ಮಂಡ್ಯ: ಕೆ.ಆರ್.ಪೇಟೆ ಪಟ್ಟಣದ ಹಳೇ ಕಿಕ್ಕೇರಿ ರಸ್ತೆಯು ಹಳ್ಳ, ಗುಂಡಿ ಗಳಿಂದ ಕೂಡಿದೆ. ಇದರಿಂದ ಪ್ರತಿ ದಿನ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರತಿನಿತ್ಯ ಸಾವಿರಾರು ಸಂಖ್ಯೆಯ ವಾಹನಗಳು ಸಂಚಾರ ಮಾಡುವ ಜನನಿಬಿಡ ರಸ್ತೆಯಾಗಿದ್ದು, ಈ ರಸ್ತೆಯಲ್ಲಿ ಬಸವೇಶ್ವರ ಚಿತ್ರ ಮಂದಿರ, ಬ್ಯಾಂಕ್‌ಗಳು, ಖಾಸಗಿ ಆಸ್ಪತ್ರೆಗಳು, ಅಂಗಡಿ -ಮುಂಗಟ್ಟುಗಳು, ವಾಣಿಜ್ಯ ಕಟ್ಟಡಗಳು, ವಿವಿಧ ಮಳಿಗೆಗಳಿದ್ದು, ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚಾರ ಮಾಡುತ್ತವೆ.
ಬೀದಿ ದೀಪಗಳು ಹಾಳು: ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಇರುವ ಮಸೀದಿಯಿಂದ ಟೌನ್‌ಕ್ಲಬ್‌ವರೆಗೆ ದ್ವಿಚಕ್ರ ವಾಹನಗಳನ್ನು ಚಲಾಯಿಸಲು ಎದುರಾಗುವ ಗುಂಡಿಗಳು ಸಾಕಷ್ಟು ಕಿರಿಕಿರಿ ಉಂಟು ಮಾಡುತ್ತದೆ. ಕಾರು, ಲಾರಿಗಳು ಸಂಚಾರ ಮಾಡಬೇಕಾದರೆ ಡ್ರೆçವರ್‌ಗಳ ಕಥೆಯಂತೂ ಹೇಳ ತೀರದಾಗಿದೆ. ಒಂದು ಗುಂಡಿಯನ್ನು ತಪ್ಪಿಸಲು ಹೋದರೆ ಮತ್ತೂಂದು ಗುಂಡಿಗೆ ವಾಹನದ ಚಕ್ರಗಳು ಇಳಿಯುತ್ತವೆ. ಅಷ್ಟರ ಮಟ್ಟಿಗೆ ರಸ್ತೆ ಹಾಳಾ ಗಿದೆ. ರಸ್ತೆಯ ಇಕ್ಕೆಲಗಳಲ್ಲಿರುವ ಬೀದಿ ದೀಪಗಳು ಕೆಟ್ಟು ನಿಂತಿರುವುದ ರಿಂದ ರಾತ್ರಿ ವೇಳೆಯಲ್ಲಿ ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಒಳ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆ ಬಂದಾಗ ಗುಂಡಿಗಳಲ್ಲಿ ನೀರು ನಿಲ್ಲುತ್ತದೆ. ಇದರಿಂದ ವಾಹನ ಸವಾರರಿಗೆ ರಸ್ತೆಯೇ ಗೋಚರಿಸು ವುದಿಲ್ಲ. ಇದರಿಂದ ವಾಹನ ಸವಾರರು ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿವೆ.
ಕಂಡೂ ಕಾಣದಂತೆ ವರ್ತನೆ: ಇದೇ ರಸ್ತೆಯಲ್ಲಿ ಸಚಿವ ನಾರಾಯಣಗೌಡ ಸೇರಿ ದಂತೆ ಜಿಪಂ ಸದಸ್ಯರು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರು, ಬ್ಯಾಂಕ್ ಉದ್ಯೋಗಿಗಳು, ವ್ಯಾಪಾರ ವಹಿವಾಟು ನಡೆಸುವವರು ಎಲ್ಲರೂ ಸಂಚಾರ ಮಾಡುತ್ತಿದ್ದರೂ ಕಂಡೂ ಕಾಣದಂತೆ ಇರುವುದು ಸಾರ್ವಜನಿಕರನ್ನು ಕೆರಳುವಂತೆ ಮಾಡಿದೆ.
ಅನುದಾನವಿದ್ದರೂ ಬಳಕೆ ಮಾಡಿಲ್ಲ: ಪಟ್ಟಣದ ಅಭಿವೃದ್ಧಿಗೆ ಕೋಟಿ ಕೋಟಿ ರೂ. ಅನುದಾನ ಬಂದಿದೆ. ಆದರೂ ರಸ್ತೆಯ ದುರಸ್ತಿಯನ್ನಾಗಲೀ ಅಥವಾ ಗುಂಡಿಗಳನ್ನು ಮುಚ್ಚದೇ ಇರುವುದು ಮಾತ್ರ ವಿಪರ್ಯಾಸ. ಪ್ರತಿನಿತ್ಯ ಸಾರ್ವಜನಿಕರು ಹಾಗೂ ವಾಹನ ಸವಾರರು ಹಿಡಿಶಾಪ ಹಾಕುತ್ತಿ ದ್ದಾರೆ. ಕೂಡಲೇ ಹೊಸ ರಸ್ತೆ ನಿರ್ಮಿಸಬೇಕು. ಇಲ್ಲವಾದಲ್ಲಿ ರಸ್ತೆಯ ಗುಂಡಿ ಗಳನ್ನಾದರೂ ಮುಚ್ಚಬೇಕು ಎಂದು ಸಾರ್ವಜನಿಕರು ಪುರಪಿತೃ ಗಳಿಗೆ ಹಾಗೂ ಪುರಸಭೆ ಮುಖ್ಯಾಧಿಕಾರಿಗೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ವಿಟಿಯು ಆನ್ ಲೈನ್- ಆಫ್ ಲೈನ್ ಪರೀಕ್ಷೆ ಗೊಂದಲ: ಮಹತ್ವದ ಆದೇಶ ನೀಡಿದ ಹೈಕೋರ್ಟ್
ಪಟ್ಟಣದ ಎಲ್ಲಾ ಬಡಾವಣೆಗಳಲ್ಲಿ ಯುಜಿಡಿ ಕಾಮಗಾರಿಯನ್ನು ಅಂತಿಮಗೊಳಿಸಿ, ನಂತರ ಹಳೇ ಕಿಕ್ಕೇರಿ ರಸ್ತೆ ಮತ್ತು ಹೊಸ ಕಿಕ್ಕೇರಿ ರಸ್ತೆಯನ್ನು ಸಂಪೂರ್ಣವಾಗಿ ಹೊಸದಾಗಿ ನಿರ್ಮಿಸಲಾಗುತ್ತದೆ. ಕೂಡಲೇ ಆ ಕಾಮಗಾರಿಗೆ ಚಾಲನೆ ನೀಡಲಿದ್ದೇವೆ.
ಸತೀಶ್ ಕುಮಾರ್, ಮುಖ್ಯಾಧಿಕಾರಿ, ಪುರಸಭೆ, ಕೆ.ಆರ್.ಪೇಟೆ