆ. ಅದ್ರಲ್ಲಿ 46 ಕೋಟಿ ಜನ ಪೋರ್ನ್ ವೀಡಿಯೋಸ್ ನೋಡ್ತಾರೆ ಗೊತ್ತಾ…’ ಸೈಬರ್ ಕ್ರೈಂ ವಿಭಾಗ ಪೊಲೀಸ್ ಮಣಿ ಮಾಹಿತಿ ನೀಡುತ್ತಿದ್ದರೆ, ಮತ್ತೂಂದೆಡೆ ದಿವ್ಯಾಳನ್ನು ಹುಡುಕಿಕೊಂಡು ಹೊರಟ ಮೂವರಿಗೆ, ಮಹಿಳೆಯೊಬ್ಬಳು, “ನಂಗೆ ಗೊತ್ತಿರೋ, ಒಂದ್ ಗ್ಯಾಂಗ್ ಐತೆ ಒಂದ್ ಹತ್ತು-ಹದಿನೈದು ಜನ್ರ ಹತ್ರ ರೇಪ್ ಮಾಡ್ಸಿ ಆ ವಿಡಿಯೋನೆಲ್ಲ ಇಂಟರ್‌ನೆಟ್‌ಗೆ ಮಾರ್ತಾರೆ’ ಎಂಬ ಆಘಾತಕಾರಿ ಸುದ್ದಿಯನ್ನು ಕೊಡುತ್ತಾಳೆ.
ಇದು ಈ ವಾರ ತೆರೆಗೆ ಬಂದಿರುವ “ನಾನು ನಮ್ಮುಡ್ಗಿ ಖರ್ಚ್‌ಗೊಂದ್ ಮಾಫಿಯಾ’ ಚಿತ್ರದಲ್ಲಿ ಬರುವ ಎರಡು ದೃಶ್ಯಗಳ ಪ್ರಮುಖ ಸಂಭಾಷಣೆಗಳು. ಇಷ್ಟು ಹೇಳಿದ ಮೇಲೆ ಈ ಚಿತ್ರದ ಕಥಾಹಂದರದ ಬಗ್ಗೆ ಬಿಡಿಸಿ ಹೇಳಬೇಕಾದ ಅಗತ್ಯವಿಲ್ಲ. ಹೌದು, ಮೇಲಿನ ಸಂಭಾಷಣೆಯಲ್ಲಿರುವಂತೆ ಈ ಚಿತ್ರ ಪೋರ್ನೊಗ್ರಫಿ, ಸೈಬರ್ ಕ್ರೈಂ, ಗ್ಯಾಂಗ್‌ರೇಪ್, ಇಂಟರ್‌ನೆಟ್ ಸುತ್ತ ನಡೆಯುವಂಥದ್ದು.
ಚಿತ್ರದ ಟೈಟಲ್‌ನಲ್ಲೇ ಇರುವಂತೆ ಹುಡುಗ, ಹುಡುಗಿ, ಖರ್ಚಿಗಾಗಿ ನಡೆಯುವಂಥ ಮಾಫಿಯಾ ಸುತ್ತ ಇಡೀ ಚಿತ್ರದ ಕಥೆ ನಡೆಯುತ್ತದೆ. ಇತ್ತೀಚಿನ ವರ್ಷಗಳಲ್ಲಿ ಆಗಾಗ್ಗೆ ಸುದ್ದಿಯಾಗುವ ಸೈಬರ್ ಕ್ರೈಂ ಎಳೆಯೊಂದರ ಜೊತೆಗೆ ಎರಡು ಲವ್‌ಸ್ಟೋರಿಯನ್ನು ಪೋಣಿಸಿ ಪ್ರೇಕ್ಷಕರ ಮುಂದೆ ತಂದಿದ್ದಾರೆ ನಿರ್ದೇಶಕ ಅಮರ್ ಸಾಳ್ವ – ಚಲ. ಕನ್ನಡದಲ್ಲಿ ಇಂಥದ್ದೇ ಮಾಫಿಯಾವನ್ನು ಆಧಾರವಾಗಿಟ್ಟುಕೊಂಡು ಹಲವು ಚಿತ್ರಗಳು ಬಂದಿದ್ದರೂ, ಈ ಚಿತ್ರದಲ್ಲಿ ಆ ಮಾಫಿಯಾದ ಸ್ವರೂಪ ಸ್ವಲ್ಪ ಬದಲಾಗಿದೆ ಅಷ್ಟೇ.
