ಅರಸೀಕೆರೆ: ಸಾರ್ವಜನಿಕರು ಕಡ್ಡಾಯ ವಾಗಿ ಮಾಸ್ಕ್ ಧರಿಸುವುದರೊಂದಿಗೆ ಸಾಮಾಜಿಕ ಅಂತರ ಕಾಪಾಡುವ ಮೂಲಕ ಕೋವಿಡ್ 19 ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಬೇಕು ಎಂದು ಜಿಲ್ಲಾ ಉಪ ವಿಭಾಧಿಕಾರಿ ಡಾ.ನವೀನ್‌ಭಟ್ ತಿಳಿಸಿದರು.
ನಗರದ ಸರ್ಕಾರಿ ಜೆ.ಸಿ.ಆಸ್ಪತ್ರೆ ಹಾಗೂ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ ನಂತರ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊರೊನಾ ಸೋಂಕು ತಡೆಗಟ್ಟುವಲ್ಲಿ ತಾಲೂಕು ಆಡಳಿತ ಉತ್ತಮ ಕಾರ್ಯ ನಿರ್ವಹಿಸುತಿರುವುರಿಂದ ಜಿಲ್ಲೆ ಗ್ರೀನ್ ಝೋನ್‌ನಲ್ಲಿದೆ.
ಜನಸಾಮಾನ್ಯರು ತಿರುಗಾಡದಂತೆ ಮುಂಜಾಗೃತಾ ಕ್ರಮವಾಗಿ ಪ್ರತಿ ಅಡ್ಡದಾರಿಗಳಿಗೆ ಬ್ಯಾರಿಕೇಡ್ ನಿರ್ಮಾಣ ಮಾಡಿ ಜನರು ಅನಾವಶ್ಯಕ ವಾಗಿ ತಿರುಗುವುದನ್ನು ತಡೆಗಟ್ಟುವುದು ನಗರದ ಎಲ್ಲಾ ವಾರ್ಡ್‌ಗಳಲ್ಲಿ ತರಕಾರಿ ಹಣ್ಣು, ಅಗತ್ಯ ವಸ್ತುಗಳ ಪೂರೈಕೆಗೆ ಕ್ರಮಕೈಗೊಳ್ಳಲು ಸೂಚಿಸಿದರು. ಮೇ 3ರ ವರೆಗೂ ಲಾಕ್ ಡೌನ್ ಜಾರಿಯಲ್ಲಿದ್ದು, ಕೃಷಿ ಚಟುವಟಿಕೆಗಳಲ್ಲಿ ಅವಕಾಶ ವಾಗಿ ಬೇಕಾಗುವ ಬಿತ್ತನೆ ಬೀಜ, ರಸ ಗೊಬ್ಬರ ಇತ್ಯಾದಿ ಪೂರಕ ವಸ್ತುಗಳ ಖರೀದಿಗೆ ನಗರಕ್ಕೆ ಬಂದಾಗ ಅವರಿಗೆ ಅನುಕೂಲವಾಗುವಂತೆ ಪೊಲೀಸ್ ಇಲಾಖೆಸಹಕರಿಬೇಕು, ಅಂತೆಯೇ ಎಲೆಕ್ಟ್ರೀಷಿಯನ್, ಪ್ಲಂಬರ್ ಸೇರಿದಂತೆ ಸ್ವಂತ ಉದ್ಯೋಗ ಮಾಡುವ ಹಲವರಿಗೆ ಪಾಸ್ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕೆಲವು ಸ್ಥಳಗಳಲ್ಲಿ ಜನರು ಅನಾವಶ್ಯಕ ವಾಗಿ ಗುಂಪುಕಟ್ಟಿಕೊಂಡು ಕುಳಿತುಕೊಳ್ಳು ವುದು ಹಾಗೂ ತಿರುಗಾಡುವುದು ಕಂಡು ಬಂದಲ್ಲಿ ಕಂಟ್ರೋಲ್ ರೂಂಗೆ ಸಾರ್ವಜನಿಕರು ಮಾಹಿತಿ ನೀಡಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಸಭೆಯಲ್ಲಿ ತಹಶೀಲ್ದಾರ್ ಸಂತೋಷ್ ಕುಮಾರ್, ತಾ ಪಂ ಇಒ ಎಸ್.ಪಿ. ನಟರಾಜ್, ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಪ್ಪ, ಸರ್ಕಾರಿ ಜೆ.ಸಿ.ಆಸ್ಪತ್ರೆ ವೈದ್ಯಾಧಿಕಾರಿ ಡಾ.ಕರಿಯಪ್ಪ ಪೌರಾಯುಕ್ತ ಕಾಂತರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.