ಪ್ರಸ್ತುತ ಗಂಭೀರ ಚರ್ಚೆಯ ಕಥಾವಸ್ತು ಚಿತ್ರದಲ್ಲಿದ್ದರೂ, ಅದು ನಿರೀಕ್ಷಿಸುವಷ್ಟು ಗಂಭೀರವಾಗಿ, ಪರಿಣಾಮಕಾರಿಯಾಗಿ ತೆರೆಮೇಲೆ ಬಂದಿಲ್ಲ. ಚಿತ್ರದ ಮೊದಲರ್ಧ ಮಂದಗತಿಯಲ್ಲಿ ಸಾಗಿದರೆ, ದ್ವಿತಿಯಾರ್ಧ ಅದರ ದುಪ್ಪಟ್ಟು ವೇಗ ಪಡೆದುಕೊಳ್ಳುತ್ತದೆ. ಚಿತ್ರಕಥೆ ಮತ್ತು ನಿರೂಪಣೆಯ ಬಗ್ಗೆ ನಿರ್ದೇಶಕರು ಇನ್ನಷ್ಟು ಗಮನ ಕೊಟ್ಟಿದ್ದರೆ ಚಿತ್ರ ಇನ್ನೂ ಪರಿಣಾಮಕಾರಿಯಾಗಿ ಬರುವ ಸಾಧ್ಯತೆಗಳಿದ್ದವು. ಒಂದು ಒಳ್ಳೆಯ ಕಥಾಹಂದರವನ್ನು ಪ್ರೇಕ್ಷಕರ ಮುಂದಿಡಲು ಹೊರಟಿರುವ ಚಿತ್ರ ತನ್ನ ನಿರೂಪಣೆ ಮತ್ತು ದೃಶ್ಯ ಸಂಯೋಜನೆಯಲ್ಲಿ ಎಡವಿದಂತಿದೆ.
ಇನ್ನು ಚಿತ್ರದ ಛಾಯಾಗ್ರಹಣ ನೀರಸವೆನಿಸುತ್ತದೆ. ಸಂಕಲನ ಕೂಡ ಮಂದಗತಿಯಲ್ಲಿ ಇರುವುದರಿಂದ ಚಿತ್ರದ ಸರಾಗ ಓಟಕ್ಕೆ ಬ್ರೇಕ್ ಬೀಳುತ್ತಲೇ ಇರುತ್ತದೆ. ಅದನ್ನು ಹೊರತುಪಡಿಸಿದರೆ, ಚಿತ್ರದಲ್ಲಿ ವಿಕ್ರಂ ವರ್ಮನ್ ಸಂಗೀತ ಸಂಯೋಜನೆಯ ಎರಡು ಹಾಡುಗಳು ಗುನುಗುವಂತಿದೆ. ಗೌತಮ್ ಶ್ರೀವತ್ಸ ಹಿನ್ನೆಲೆ ಸಂಗೀತ ಸನ್ನಿವೇಶಕ್ಕೆ ಪೂರಕವಾಗಿದೆ. ಚಿತ್ರದ ನಾಯಕ ಶ್ಯಾಂ ಸುಂದರ್ ಅಭಿನಯದಲ್ಲಿ ಇನ್ನಷ್ಟು ಪಳಗಬೇಕಿತ್ತು ಎನಿಸುತ್ತದೆ.
ಉಳಿದಂತೆ ಶ್ರದ್ಧಾ ಬೆಣಗಿ, ಅಮರ್ ಸಾಳ್ವ, ಅಶ್ವಿನಿ, ಕಿರಣ್, ಆಶಿಕಾ ಗೌಡ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇನ್ನುಳಿದ ಕೆಲವು ಪಾತ್ರಗಳು ಹಾಗೆ ಬಂದು ಹೀಗೆ ಹೋಗುವಂತಿರುವುದರಿಂದ ಅವುಗಳ ಬಗ್ಗೆ ಮಾತನಾಡುವಂತಿಲ್ಲ. ಒಟ್ಟಾರೆ ತೀರಾ ಹೊಸದಲ್ಲದಿದ್ದರೂ, “ನಾನು ನಮ್ಮುಡ್ಗಿ ಖರ್ಚ್‌ಗೊಂದ್ ಮಾಫಿಯಾ’ ಒಂದು ಒಳ್ಳೆಯ ಪ್ರಯತ್ನ ಎನ್ನಬಹುದು. ಸ್ವಲ್ಪ ನಿಧಾನವಾಗಿ, ಅಷ್ಟೇ ಸಮಾಧಾನವಾಗಿ ಚಿತ್ರನೋಡುವವರು “ನಾನು ನಮ್ಮುಡ್ಗಿ ಖರ್ಚ್‌ಗೊಂದ್ ಮಾಫಿಯಾ’ ಚಿತ್ರವನ್ನು ಒಮ್ಮೆ ನೋಡಿಬರಲು ಅಡ್ಡಿಯಿಲ್ಲ.
ಚಿತ್ರ: ನಾನು ನಮ್ಮುಡ್ಗಿ ಖರ್ಚ್‌ಗೊಂದ್ ಮಾಫಿಯಾ
ನಿರ್ದೇಶನ: ಅಮರ್ ಸಾಳ್ವ – ಚಲ
ನಿರ್ಮಾಣ: ಶ್ರೀನಿವಾಸ ಗೌಡ ಎನ್.ಸಿ
ತಾರಾಗಣ: ಶ್ಯಾಂ ಸುಂದರ್, ಶ್ರದ್ಧಾ ಬೆಣಗಿ, ಅಮರ್ ಸಾಳ್ವ, ಅಶ್ವಿನಿ, ಡಾ. ಮಹದೇವ್, ಕಿರಣ್, ಆಶಿಕಾ ಗೌಡ ಮತ್ತಿತರರು
* ಜಿ.ಎಸ್.ಕೆ ಸುಧನ್